ಬೆಂಗಳೂರು: ರಾಜ್ಯದಲ್ಲಿರುವ 5,212 ಪಶುವೈದ್ಯ ಸಂಸ್ಥೆಗಳಲ್ಲಿ ಜಾನುವಾರುಗಳಿಗೆ ಬೇಕಾದ ಎಲ್ಲ ಅಗತ್ಯ ಸೇವೆಗಳು ರೈತರು ಮತ್ತು ಜಾನುವಾರು ಸಾಕಾಣಿಕೆದಾರರಿಗೆ ಲಭ್ಯವಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಪಶುಸಂಗೋಪನೆ ಇಲಾಖೆಯ ಸುಮಾರು 9,000ಕ್ಕೂ ಹೆಚ್ಚು ಅಧಿಕಾರಿಗಳು, ಸಿಬಂದಿ ಕಾರ್ಯ ನಿರ್ವಹಿಸುತಿದ್ದಾರೆ. ರಾಜ್ಯದಲ್ಲಿ ಮೇವು ಸಹ ಸಮರ್ಪಕವಾಗಿದ್ದು ಕೊರತೆಯಿದ್ದ ಜಿಲ್ಲೆಗಳಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಮತ್ತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೆ ಮೇವು ಒದಗಿಸಲು ಕ್ಯಾಟಲ್ ಕ್ಯಾಂಪ್ ತೆರೆದು ಜಾನುವಾರಗಳಿಗೆ ಮೇವು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 1.4 ಕೋಟಿ ಮೇವು ಅವಲಂಬಿತ ಜಾನುವಾರಗಳಿವೆ, 1.47ಕೋಟಿ ಟನ್ ನಷ್ಟು ಮೇವು ರಾಜ್ಯದಲ್ಲಿ ಲಭ್ಯವಿದೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ಹಸಿರು ಮೇವು ದೊರೆಯಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೇವು ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಕೊರತೆ ಎದುರಾದರೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸಲು ಸೂಚಿಸಲಾಗಿದೆ. ಅಲ್ಲದೆ ಕೋವಿಡ್-19 ಸೊಂಕು ನಿಯಂತ್ರಣಕ್ಕೆ ಜಿಲ್ಲಾಡಳಿತಗಳು ಕಟ್ಟಿನಿಟ್ಟಿನ ಕ್ರಮ ಕೈಗೊಂಡಿದ್ದು ನಿಯಮ ಉಲ್ಲಂಘನೆ ಆಗದಂತೆ ಎಚ್ಚರವಹಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ತಿಳಿಸಿದ್ದಾರೆ.