Advertisement

ಜನಮನ ಸೆಳೆದ ಜಾನಪದ ಕಲಾ ಉತ್ಸವ

04:35 PM Apr 22, 2022 | Team Udayavani |

ಗದಗ: ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮ್ಮ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ|ಕೊಟ್ಟೂರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ನೂಲಿಚಂದಯ್ಯ ಜಾನಪದ ಕಲಾ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಲಕ್ಕುಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಕಲಾ ಉತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇಶದಲ್ಲಿ ಅಸ್ಥಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನರಗುಂದದ ಬಿಜೆಪಿ ಯುವ ನಾಯಕ ಉಮೇಶಗೌಡ ಪಾಟೀಲ, ವಿವಿಧ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದಕ್ಕೆ ಹುಟ್ಟು-ಸಾವಿಲ್ಲ. ಈ ದಿಸೆಯಲ್ಲಿ ಯುವಕರು ಇಂದಿನ ಯಾಂತ್ರಿಕ ಜೀವನ ಶೈಲಿಯನ್ನು ಬದಿಗಿಟ್ಟು, ಜಾನಪದ ಶೈಲಿಯ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈಗ ಯಂತ್ರಗಳೇ ಎಲ್ಲ ಕೆಲಸಗಳನ್ನು ಮಾಡುತ್ತಿರುವುದರಿಂದ ಜಾನಪದ ಕಲೆ ಉಳಿಯುತ್ತಿಲ್ಲ. ಆದ್ದರಿಂದ, ಪ್ರತಿ ಮನೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡರೆ ಅದೇ ನಿಜವಾದ ಜಾನಪದ ಸಂಪತ್ತು ಎಂದು ಸಾಹಿತಿ ಡಾ|ಅರ್ಜುನ ಗೊಳಸಂಗಿ ಹಾಗೂ ಡಾ|ವೈ. ವೈ. ಭಜಂತ್ರಿ ಅಭಿಪ್ರಾಯಪಟ್ಟರು.

Advertisement

ಗ್ರಾಪಂ ಅಧ್ಯಕ್ಷೆ ಶ್ರೇಯಾ ಕಟಿಗ್ಗಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಗ್ರಾಪಂ ಉಪಾಧ್ಯಕ್ಷ ಪೀರಸಾಬ ನದಾಫ, ನೀಲಕಂಠ ಮರಡಿ, ಚನ್ನಬಸಪ್ಪ ಹಡಗಲಿ, ಮಹೇಶಕುಮಾರ ಮುಸ್ಕಿನಭಾವಿ, ನಿಂಗಪ್ಪ ಮಣ್ಣೂರು, ದತ್ತಾತ್ರೇಯ ಜೋಶಿ, ಪ್ರದೀಪ ನವಲಗುಂದ, ಮರಿಯಪ್ಪ ವಡ್ಡರ, ಸಮೀರಸಾಬ ನದಾಫ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಬಸವರಾಜ ಮುಳ್ಳಾಳ, ಸ್ವಾಗತಿಸಿ, ಎಂ.ವಿ. ಗಡ್ಡಿ ನಿರೂಪಿಸಿ, ಶಿವು ಭಜಂತ್ರಿ ವಂದಿಸಿದರು.

ಮನ ಸೆಳೆದ ಜೋಗುತಿ ನೃತ್ಯ-ಕೋಲಾಟ: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ ಕೋತಬಾಳ ಗ್ರಾಮದ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾ ತಂಡದ ಜೋಗುತಿ ಮತ್ತು ದೀಪ ನೃತ್ಯ, ಕುರ್ತುಕೋಟಿ ವಿರೂಪಾಕ್ಷಪ್ಪ ಗುರನವರ ಕಲಾ ತಂಡದ ಕೋಲಾಟ ಜನಮನ ಸೆಳೆಯಿತು.

ಅಸುಂಡಿಯ ಪುಟ್ಟರಾಜ ಕಲಾ ತಂಡದ ಲಂಬಾಣಿ ನೃತ್ಯ, ಎನ್‌.ಎಚ್‌.ಗುಡ್ಡದ ಅವರ ರಂಗ ಗೀತೆಗಳು, ಸಾವಿತ್ರಿ ಲಮಾಣಿ ಅವರ ಸುಗಮ ಸಂಗೀತ, ಗೌಡಪ್ಪ ಬೊಮ್ಮಪ್ಪನವರ ಜನಪದ ಗೀತೆ, ಲಕ್ಕುಂಡಿ ಜ್ಯೋತಿ ಕಮದೋಡ ಅವರ ಭರತ ನಾಟ್ಯ, ನಿಂಗಪ್ಪ ಗುಡ್ಡದ ಅವರ ಡೊಳ್ಳಿನ ಪದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಗಮಿಸಿದ್ದ ಜಾನಪದ ಕಲಾವಿದರ ಸಂಗೀತ ಸಾವಿರಾರು ಜನರ ಮನ ತಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next