ಶ್ರೀ ದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾ ಸಂಘ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದು ದಿನದ ವಿಚಾರ ಸಂಕಿರಣ , ಹೋಳಿ ಕುಣಿತ ,ಯಕ್ಷಗಾನ ಹಾಸ್ಯ ಪ್ರಾತ್ಯಕ್ಷಿಕೆ, ಯಕ್ಷಗಾನ, ಹಾಸ್ಯ ಸಂಜೆ ಎಂಬ ಪ್ರದರ್ಶನದ ಜಾನಪದ ಕಲಾ ಸಾಂಸ್ಕೃತಿಕ ವೈಭವ ಇತ್ತೀಚೆಗೆ ಹಿರಿಯಡ್ಕ ಸಮೀಪದ ಅಂಬಾರಿನಲ್ಲಿ ಜರುಗಿತು.
ಕೈಯಲ್ಲಿ ಕೋಲು , ಕಾಲಿಗೆ ಗೆಜ್ಜೆ ತೆಂಕು ತಿಟ್ಟು ಯಕ್ಷಗಾನ ಮಾದರಿಯ ವೇಷ ತೊಟ್ಟು ಕನ್ನಡ – ಮರಾಠಿ ಹಾಡುಗಳಿಗೆ ಲಯಬದ್ದವಾಗಿ ವೃತ್ತಾಕಾರ ಹೆಜ್ಜೆ ಹಾಕಿ “ಹೋಳಿ -ಕೋಲಾಟ’ದ ಪ್ರಾತ್ಯಕ್ಷಿಕೆಯನ್ನು ಮರಾಠಿ ಯುವ ಸಂಘಟನೆ ಕರ್ಜೆ ನೀಡಿದರು.
ಎರಡು ಎತ್ತು ಒಬ್ಬ ಗೋಪಾಲಕ ಪಾತ್ರಧಾರಿಗಳು ಮರಾಠಿ ಹಾಡಿಗೆ ಲಯಬದ್ದವಾಗಿ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ನರ್ತಿಸುವ ಲಂಗಾಸಿ ಕುಣಿತದಲ್ಲಿ ತಾವು ಸುತ್ತಿ ಬಂದ ಊರು ,ತಿಂದ ಆಹಾರದ ವಿವರಣೆಯನ್ನು ಹಾಡಿನಲ್ಲಿ ವರ್ಣಿಸುತ್ತಾ ಅಭಿನಯಿಸಿದರು. ಕೃತಕ ಮುಖವಾಡಕ್ಕಿಂತ ಸಾಂಪ್ರದಾಯಿಕ ಮುಖವಾಢಧಾರಣೆ ಮಾಡಿದರೆ ಇನ್ನಷ್ಟು ಶೋಭೆ ತರಬಹುದಿತ್ತು. ಈ ಪ್ರದರ್ಶನವನ್ನು ತುಳಜಾ ಭವಾನಿ ಮರಾಠಿ ಸಮುದಾಯ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘಟನೆ ಕರ್ಜೆ ಇವರು ಅಬಿನಯಿಸಿದರು.
ಬಡಗುತಿಟ್ಟು ಯಕ್ಷಗಾನ ಶೈಲಿಯ ವೇಷಭೂಷಣ, ಗುಮ್ಮಟೆ ವಾದ್ಯವನ್ನು ಲಯಬದ್ದವಾಗಿ ಬಾರಿಸುತ್ತಾ, ಮರಾಠಿ ಹಾಡು ಹಾಡುತ್ತಾ ಹೋಳಿ ಕುಣೆತದ ಪ್ರಾತಿಕ್ಷಿಕೆಯ ಮೂಲಕ ಜನಮನ ರಂಜಿಸಿದರು. ಮರಾಠಿ ಯುವ ಸಂಘಟನೆ ಕರ್ಜೆ ಹೋಳಿ ಹಬ್ಬ ಪಾಲ್ಗುಣಿ ಮಾಸದ ದಶಮಿಯಿಂದ ಹುಣ್ಣಿಮೆವರೆಗೆ ಧಾರ್ಮಿಕ ಆಚರಣೆ ಊರು ಸಂಚರಿಸಿ ತಮ್ಮ ಕಲೆ ಮತ್ತು ಧಾರ್ಮಿಕತೆಯನ್ನು ಪ್ರದರ್ಶಿಸುವ ಮೂಲಕ ಜನಪದ ಕಲೆ ಉಳಿಸಿ ಬೆಳೆಸುವ ಉತ್ತಮ ಸಂದೇಶ ನೀಡಿದರು.
ಯಕ್ಷಗಾನ ಹಾಸ್ಯ ಪ್ರಾತ್ಯಕ್ಷಿಕೆಯಲ್ಲಿ ಶೈಲೇಶ್ ನಾಯ್ಕ ಬಳಗ ಗದಾಯುದ್ಧ ಪ್ರಸಂಗದ ಬೇಟೆಗಾರರ ಬೇಟೆ ದೃಶ್ಯ ಅಭಿನಯ ಮತ್ತು ಕೌರವನು ವೈಶಂಪಾಯನ ಸರೋವರದಲ್ಲಿ ಅಡಗಿರುವ ವರದಿಯನ್ನು ಭೀಮ(ಮಹಾಬಲ ನಾಯ್ಕ) ಹಾಸ್ಯ ಮಿಶ್ರಿತ ಮಾತು ಅಭಿನಯ ಜನಮನ ರಂಜಿಸಿತು.
ರತಿಕಲ್ಯಾಣ ಪ್ರಸಂಗದ ಸನ್ನಿವೇಶವನ್ನು ಶಂಕರ ಉಳ್ಳೂರು ಮತ್ತು ಬಳಗ ಪ್ರಸ್ತುತ ಪಡಿಸಿದರು. ಕು| ನಿಶಾ ಕೃಷ್ಣನ ಒಡ್ಡೋಲಗದ ಪ್ರಾತ್ಯಕ್ಷಿಕೆಯಲ್ಲಿ ಬಾಲಪ್ರತಿಭೆ ಅಭಿವ್ಯಕ್ತಗೊಂಡಿತು.ಶ್ರೀನಿವಾಸ ನಾಯ್ಕ ,ಕರುಣಾಕರ ಶೆಟ್ಟಿ, ನಾಗರಾಜ್ ಇವರು ಯಕ್ಷಗಾನ ಗಾನವೈವಿಧ್ಯ ಮಧುರವಾಗಿ ಮೂಡಿಬಂತು. ಅಂಜಾರು ಮಕ್ಕಳ ಮೇಳದಿಂದ ಮೀನಾಕ್ಷಿ ಕಲ್ಯಾಣ ಮತ್ತು ಪ್ರಸಿದ್ದಿ ಪರ್ಕಳ ಇವರಿಂದ ಬಲಿತಲಿಪಾತಿ ಕಾರ್ಯಕ್ರಮ ಜರುಗಿತು.
ಸದಾನಂದ ಪಂಚನಬೆಟ್ಟು