Advertisement

ಕೈಗೆ ಸಿಗದ ಚಂದಿರ ಕಣ್ಣಿಗೆ ಇಂಪು

10:25 AM Jul 25, 2017 | |

ಇಷ್ಟಕ್ಕೂ ಪ್ರೀತಿಸಿದವರನ್ನೇ ಮದುವೆಯಾಗಬೇಕೆಂಬ ನಿಯಮವಿಲ್ಲವಲ್ಲ..! ಹಾಗೇನಾದರೂ ಪ್ರೀತಿಸಿದವರನ್ನೇ ಮದುವೆಯಾಗಬೇಕೆಂಬ ನಿಯಮ ಇದ್ದಿದ್ದರೇ ಏನೇನು ನಡೆಯುತ್ತಿತ್ತೋ ಜಗತ್ತಿನಲ್ಲಿ? ಪ್ರೇಮದಲ್ಲಿ ವಿಫಲವಾದವವರು ಯಾರೂ ಇರುತ್ತಿರಲಿಲ್ಲ! 

Advertisement

ನನ್ನ ಪಾಡಿಗೆ ನಾನು ಕಾಲೇಜಿಗೆ ಹೋಗುತ್ತಿದ್ದೆ. ನನ್ನ ರೀತಿಯಲ್ಲಿಯೇ ಅನೇಕರು ಕಾಲೇಜಿಗೆ ಬರುತ್ತಿದ್ದರು. ಪ್ರತಿ ಸಾರಿ ಕ್ಲಾಸಿನಲ್ಲಿ ಮೇಷ್ಟ್ರು ಮಾಡಿದ ಪಾಠದಲ್ಲಿ ಏನಾದರೂ ಡೌಟ್‌ ಕೇಳಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಅದೇ ಪ್ರಶ್ನೆಯನ್ನು ಸಹಪಾಠಿಯೊಬ್ಬಳು ಕೇಳಿಬಿಡುತ್ತಿದ್ದಳು. ಇದು ಒಂದೆರಡು ಸಲವಲ್ಲ. ಪದೇಪದೆ ಆಗುತ್ತಿತ್ತು. ಅದಕ್ಕೇ ನಾನು ಆ ಹುಡುಗಿಯನ್ನು ಗಮನಿಸಲು ಶುರುಮಾಡಿದೆ. ಅವಳ ಎಲ್ಲಾ ಯೋಚನಾಲಹರಿಯೂ ನನ್ನ ರೀತಿಯಲ್ಲಿಯೇ ಇತ್ತು. ನಾನು ಹೇಗೆ ಅಲೋಚಿಸುತ್ತೇನೋ, ಅವಳೂ ಹಾಗೆಯೇ ಅಲೋಚಿಸುತ್ತಿದ್ದಳು. ಅದು ಎಷ್ಟರಮಟ್ಟಿಗೆಂದರೆ, ಇವಳೇನಾದರೂ ಹುಡುಗನಾಗಿದ್ದರೆ ನಾವಿಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಆಗಿರುತ್ತಿದ್ದೆವು. ನಮ್ಮ ಚಿಂತನೆಗಳು ಅಷ್ಟೊಂದು ಚೆನ್ನಾಗಿ ಹೊಂದಾಣಿಕೆಯಾಗುತ್ತಿದ್ದವು! ನನಗೆ ಅವಳ ಮೇಲೆ ಪ್ರೀತಿ ಹುಟ್ಟಿತು.

