ಚಿಕ್ಕಮಗಳೂರು: ಜಾನಪದವೆಂದರೆ ಕೇವಲ ಮನರಂಜನೆಯಲ್ಲ. ಹೃದಯದ ಸಂಸ್ಕೃತಿ, ಅದು ಹೃದಯ ಮತ್ತು ಸಂಬಂಧಗಳನ್ನು ಬೆಸೆಯುತ್ತದೆ ಎಂದು ಸಾಹಿತಿ ಎಚ್.ಎಂ.ನಾಗರಾಜ ರಾವ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಮತ್ತು ಆಂಗ್ಲ ಸಾಹಿತ್ಯ ಕಲ್ಪನೆ ಹಾಗೂ ಭ್ರಮೆಯಿಂದ ರಚಿತವಾದುದು. ಜಾನಪದ ಸಾಹಿತ್ಯ ವಾಸ್ತವದ ನೆಲೆಗಟ್ಟಿನಲ್ಲಿದೆ. ನಮ್ಮ ಹಿರಿಯರು ತಮ್ಮ ಕೆಲಸದ ವೇಳೆ ಶ್ರಮವನ್ನು ಮರೆಯಲು ಕಟ್ಟಿ ಹಾಡಿದ ಸಾಹಿತ್ಯವೇ ಜಾನಪದ. ಅದು ನಮ್ಮ ಸಂಸ್ಕೃತಿಯ ತಾಯಿ ಬೇರು ಎಂದರು.
ಜಾನಪದ ಮತ್ತು ಹೆಳೆಯ ಹಾಡುಗಳು ಹಾಗೂ ಆಧುನಿಕ ಗೀತೆಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದ ಅವರು, ಜಾನಪದ ಬದುಕುವುದನ್ನು ಮತ್ತು ಸಂಸ್ಕಾರವನ್ನು ಕಲಿಸುತ್ತದೆ. ಅದರ ಒಗಟುಗಳು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಅದನ್ನು ಕಳೆದು ಕೊಂಡರೆ ನಾವು ಬದುಕು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಜಗತ್ತಿನೆದುರು ಬರಡಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್, ಆಧುನೀಕರಣದ ನಾಗಾಲೋಟದಲ್ಲಿ ಮರೆಯಾಗುತ್ತಿರುವ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಆ ಮೂಲಕ ಮುಂದಿನ ತಲೆಮಾರಿಗೆ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲ ಜಿ.ಎನ್. ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಗಾಯಕರು ಮತ್ತು ಶಿವಕುಮಾರ್ ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ಮೂಕಾಂಬಿಕ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಜರುಗಿತು. ಶಿಕ್ಷಕ ಕೆ.ಆರ್. ಜಗದೀಶ್, ಚಂದ್ರಶೆಟ್ಟಿ, ವತ್ಸಲಾ ಸತೀಶ್, ಹರಿಣಾಕ್ಷಿ ಪರಿಷತ್ತಿನ ಉಪಾಧ್ಯಕ್ಷ ಪರಸಪ್ಪ ಕೂಸನೂರ, ಚಂದ್ರಶೇಖರ್ ಉಪಸ್ಥಿತರಿದ್ದರು.