Advertisement

“ಜಾನಪದ ಸಂಸ್ಕೃತಿ ಮಾನವ ಜನಾಂಗದ ಬೆಳಕು’

05:55 PM Aug 12, 2017 | Team Udayavani |

ತುಮಕೂರು: ಓದು ಬರಹ ಗೊತ್ತಿಲ್ಲದ ಜಾನಪದರದ್ದು ಅಲಿಖೀತ ಸಂವಿಧಾನ. ಅವರ ಅಗಾಧ ಪಾರಂಪರಿಕ ಜಾನಪದ ಬಳಕೆಯಿಂದ
ನಮ್ಮ ಸಂಸ್ಕೃತಿ ಸಮೃದ್ಧವಾಗಿತ್ತೆಂದು ಕನ್ನಡ ಜಾನಪದ ಪರಿಷತ್‌ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್‌.ಬಾಲಾಜಿ ಅಭಿಪ್ರಾಯಪಟ್ಟರು.
 ಜಿಲ್ಲೆಯ ಕುಣಿಗಲ್‌ ತಾಲೂಕು ಕನ್ನಡ ಜಾನಪದ ಪರಿಷತ್‌ ತಾಲೂಕು ಘಟಕವನ್ನು ಡಮರುಗ ಬಾರಿಸುವುದರ ಮೂಲಕ
ಉದ್ಘಾಟಿಸಿ ಮಾತನಾಡಿ, ಜಾನಪದ ಸಂಸ್ಕೃತಿ ಮಾನವ ಜನಾಂಗದ ಬೆಳಕು ಎಂದರು. ಕೃಷಿ ಮತ್ತು ಜಾನಪದ ಸಂಸ್ಕೃತಿ ಹುಟ್ಟು ಸ್ತ್ರೀಯರಿಂದಾಗಿರುವುದು ಎಂಬುದು ಹೆಮ್ಮೆಯ ವಿಷಯ. ವಿಕಾಸಕ್ಕಾಗಿ ಜಾನಪದದ ಮೂಲಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಜಾನಪದ ಕಲೆಗಳ ಅರಿವು ಮತ್ತು ಪ್ರದರ್ಶನ ಕಲೆಗಳ ತರಬೇತಿ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್‌ ಹಮ್ಮಿಕೊಂಡಿದೆ ಎಂದು ಹೇಳಿದರು. ಕುಣಿಗಲ್‌ ನಿಂದ 8 ಕಿ.ಮೀ ದೂರದ ತಾಳೆಕೆರೆಯಲ್ಲಿ 12 ಎಕರೆ ವಿಶಾಲವಾದ ಪ್ರದೇಶದಲ್ಲಿ ಜಾನಪದ ಪ್ರಪಂಚವನ್ನು ಜಾನಪದ ಪರಿಷತ್‌ ಸ್ಥಾಪಿಸಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಶಿಕ್ಷಣ ಇಲಾಖೆ ಶಾಲಾ ಕಾಲೇಜುಗಳಲ್ಲಿ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲು ಸುತ್ತೋಲೆ ಹೊರಡಿಸಿದ್ದು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕನ್ನಡ ಜಾನಪದ ಪರಿಷತ್‌ ನೆರವಿನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ದೊರೆತಿದೆ ಎಂದು ತಿಳಿಸಿದರು. ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ  ಪ್ರೋ.ಎಲ್‌.