Advertisement

ಜಾನಪದ ಎಲ್ಲರ ಎದೆಯಾಳದ ಕಲೆ:ಗುರುಸಿದ್ದೇಶ್ವರ ಸ್ವಾಮೀಜಿ

05:47 PM Mar 24, 2022 | Team Udayavani |

ರಾಮದುರ್ಗ: ಗ್ರಾಮೀಣರ ಬದುಕಿನಲ್ಲಿ ಹಾಸುಹೊಕ್ಕಾದ ಜಾನಪದ ಸಾಹಿತ್ಯವು ಬೇರೆಯವರಿಂದ ಬಂದಿಲ್ಲ, ಎಲ್ಲರ ಎದೆಯಾಳದಿಂದ ಬಂದ ಕಲೆಯಾಗಿದೆ ಎಂದು ರಬಕವಿಯ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ವಿದ್ಯಾಚೇತನ ಶಾಲಾ ಆವರಣದ ಬಸಲಿಂಗಯ್ಯ ಹಿರೇಮಠ ಮತ್ತು ಕೌಜಲಗಿ ವಿಠಲ ವೇದಿಕೆಯಲ್ಲಿ ಅವರಾದಿ ಶಿವಪೇಟೆಯ ಓಂ ಶಿವ ಮೇಳದ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಮಹಾಸಮ್ಮೇಳನದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈ ನಾಡಿನ ತುಂಬೆಲ್ಲ ಜಾನಪದದ ಬೀಜವನ್ನು ಬಿತ್ತಿ ಅಪಾರ ಬೆಳೆ ಬೆಳೆದು ನೆಮ್ಮದಿಯ ಜೀವನ ಸಾಗಿಸುತ್ತಿರುವ ಸಿದ್ದು ಮೋಟೆ ಅವರ ಜೀವನ ನಮಗೆಲ್ಲ ಆದರ್ಶವಾಗಿದೆ. ಸತತ ಮೂರು ದಿನಗಳವರೆಗೆ ಕಾರ್ಯಕ್ರಮ ಆಯೋಜಿಸಿ ಸಂಘಟನೆ ಮಾಡುವುದು ಸುಲಭದ ಮಾತಲ್ಲ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನಹಟ್ಟಿಯ ಬಿ.ಆರ್‌. ಪೊಲೀಸ್‌ ಪಾಟೀಲ ಮಾತನಾಡಿ, ಜಾನಪದವು ಹಿಂದೆ ಹೀಗಿತ್ತು ಎಂದು ಹೇಳುವುದರ ಜೊತೆಗೆ ಜಾನಪದ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಕುಷ್ಟಗಿ ಭಾಗದಲ್ಲಿ ಜೀವನಸಾಬ ವಾಲಿಕಾರ, ರಾಮದುರ್ಗದಲ್ಲಿ ಸಿದ್ದು ಮೋಟೆ ಮತ್ತು ಬನಹಟ್ಟಿಯಲ್ಲಿ ಬಿ.ಆರ್‌. ಪೋಲಿಸ್‌ ಪಾಟೀಲ ಮುನ್ನೆಲೆಗೆ ಬಂದು ನಿಲ್ಲುತ್ತಾರೆ ಎಂದು ಹೇಳಿದರು.

ಉದ್ಯಮಿ ವಿಜಯ್‌ ಶೆಟ್ಟಿ, ಬೆಂಬಳಗಿ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರಕಾಶ ತೆಗ್ಗಿಹಳ್ಳಿ, ಡಾ| ಎಂ.ಎನ್‌. ಸಿದ್ಧಗಿರಿ, ಪುರಸಭೆ ಸದಸ್ಯೆ ರಾಜೇಶ್ವರಿ ಮೆಟಗುಡ್ಡ ಮಾತನಾಡಿದರು. ಬನಹಟ್ಟಿಯ ಬಿ.ಎರ್‌. ಪೊಲೀಸ್‌ ಪಾಟೀಲ, ರಾಮದುರ್ಗದ ಸಂಕಮ್ಮ ಗುದಗಾಪುರ, ಕುಷ್ಟಗಿಯ ಜೀವನಸಾಬ ವಾಲಿಕಾರ ಅವರಿಗೆ ಜಾನಪದ ಶಿವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಜಾನಪದ ಕಲಾ ಮೇಳಕ್ಕೆ ಪ್ರೋತ್ಸಾಹಿಸಿದ ಅನೇಕ ಮಹನೀಯರನ್ನು ಸತ್ಕರಿಸಲಾಯಿತು.

Advertisement

ವೇದಿಕೆಯಲ್ಲಿ ಮುತ್ತುರಾಜ ಕೊಂಡಾ, ಸುರೇಶ ದೇಸಾಯಿ, ರಾಮಚಂದ್ರ ಯಾದವಾಡ, ಚಂದ್ರು ಮಾಳದಕರ, ಡಾ| ಅಮೀತ ಆಪ್ಟೆ, ಬಿ.ಎಸ್‌. ಗುಡದನ್ನವರ, ಇತರರು ಇದ್ದರು. ರಾಜು ಬದಾಮಿ ಅವರಿಂದ ಹಾಸ್ಯ ಮತ್ತು ಪವಾಡ ಬಯಲು ಕಾರ್ಯಕ್ರಮ, ಜಾನಪದ ಕಲಾವಿದರಿಂದ ತತ್ವಪದ, ಶಿವಭಜನೆ, ಮಹಿಳೆಯರ ಕೋಲಾಟ, ಗೀಗಿ ಪದ, ಬೀಸುಕಲ್ಲು ಪದ, ಸೋಬಾಣ ಪದ, ಮದುವೆ ಹಾಡುಗಳು ಸೇರಿದಂತೆ 15ಕ್ಕೂ ಹೆಚ್ಚು ಕಲಾ ತಂಡಗಳಿಂದ ಜಾನಪದ ವೈವಿಧ್ಯಮಯ
ಕಾರ್ಯಕ್ರಮಗಳು ವೇದಿಕೆಯಲ್ಲಿ ಜರುಗಿದವು. ಶಿಕ್ಷಕ ತುಕಾರಾಮ ಕರದಿನ ಸ್ವಾಗತಿಸಿದರು. ಶಿಕ್ಷಕ ಗಣೇಶ ಕೊಳದೂರ ನಿರೂಪಿಸಿದರು. ಕಲಾವಿದ ಸಿದ್ದು ಮೋಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next