Advertisement

ಜಾನುವಾರು ಆಹಾರ ಭದ್ರತೆಗೆ ಮೇವು ಬ್ಯಾಂಕ್‌

12:18 PM May 19, 2019 | Suhan S |

ನರೇಗಲ್ಲ: ಜನರಿಗೆ ಆಹಾರ ಭದ್ರತೆ ಹೇಗಿದೆಯೋ ಅದೇ ಮಾದರಿಯಲ್ಲಿ ಜಾನುವಾರುಗಳಿಗೂ ಮೇವಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಂತೆ ಗದಗ ಜಿಲ್ಲೆ ವಿವಿಧ ಗ್ರಾಪಂಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲಾಗಿದೆ ಎಂದು ಗದಗ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.

Advertisement

ಸಮೀಪದ ಕೋಟುಮಚಗಿ ಗ್ರಾಪಂನಲ್ಲಿನ ಮೇವು ಬ್ಯಾಂಕ್‌ಗೆ ಶನಿವಾರ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು. ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಜಾನುವಾರುಗಳಿಗೆ ಮೇವು ಕೊರತೆಯಾಗಿರುವುದನ್ನು ಮನಗಂಡು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೇವು ಬ್ಯಾಂಕ್‌ ಪ್ರಾರಂಭಿಸಲಾಗಿದೆ. ಅದರ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು. ಜಾನುವಾರುಗಳನ್ನು ಹೊಂದಿದವರು ಗ್ರಾಪಂನಲ್ಲಿ ದೊರೆಯುವ ಮೇವಿಗೆ ಪ್ರತಿ ಕೆಜಿಗೆ ಎರಡು ರೂ.ಗಳಂತೆ ಖರೀದಿಸಿ ಸರ್ಕಾರ ರೂಪಿಸಿರುವ ಮೇವು ಬ್ಯಾಂಕ್‌ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಗದಗ ತಹಶೀಲ್ದಾರ್‌ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಾಲೂಕು ಆಡಳಿತವು ಮುಂಜಾಗ್ರತಾ ಕ್ರಮ ವಹಿಸಿ ಮೇವಿನ ದಾಸ್ತಾನು ಮಾಡಲಾಗಿದೆ. ಆಸಕ್ತ ರೈತರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪಿಡಿಒ ರಾಜಕುಮಾರ ಎಚ್.ಬಿ. ಮಾತನಾಡಿ, ಕೋಟುಮಚಗಿ, ನಾರಾಯಣಪುರ ಗ್ರಾಮಗಳ ನಡುವೆ 10,370 ಕೆಜಿ ಮೇವು ಬಂದಿದ್ದು, ಈಗಾಗಲೇ ಬೆರಳೆಣಿಕೆಯಷ್ಟು ರೈತರು ಮೇವುವನ್ನು ಖರೀದಿ ಮಾಡಿದ್ದಾರೆ. ಗ್ರಾಪಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹವಿದ್ದು, ಅವಶ್ಯವಿರುವ ರೈತರು ಪಶು ವೈದ್ಯಾಧಿಕಾರಿಗಳಿಂದ ಶಿಫಾರಸು ಪತ್ರವನ್ನು ತೆಗೆದುಕೊಂಡು ಬಂದು ಹಣ ಕೊಟ್ಟು ಮೇವುವನ್ನು ಯಾವುದೇ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬಹುದು ಎಂದರು.

ಗ್ರಾಮ ಲೆಕ್ಕಾಧಿಕಾರಿ ಜೆ.ಪಿ. ಜಯರಾಮ, ಪಶು ವೈದ್ಯಾಧಿಕಾರಿ ಪುಷ್ಪಾ ಮಾಲಗಿತ್ತಿಮಠ, ಬಿ.ಆರ್‌. ತಿಮ್ಮನಗೌಡ್ರ, ವಿಆರ್‌ಡಬ್ಲೂ ಮುತ್ತಣ್ಣ ಹವಾಜಿ, ನಜೀರ ಹಿರೇಹಾಳ, ಬಸವರಾಜ ಚಿಗರಿ, ರುದ್ರಗೌಡ ಸಂಕನಗೌಡ್ರ, ರಾಮಣ್ಣ ತಳವಾರ, ಮುಡಿಯಪ್ಪ ಕಮ್ಮಾರ, ಬೂದಪ್ಪ ಜಂತ್ಲಿ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next