ಚನ್ನಪಟ್ಟಣ: ಜಾನಪದ ಸಾಹಿತ್ಯ ಉಳಿವಿಗೆ ಆಧಾರ ಸ್ಥಂಭದಂತಿರುವ ಜನಪದ ಕಲಾವಿದರ ಬದುಕು ದುಸ್ಥಿತಿಯಲ್ಲಿದ್ದು, ಜೀವನೋಪಾಯಕ್ಕಾಗಿ ಪರದಾಡುತ್ತಿರುವುದು ನೋವಿನ ಸಂಗತಿ ಎಂದು ಸಾಹಿತಿ ವಿಜಯ್ ರಾಂಪುರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ, ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹರಿಕಥಾ ಕಲಾವಿದ ಮೋಳೆದೊಡ್ಡಿ ನಿಂಗರಾಜು ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಂಟೇಸ್ವಾಮಿ ಪರಂಪರೆಯ ಸಿದ್ಧಪ್ಪಾಜಿ, ರಾಚಪ್ಪಾಜಿ, ಮೈಲಾರಲಿಂಗ, ಶರಣೆ ಶಂಕಮ್ಮ ಮುಂತಾದ ಹತ್ತಕ್ಕೂ ಹೆಚ್ಚು ಮಹಾಕಾವ್ಯಗಳನ್ನು ಕಳೆದ 25 ವರ್ಷಗಳಿಂದ ನಿರಂತರವಾಗಿ ಹಾಡಿಕೊಂಡು ಬರುತ್ತಿರುವ ನಿಂಗರಾಜು ಅವರಂತಹ ಕಲಾವಿದರು ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಇದ್ದಾರೆ.
ಇಂತಹ ಹಿರಿಯ ಜಾನಪದ ಕಲಾವಿದರ ಜೀವನ ಸಮೃದ್ಧವಾಗದ ಹೊರತು, ಜಾನಪದದ ಉಳಿವು ಅಸಾಧ್ಯ. ಸರ್ಕಾರದಿಂದ ಕನಿಷ್ಠ ಗೌರವ ಧನ ಪಡೆಯಲು ಎಣಗಾಡಬೇಕಾದ ಶೋಚನೀಯ ಪರಿಸ್ಥಿತಿ ಇದೆ. ಅಮೂಲ್ಯ ಜನಪದ ಕಲೆಯಿಂದ ಯುವ ಸಮುದಾಯ ದೂರ ಉಳಿಯಲು ಇದು ಬಹುಮುಖ್ಯ ಕಾರಣವಾಗಿದೆ. ಜಾನಪದದ ಅಳಿವು ಉಳಿವಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದರು.
ಯುವಕವಿ ಅಬ್ಬೂರು ಶ್ರೀನಿವಾಸ್ ಮಾತನಾಡಿ, ಜನಪದ ಸೀಮಿತ ವಲಯಕ್ಕೆ ಮಾರ್ಪಾಡಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಹುಟ್ಟಿದ ಜಾನಪದ, ಗ್ರಾಮೀಣರಿಗೆ ಅಪರಿಚಿತವಾಗುತ್ತಿರುವುದು ನೋವಿನ ಸಂಗತಿ ಎಂದರು. ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದ ಚೌ.ಪು. ಸ್ವಾಮಿ, ಮೋಳೆದೊಡ್ಡಿ ಗ್ರಾಮದ ಮುಖಂಡ ತವಸಯ್ಯ, ಗೌರಮ್ಮ, ಯೋಗೇಶ್ ಹಾಜರಿದ್ದರು.