Advertisement

ಗಂಡುಕಲೆ ಪೂಜಾ ಕುಣಿತಕ್ಕೆ ಹೆಣ್ಣಿನ ಹೆಜ್ಜೆ

08:55 PM Feb 12, 2022 | Team Udayavani |

ಉಡುಪಿ: ಪುರುಷ ಪ್ರಧಾನ ಪೂಜಾ ಕುಣಿತ ಕಲೆಯಲ್ಲಿ ಮಂಡ್ಯ ಮೂಲದ ಸವಿತಾ ಚಿರುಕುನ್ನಯ್ಯ ಅವರು ತಮ್ಮನ್ನು ತೊಡಗಿಸಿಕೊಂಡು ಜನಾಕರ್ಷಕ ಕೇಂದ್ರವಾಗಿದ್ದಾರೆ.

Advertisement

ಜಾನಪದ ಕಲೆಯಲ್ಲಿನ ಒಂದು ಪ್ರಕಾರವಾದ ಪೂಜಾ ಕುಣಿತ ನೃತ್ಯ ಮತ್ತು ವೇಷಭೂಷಣಗಳಿಂದ ಸಭಿಕರ ಮನ ಗೆಲ್ಲುವ ದೇಸೀ ಕಲಾ ಪ್ರಕಾರ. ಸವಿತಾ ಅವರು ಈ ಪುಷ್ಪಾಲಂಕೃತವಾದ, ತೂಕವುಳ್ಳ ದೇವರ ವಿಗ್ರಹದ ಪ್ರಭಾವಳಿಯ‌ನ್ನು ತಲೆಯಲ್ಲಿ ಹೊತ್ತು ಸಮತೋಲನದಿಂದ ಕುಣಿಯುವ ರೀತಿ ಮನಸೂರೆಗೊಳಿಸುತ್ತದೆ. ಒಟ್ಟು 35 ಕೆ.ಜಿ. ತೂಕದ ಈ ಪ್ರಭಾವಳಿಯಲ್ಲಿ ಮಾರಮ್ಮ ದೇವಿಯ ವಿಗ್ರಹ ವಿರಾಜಮಾನವಾಗಿರುತ್ತದೆ. ಇದರಲ್ಲಿ ಗಿಂಡಿ, ಕಲಶಗಳೂ ಇವೆ. ಡೊಳ್ಳು, ತಮಟೆ ಸದ್ದು, ಪ್ರೇಕ್ಷಕರ ಚಪ್ಪಾಳೆ ನಡುವೆ ದೇವರ ವಿಗ್ರಹವನ್ನು ಹೊತ್ತುಕೊಂಡು ಬೀಳದಂತೆ ಸಮತೋಲನ ಕಾಯ್ದುಕೊಳ್ಳುತ್ತ ಪುರುಷರು ಹೊತ್ತಿರುವ ಏಣಿ ಮೇಲೆ ಹೆಜ್ಜೆ ಹಾಕುವುದು ಸುಲಭವಲ್ಲ. ಸಾಮಾನ್ಯವಾಗಿ ಇದು ಪುರುಷರಿಗೆ ಮೀಸಲಾದ ಕಲೆ. ಇಂಥ ಕಲೆಯನ್ನು ಮೈಗೂಡಿಸಿಕೊಂಡು ಹೆಣ್ಣಿನಿಂದಲೂ ಇದು ಸಾಧ್ಯ ಎಂದು ತೋರಿಸಿದವರು ಸವಿತಾ.

ವಿದೇಶಗಳಲ್ಲಿ ಜಾನಪದ ಕಂಪು  :

ಸವಿತಾ ಚಿರುಕುನ್ನಯ್ಯ ಮಂಡ್ಯದಿಂದ ವಿದೇಶದವರೆಗೂ ಜಾನಪದ ಕಂಪು ಹರಿಸಿದವರು. ಮಂಡ್ಯ ಜಿಲ್ಲೆ ತಳಗವಾದಿ ಗ್ರಾಮದಲ್ಲಿ ಗೃಹಿಣಿ. 35 ವರ್ಷ ಪ್ರಾಯದ ಸವಿತಾ ಅವರು 10ನೇ ವಯಸ್ಸಿನಿಂದ ತೊಡಗಿ 25 ವರ್ಷಗಳಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪೂಜಾಕುಣಿತ ಕಲೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಥಮ ಮಹಿಳೆಯಾಗಿ ಖ್ಯಾತಿ ಪಡೆದವರು. ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಹೆಣ್ಣು ಮಕ್ಕಳು ಈ ಕಲೆಯನ್ನು ಕಲಿತು ಪ್ರದರ್ಶನ ಮಾಡಿದ್ದಾರೆ. ಸವಿತಾ ಅವರು ಚೀನಾ, ಸ್ವೀಡನ್‌ ಸಿಂಗಾಪುರಕ್ಕೆ ತೆರಳಿ ಪ್ರದರ್ಶನ ನೀಡಿದ್ದಾರೆ. ಮುಂಬಯಿ, ದಿಲ್ಲಿ, ಗೋವಾ, ಹೈದರಾಬಾದ್‌ನಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಹಲವಾರು ಯುವತಿಯರಿಗೆ ಪೂಜಾಕುಣಿತ ಕಲಿಸುತ್ತಿದ್ದಾರೆ.

Advertisement

ನಾಡಿನ ಮೂಲೆಮೂಲೆಗಳಲ್ಲಿ ನಾನಾ ಬಗೆಯ ವಿಶಿಷ್ಟ ಜಾನಪದ ಕಲಾ ಪ್ರಕಾರಗಳಿವೆ. ಇದರಲ್ಲಿ ಪೂಜಾ ಕುಣಿತವು ಒಂದು.  ತಲ್ಲೂರು ಫ್ಯಾಮಿಲಿ ಟ್ರಸ್ಟ್‌, ಜಾನಪದ ಪರಿಷತ್ತು ಆಶ್ರಯದಲ್ಲಿ ಎಂಜಿಎಂ ಮುದ್ದಣ ಮಂಟಪದಲ್ಲಿ ಜರಗಿದ ಜಾನಪದ ವೈಭವ ಕಾರ್ಯಕ್ರಮದಲ್ಲಿ  ಈ ಪ್ರದರ್ಶನ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ ಮತ್ತು ಕಲಾಸಕ್ತರೂ ಮೂಕವಿಸ್ಮಿತರಾದರು. – ಡಾ| ತಲ್ಲೂರು ಶಿವರಾಮ ಶೆಟ್ಟಿ, ಜಾನಪದ ಪರಿಷತ್‌ ಅಧ್ಯಕ್ಷ, ಉಡುಪಿ ಜಿಲ್ಲೆ

ತುಳುನಾಡ ಜನತೆ ಕಲಾಪ್ರಿಯರು ಪುರುಷ ಕಲೆಯಾಗಿದ್ದ ಪೂಜಾ ಕುಣಿತ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಈ ಜಾನಪದ ಕಲೆಗೆ ನನ್ನನ್ನು ಸಂಪೂರ್ಣ ತೊಡಗಿಸಿಕೊಂಡೆ. ನನ್ನೂರಿನಿಂದ ಹಿಡಿದು ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ತುಳುನಾಡ ಜನತೆ ಕಲಾಪ್ರಿಯರು. ಉಡುಪಿಯಲ್ಲಿ ಪ್ರದರ್ಶನ ನೀಡಿದ್ದು ತುಂಬ ಸಂತಸ ತಂದಿದೆ.  – ಸವಿತಾ ಚಿರುಕುನ್ನಯ್ಯ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next