ಶ್ರೀನಿವಾಸಮೂರ್ತಿ, ಭಾರತದಲ್ಲಿ ಕುರಿ, ಕೋಳಿಗಳ ಸಮೀಕ್ಷೆಗಳಾಗಿವೆ. ಆದರೆ ಜಾನಪದ ಕಲಾವಿದರ ಸಮೀಕ್ಷೆಯಾಗದಿರುವುದು ವಿಷಾದನೀಯ. ಕನ್ನಡ ಜಾನಪದ ಪರಿಷತ್‌ ಕಲಾವಿದರ ಸಮೀಕ್ಷೆ ಮಾಡುವುದರ ಮೂಲಕ ದಾಖಲೀಕರಣ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು. ಕುಣಿಗಲ್‌ ಜಾನಪದಕ್ಕೆ ಅತ್ಯಮೂಲ್ಯ ಕೊಡುಗೆ ಸಲ್ಲಿಸಿದ್ದು. ರಾಜ್ಯ-ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನೂ ಕುಣಿಗಲ್‌ ತಾಲೂಕಿನಲ್ಲಿ ಹಮ್ಮಿಕೊಳ್ಳುವಷ್ಟು ಇಲ್ಲಿನ ಜನರು ನೆಲಮಣ್ಣಿನ ಋಣವನ್ನರಿತ ವಿಶಾಲಹೃದಯಿಗಳು ಎಂದು ಅಭಿಪ್ರಾಯಪಟ್ಟರು. ಮೌಖೀಕ ಪರಂಪರೆಯೇ ಜಾನಪದ: ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್‌.ಕೆ.ರಘು ಮಾತನಾಡಿ, ಜಾನಪದ ನಮ್ಮ ಮೂಲ ಬದುಕು. ನಮ್ಮೊಳಗಿನ ಮೌಖೀಕ ಪರಂಪರೆ ಜಾನಪದವಾಗಿದೆ. ಭಾಷೆಯಿಲ್ಲದೆ, ಬಾಯಿಂದ ಬಾಯಿಗೆ ಬಂದ ಹಾಡುಗಳೇ ಜನಪದ ಹಾಡುಗಳಾಗಿವೆ. ಜಾನಪದ ಒಂದು ಕುಟುಂಬವಾಗಿದ್ದು ಇದರ ನೆರಳಿನಲ್ಲಿ ಅನೇಕ ಶಾಖೆಗಳಿವೆ ಎಂದು ಹೇಳಿದರು. ಕುಣಿಗಲ್‌ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷರಾದ
ದಿನೇಶಕುಮಾರ್‌, ನಾವೆಲ್ಲರೂ ಕನ್ನಡ ಜಾನಪದ ಪರಿಷತ್‌ ಜೊತೆಗಿರುತ್ತೇವೆ. ನಮ್ಮ ನೆಲದ ಋಣ ತೀರಿಸಲು ನಮಗೆ ಸಿಕ್ಕ ಒಂದು ಅವಕಾಶ ಇಲ್ಲಿಯ ಕಲೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಶ್ರಮಿಸುತ್ತೇವೆಂದರು. ಜಾನಪದ ಸಂಸ್ಕೃತಿ ರೂಪಿಸಿಕೊಳ್ಳಿ: ಇತಿಹಾಸ ಉಪನ್ಯಾಸಕ ಎಸ್‌. ರಂಗಸ್ವಾಮಿ, ಜಾನಪದ ಕಲೆ ಮನೆ ಮನಗಳನ್ನು ಬೆಳಗಲಿ. ನಾವೆಲ್ಲರೂ ಜಾನಪದ ಸಂಸ್ಕೃತಿ ರೂಢಿಸಿಕೊಳ್ಳುವುದರ ಮೂಲಕ ಒತ್ತಡದ ಬದುಕಿಗೆ ಪೂರ್ಣ ವಿರಾಮವಿಡಬಹುದು. ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ಮುಂದಾಗಬೇಕೆಂದು ಸಲಹೆ ನೀಡಿದರು. ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ನೀಡುವೆ:ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್‌.ರಂಗಸ್ವಾಮಿ, ಕನ್ನಡ ಜಾನಪದ ಪರಿಷತ್‌ ಉತ್ತಮ ಉದ್ದೇಶಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪರಿಷತ್‌ ಜೊತೆ ಇರುತ್ತೇವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಆನಂದಮೂರ್ತಿ, ಅಶ್ವಿ‌ನಿ,
ಮಯೂರ ಮಿತ್ರ ಬೊಮ್ಮಣ್ಣ ಕವಿ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next