Advertisement

ಮುತ್ತಿನ ಕೂರಿಗೆ ಹದ ಮಾಡೋ ನನ ತಮ್ಮ!

11:16 AM Mar 27, 2022 | Team Udayavani |

ಯಾದಗಿರಿ: ಎಂಟ ಸೇರಿನ ಉಡಿಯ ಸೊಂಟಕ್ಕೆ ಕಟಗೊಂಡ ಭಂಟ ಬಿತ್ಯಾನ ಬಿಳಿಜ್ವಾಳ, ಭಂಟ ಬಿತ್ಯಾನ ಬಿಳಿಜ್ವಾಳ, ನನ ತಮ್ಮ ದಂಟ ಬೆಳೆದೈತೋ ಎಂಟ್‌ ಮೊಳ! ಹೀಗೆ ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಂತಿಪದ ಹಾಡುತ್ತಾ ಸಂಭ್ರಮಿಸುತ್ತಿರುವ ಹಿರಿಯರು ಒಂದೆಡೆ, ಮತ್ತೊಂದೆಡೆ ಹಂತಿಕಣದಲ್ಲಿ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತನವರು ಎತ್ತುಗಳನ್ನು ಹುರಿದುಂಬಿಸುತ್ತಿದ್ದರು.

Advertisement

ಇದು ಯಂತ್ರಗಳ ಯುಗ. ಏನಿದ್ದರೂ ಫಟಾಫಟ್‌ ಕೆಲಸ ಮುಗಿಯಬೇಕು ಎನ್ನುವ ಧೋರಣೆ ಎಲ್ಲರಲ್ಲೂ ಬೆಳೆಯುತ್ತಿದೆ. ಇದಕ್ಕೆ ರೈತರು ಹೊಲದಲ್ಲಿ ಕೈಗೊಳ್ಳುವ ರಾಶಿಯೂ ಹೊರತಾಗಿಲ್ಲ. ಆಧುನಿಕ ಯಂತ್ರಗಳ ಭರಾಟೆಯಲ್ಲಿ ರಾಶಿ ಕೆಲವೇ ಕ್ಷಣಗಳಲ್ಲಿ ಮುಗಿಯುತ್ತದೆ. ಇಂತಹ ಸಂದರ್ಭದಲ್ಲಿಯೂ ಚಿತ್ತಾಪುರ ತಾಲೂಕಿನ ನಾಲ್ವಾರ ಸಮೀಪದ ಸೂಗೂರು ಎನ್‌. ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಈ ಸಂಪ್ರದಾಯ ಜೀವಂತವಿಡಲು ಪ್ರಯತ್ನಿಸುತ್ತಾ ರೈತನ ಜೀವನಾಡಿಯಾಗಿರುವ ಜೋಡೆತ್ತುಗಳೊಂದಿಗೆ ಜೋಳದ ರಾಶಿಯ ಹಂತಿ ಸಂಪ್ರದಾಯ ಮುನ್ನಡೆಸುತ್ತಿದ್ದಾರೆ.

ಸೂಗೂರು ಎನ್‌. ಗ್ರಾಮದ ಹೊರವಲಯದಲ್ಲಿ ರುವ ಶ್ರೀಮಠದ ಜಮೀನಿನಲ್ಲಿ ಬೆಳೆದ ಜೋಳದ ತೆನೆಗಳನ್ನು ಒಂದೆಡೆ ಗುಂಪು ಹಾಕಿ, ಬನ್ನಿಗಿಡವಿರುವ ಜಾಗದಲ್ಲಿ ಹಂತಿಕಣ ಮಾಡಿ ಅದಕ್ಕೆ ಪೂಜೆ ಪುನಸ್ಕಾರ ಕೈಗೊಂಡು ಹಂತಿ ಮಾಡುವುದು ವಾಡಿಕೆಯಾಗಿದೆ.