ನಾನೇನು ಪ್ರೀತಿಯ ವಿಷಯವನ್ನು ಅವಳಿಗೆ ತಿಳಿಸಲಿಲ್ಲ. ಅದಕ್ಕೆ ಕಾರಣವೂ ಇತ್ತು; ಅವಳಿಗೆ ಅದಾಗಲೇ ನಿಶ್ಚಿತಾರ್ಥವಾಗಿತ್ತು! ಆ ವಿಷಯ ಗೊತ್ತಿದ್ದೂ ನನ್ನಲ್ಲಿ ಪ್ರೀತಿ ಹುಟ್ಟಿತ್ತು. ಇಂಥ ಸಂದರ್ಭದಲ್ಲಿ ನಾನು ಅವಳಿಗೆ ಪ್ರೇಮ ನಿವೇದನೆಯನ್ನು ಮಾಡಿದರೆ, ಅವಳ ಮನ ನೋಯುತ್ತದೆಂದು ನನಗೂ ಗೊತ್ತು! ಈ ಕಾರಣದಿಂದಲೇ ನಾನು ಅವಳಿಗೆ ಪ್ರೇಮ ನಿವೇದನೆಯನ್ನು ಮಾಡಲಿಲ್ಲ. ಆದರೂ ಒಂದು ದಿನ ಇದ್ದಕ್ಕಿದ್ದ ಹಾಗೆ ಅವಳೇ ನನ್ನ ಹತ್ತಿರ ಬಂದು, “ನನ್ನ ಬಗ್ಗೆ ನಿನಗೆ ಏನನ್ನಿಸುತ್ತದೆಂದು ತಿಳಿಸು’ ಎಂದು ಕೇಳಿಕೊಂಡಳು. ಈಗಾಗಲೇ ಅವಳ ಮೇಲೆ ನನಗೆ ವಿಪರೀತ ಪ್ರೀತಿ ಇರುವುದರಿಂದ ಅದನ್ನೇ ನಾನು ಅವಳಿಗೆ ತಿಳಿಸಿದೆ. ನಾನು ಊಹಿಸಿದಂತೆಯೇ ಅವಳು ಬೇಜಾರು ಮಾಡಿಕೊಂಡಳು. ಎರಡು ದಿನ ನನ್ನ ಜೊತೆ ಮಾತಾಡಲಿಲ್ಲ. ನಂತರ ಅವಳು “ನಾನು ಈಗಾಗಲೇ ಮತ್ತೂಬ್ಬರಿಗೆ ನಿಶ್ಚಯವಾಗಿದ್ದೇನೆ. ನನ್ನನ್ನು ಪ್ರೀತಿಸಬೇಡ. ನಾವಿಬ್ಬರೂ ಸ್ನೇಹಿತರಾಗಿಯೇ ಇರೋಣ’ ಎಂದು ತಿಳಿಸಿದಳು. “ನನಗೆ ಆ ವಿಷಯ ತಿಳಿದಿದೆ’ ಎಂದೆ. 

“ಗೊತ್ತಿದ್ದೂ ಯಾಕೆ ಪ್ರೀತಿಸಿದೆ?’- ಕೇಳಿದಳು. ನಾನಂದೆ, “ಸಿಗುತ್ತೆ ಎಂದು ತಿಳಿದು ಪ್ರೀತ್ಸೋದೇ ಆಸೆ. ಸಿಗುವುದಿಲ್ಲವೆಂದು ತಿಳಿದರೂ ಪ್ರೀತ್ಸೋದೇ ನಿಜವಾದ ಪ್ರೀತಿ’. ಅವಳು ಸುಮ್ಮನಾದಳು. 

ಇಷ್ಟಕ್ಕೂ ಪ್ರೀತಿಸಿದವರನ್ನೇ ಮದುವೆಯಾಗಬೇಕೆಂಬ ನಿಯಮವಿಲ್ಲವಲ್ಲ! ಹಾಗೇನಾದರೂ ಪ್ರೀತಿಸಿದವರನ್ನೇ ಮದುವೆಯಾಗಬೇಕೆಂಬ ನಿಯಮ ಇದ್ದಿದ್ದರೇ ಏನೇನು ನಡೆಯುತ್ತಿತ್ತೋ ಜಗದಲ್ಲಿ? ಪ್ರೇಮದಲ್ಲಿ ವಿಫಲವಾದವವರು ಯಾರೂ ಇರುತ್ತಿರಲಿಲ್ಲ! ಪ್ರೇಮದಲ್ಲಿ ವಿಫಲವಾದವವರು ಇರುವುದರಿಂದಲೇ ಪ್ರೀತಿಗೆ ಅರ್ಥವಿರೋದು. ನಾವು ಎಷ್ಟೇ ಗಾಢವಾಗಿ ಪ್ರೀತಿಸಿದ್ದರೂ ಕೆಲಮೊಮ್ಮೆ ಪರಿಸ್ಥಿತಿಗಳಿಗೆ ತಲೆಬಾಗಿ ಪ್ರೀತಿಯನ್ನು ಕೈಚೆಲ್ಲಬೇಕಾಗುತ್ತದೆ! ನಾವು ಪ್ರೀತಿಸಿದವರು ಎಲ್ಲಿದ್ದರೂ ಚೆನ್ನಾಗಿರಬೇಕೆಂದು ಆಶಿಸುವುದಕ್ಕಿಂತ ದೊಡ್ಡ ಪ್ರೀತಿ ಮತ್ತೂಂದಿಲ್ಲ! 

Advertisement

ಇಂತಿ ನಿನ್ನ ಅಮರಪ್ರೇಮಿ…
ಗಿರೀಶ್‌ ಚಂದ್ರ ವೈ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next