Advertisement

ಶೀಘ್ರವೇ ಇನ್ಫೋಸಿಸ್‌ನಿಂದ ಮೇವು ವಿತರಣೆ

05:19 PM Apr 30, 2019 | Team Udayavani |

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಿಸಲು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಭರವಸೆ ನೀಡಿದ್ದಾರೆ ಎಂದು ಗೋರಕ್ಷಣಾ ಸಮಿತಿ ಸದಸ್ಯ ಸಿ.ಪಿ.ಮಹೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

‘ಚಿತ್ರನಾಯಕನಹಳ್ಳಿ ದೇವರ ಎತ್ತುಗಳ ರಕ್ಷಣೆಗೇಕೆ ನಿರ್ಲಕ್ಷ್ಯ’ ಎಂಬ ಶಿರ್ಷಿಕೆಯಡಿ ಏ.29ರಂದು ಉದಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ಗಮನಿಸಿದ ಜಪಾನಂದಸ್ವಾಮೀಜಿ ಈಗಾಗಲೇ ಕಳೆದ ಕೆಲವು ತಿಂಗಳನಿಂದ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಸೇದೇವರಹಟ್ಟಿ, ಕುರುಡಿಹಳ್ಳಿ ಲಂಬಾಣಿ ಹಟ್ಟಿ ಮುಂತಾದ ಗ್ರಾಮಗಳ ದೇವರ ಎತ್ತುಗಳಿಗೆ ಮೇವನ್ನು ಉಚಿತವಾಗಿ ಪೂರೈಸ‌ಲಾಗುತ್ತಿದೆ.

ಚಿತ್ರನಾಯಕನಹಳ್ಳಿಯ ದೇವರ ಎತ್ತುಗಳಿಗೂ ಸಹ ಬೆಂಗಳೂರಿನ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ಶೀಘ್ರವೇ ಮೇವು ಪೂರೈಸಲಾಗುವುದು. ಸುದ್ದಿಯನ್ನು ಗಮನಿಸಿದ ನಮ್ಮ ಆಶ್ರಮ ಕೂಡಲೇ ಬೆಂಗಳೂರಿನ ಇನ್ಫೋಸಿಸ್‌ ಫೌಂಡೇಶನ್‌ ಗಮನಕ್ಕೆ ತಂದಾಗ ಅವರು ಕೂಡಲೇ ತಾತ್ಕಾಲಿಕವಾಗಿಯಾದರೂ ಒಂದು ಲೋಡ್‌ ಮೇವು ಗ್ರಾಮಕ್ಕೆ ತಲುಪಿಸುವಂತೆ ಸೂಚನೆ ನೀಡಿದ್ದಾರೆ. ಅವರ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಮೇವು ಪೂರೈಕೆಗಾಗಿ ಕ್ರಮ ಕೈಗೊಂಡಿದ್ದು, ಒಂದೆರಡು ದಿನಗಳಲ್ಲಿ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ತಾಲೂಕಿನ ಲಕ್ಷಾಂತರ ಜಾನುವಾರುಗಳು ಮೇವು ಹಾಗೂ ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಪ್ರತಿನಿತ್ಯ ಜಾನುವಾರುಗಳಿಗೆ ಮೇವು, ನೀರು ಪೂರೈಸ‌ುವುದೇ ರೈತರಿಗೆ ಸವಾಲಿನ ಕೆಲಸವಾಗಿದ್ದು, ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಈ ಬಗ್ಗೆ ಗಮನಹರಿಸದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಡೆ ಪಕ್ಷ ಮಳೆ ಬರುವವರೆಗಾದರೂ ತಾಲೂಕಿನ ಜಾನುವಾರುಗಳಿಗೆ ಮೇವು ಬ್ಯಾಂಕ್‌ ಸ್ಥಾಪಿಸಿ ಮೇವು ನೀಡುವಂತೆ ಮಹೇಶ್‌ಕುಮಾರ್‌ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next