ಕಳೆದ ಮೂರು ವರ್ಷಗಳಿಂದ ಜೋಳದ ರಾಶಿಕಣವಾದ ಹಂತಿ ನಡೆಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಎತ್ತುಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರೀಮಠಕ್ಕೆ ಸೇರಿದ ಹೊಲದಲ್ಲಿ ಸುಗ್ಗಿಯ ನಿಮಿತ್ತ ಹಳೆ ಪದ್ಧತಿಯಂತೆ ಹಂತಿ (ಎತ್ತುಗಳಿಂದ ಧಾನ್ಯ ತುಳಿಸಿ ಜೋಳದ ರಾಶಿ ಮಾಡುವುದು) ಮೂಲಕ ರಾಶಿ ನಡೆಸಿ ಗಮನ ಸೆಳೆದರು. ಎತ್ತುಗಳನ್ನು ಕಟ್ಟಿ ಜೋಳದ ತೆನೆಗಳನ್ನು ತುಳಿಸುವುದರಿಂದ ಜೋಳದ ಕಾಳುಗಳು ಬಿಚ್ಚುತ್ತವೆ. ನಂತರ ಅವುಗಳನ್ನು ತೂರಿ ಜೋಳದ ರಾಶಿ ನಡೆಸಲಾಗುತ್ತದೆ. ಇದರ ಜತೆ ಗ್ರಾಮಸ್ಥರಿಗೆ ರುಚಿಯಾದ ಆಹಾರ ನೀಡಿ, ಜನಪದ ಹಾಡುಗಳನ್ನು ಹಾಡಲಾಗುತ್ತದೆ.

ಶ್ರೀಮಠದ ಹಂತಿಕಣ ನೋಡಲು ಸಾವಿರಾರು ಭಕ್ತರು ಕುಟುಂಬ ಪರಿವಾರ ಸಮೇತ ಆಗಮಿಸಿದ್ದರು. ಹಿರಿಯರು ರಾತ್ರಿಯಿಡಿ ಹಂತಿ ನಡೆಯುವ ವೇಳೆ ಜನಪದ ಹಾಡುಗಳಾದ “ಮುತ್ತಿನ ಕೂರಿಗೆ ಹದ ಮಾಡೋ, ಮುತ್ತಿನ ಕೂರಿಗೆ ಹದ ಮಾಡೋ, ನನ ತಮ್ಮ ಆಳ ಮಕ್ಕಳಿಗೆ ದನಿ ಮಾಡೋ’ ಎಂದು ಹಾಡುತ್ತಾ ಖುಷಿಯನ್ನು ಹಂಚಿಕೊಂಡಿದ್ದರು. ನಂತರ ನೆರೆದ ಭಕ್ತರಿಗೆ ಶ್ರೀಮಠದ ವತಿಯಿಂದ ಗೆಣಸಿನ ಹೋಳಿಗೆ, ಅನ್ನಸಾಂಬರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Advertisement

ಅನ್ನದಾತನ ಸಂಪ್ರದಾಯ ಮರೆಯಾಗುತ್ತಿವೆ. ಈ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾವು ಮಾಡಬೇಕಿದೆ. ಶ್ರೀಮಠದ ವತಿಯಿಂದ ನಮ್ಮದೇ ಹೊಲದಲ್ಲಿ ಬೆಳೆದ ಬಿಳಿಜೋಳದ ಹಂತಿಕಣ ಮಾಡಿ, ಶ್ರೀಮಠದ ಭಕ್ತರಿಂದ ಜಾನಪದ ಹಂತಿ ಹಾಡುಗಳನ್ನು ರಾತ್ರಿಯಿಡಿ ಹಾಡಿಸಿ ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡಲು ಯೋಚಿಸಿ, ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. -ಶ್ರೀ ಹಿರಗಪ್ಪ ತಾತನವರು, ಪೀಠಾಧಿಪತಿ, ಶ್ರೀ ಭೋಜಲಿಂಗೇಶ್ವರ ಮಠ, ಸೂಗೂರು

-ಎನ್‌.ಮಹೇಶ ಕಲಾಲ

Advertisement

Udayavani is now on Telegram. Click here to join our channel and stay updated with the latest news.

Next