ಮಡಿಕೇರಿ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ವೀರ ಸೇನಾನಿಗಳ ನಾಡಾದ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು, ಸಂತ್ರಸ್ತ ಕುಟುಂಬವು ನ್ಯಾಯ ಒದಗಿಸುವಂತೆ ಜಿಲ್ಲಾಡಳಿತದ ಮೊರೆಹೊಕ್ಕಿದೆ.
ತಲ್ತರೆಶೆಟ್ಟಳ್ಳಿ ಗ್ರಾಮದ ಅಭಿವೃದ್ಧಿ ಸಮಿತಿಯು ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಮಾನಸಿಕವಾಗಿ ತುಂಬಾ ನೊಂದಿದ್ದೇವೆ ಎಂದು ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ಅಬ್ಬಿಮಠ ಬಾಚಳ್ಳಿಯ ಎಸ್.ಬಿ. ಶಾಂತಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು.
2018ರಲ್ಲಿ ಕ್ಷುಲ್ಲಕ ಕಾರಣ ನೀಡಿ ಎಲ್ಲ ವಿಧದಲ್ಲೂ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಮನೆಗೆ ಯಾರೂ ಬರುವಂತಿಲ್ಲ ಮತ್ತು ನಾವು ಕೂಡ ಯಾರ ಮನೆಗೂ ಹೋಗುವಂತಿಲ್ಲ ಎನ್ನುವ ಅಪ್ಪಣೆ ಮಾಡಲಾಗಿದೆ. ಈ ಕಾರಣದಿಂದ ನಮ್ಮ ಮನೆಗೆ ಯಾರೂ ಬರುತ್ತಿಲ್ಲ, ನಾನು ಒಬ್ಬ ಕೃಷಿಕನಾಗಿದ್ದು, ನಮ್ಮ ಜಮೀನಿಗೆ ಕೃಷಿ ಕೆಲಸಕ್ಕೆ ಬರಲು ಯಾರನ್ನೂ ಬಿಡುತ್ತಿಲ್ಲ ಎಂದು ಅಳಲು ತೋಡಿ ಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯ: ಸೋಮವಾರಪೇಟೆ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಸೋಮವಾರಪೇಟೆ ಪೊಲೀಸರಿಗೆ ವರ್ಗಾಯಿಸಿ ಇತ್ಯರ್ಥ ಪಡಿಸುವಂತೆ ಸೂಚಿಸುತ್ತಾರೆ. ಆದರೆ ಪೊಲೀಸರಿಂದ ನ್ಯಾಯ ದೊರೆತಿಲ್ಲ ಎಂದು ಶಾಂತಪ್ಪ ಆರೋಪಿಸಿದರು. ನಮ್ಮ ಮೇಲಿನ ಬಹಿಷ್ಕಾರವನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯ ಬಹಿಷ್ಕಾರಗಳು ಆಗದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೃಹಪ್ರವೇಶಕ್ಕೆ ಬಂದವರಿಗೆ 5 ಸಾವಿರ ರೂ. ದಂಡ!
ನಾವು ಹೊಸ ಮನೆಯೊಂದನ್ನು ನಿರ್ಮಿಸಿದ್ದು ಇತ್ತೀಚೆಗೆ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡು ಊರಿನವರನ್ನು ಆಹ್ವಾನಿಸಿದ್ದೆ. ಸಾಮಾಜಿಕ ಬಹಿಷ್ಕಾರದ ಹಿನ್ನೆಲೆಯಲ್ಲಿ ಯಾರೂ ಬರುವ ಧೈರ್ಯ ತೋರಿಲ್ಲ. ಕೇವಲ 10 ಮಂದಿ ಬಂದಿದ್ದರೂ ಅವರಲ್ಲಿ ಮೂವರಿಗೆ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಬೆಳವಣಿಗೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಹಾಗೂ ಭೀತಿ ಮೂಡಿಸಿದೆ. ನಮ್ಮ ಪುತ್ರ ಬೆಳಗಾವಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶ ರಕ್ಷಕನ ಹೆತ್ತವರಾದ ನಮಗೇ ರಕ್ಷಣೆ ಇಲ್ಲದಾಗಿದೆ. 4 ವರ್ಷಗಳಿಂದ ನಾವು ಮಾನಸಿಕವಾಗಿ ತೀವ್ರ ನೊಂದಿದ್ದೇವೆ ಎಂದು ಶಾಂತಪ್ಪ ಹೇಳಿದರು.