Advertisement

ಕಡಿಮೆ ಓಟು ಬಂದತ್ತ ಗಮನ ನೀಡಿ

11:11 AM May 12, 2019 | pallavi |

ಹುಬ್ಬಳ್ಳಿ: ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಕಡಿಮೆ ಮತ ಬಂದಿರುವುದಕ್ಕೆ ಸೂಕ್ತ ಕಾರಣ ಗುರುತಿಸಿ ಆ ಭಾಗದಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ಬರುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿನ ಕಮಡೊಳ್ಳಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಬಂದಿರುವ ಕುರಿತು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಂದ ಕಾರಣ ತಿಳಿಯುವ ಪ್ರಯತ್ನ ಮಾಡಿದರು. ಸ್ಥಳೀಯವಾಗಿ ಪಕ್ಷದ ಸಂಘಟನೆ, ಚುನಾವಣೆಯಲ್ಲಿ ಕಾರ್ಯಕರ್ತರ ಚಟುವಟಿಕೆ ಕುರಿತು ಮಾಹಿತಿ ಪಡೆದ ಅವರು, ಪಕ್ಷ ಬಿಟ್ಟು ಹೋಗಿರುವ ಕಾರ್ಯಕರ್ತರೊಂದಿಗೆ ನಾನು ಮಾತನಾಡಿ ಪಕ್ಷಕ್ಕೆ ಕರೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮತದಾನ ಕಡಿಮೆಯಾಗಿರುವುದಕ್ಕೆ ಕಾರಣ ಗುರುತಿಸಿ ಈ ಚುನಾವಣೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಬಿದ್ದ ಮತಗಳು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬರುವಂತೆ ನೋಡಿಕೊಳ್ಳಬೇಕು. ವೇದಿಕೆ ಸಭೆಗಳಿಗೆ ಹೆಚ್ಚು ಒತ್ತು ಕೊಡದೆ ಮನೆ ಮನೆ ಪ್ರಚಾರ ನಡೆಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮಾಡಿರುವ ಸಾಧನೆ ಹಾಗೂ ಸಿ.ಎಸ್‌.ಶಿವಳ್ಳಿ ಅವರು ಕ್ಷೇತ್ರದ ಬಗ್ಗೆ ಹೊಂದಿರುವ ಕಾಳಜಿ ನಮ್ಮ ಚುನಾವಣೆಗೆ ಶ್ರೀರಕ್ಷೆಯಾಗಿದೆ. ಈ ಎರಡೂ ಅಂಶಗಳನ್ನು ಕ್ಷೇತ್ರದ ಜನರಿಗೆ ಮುಟ್ಟಿಸಬೇಕು. ನಾಯಕರ ಹಿಂದೆ ಸುತ್ತುವುದನ್ನು ಬಿಟ್ಟು ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಮುಂದಾಗಬೇಕು ಎಂದರು.

ಲಿಡ್ಕರ್‌ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪಕ್ಷಕ್ಕಾಗಿ ದುಡಿದ ಶಿವಳ್ಳಿ ಕುಟುಂಬಕ್ಕೆ ಗೌರವ ನೀಡುವ ಕಾರಣಕ್ಕೆ ಕುಸುಮಾವತಿ ಅವರಿಗೆ ಅವಕಾಶ ಕಲ್ಪಿಸಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಸಂವಿಧಾನ ಬದಲಿಸುವ, ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಗಳನ್ನು ಕಿತ್ತೂಗೆಯಬೇಕು ಎನ್ನುವ ಕೋಮುವಾದಿ ಪಕ್ಷಕ್ಕೆ ಬೆಂಬಲಿಸಬಾರದು. ಆ ಪಕ್ಷದಲ್ಲಿರುವ ದಲಿತ ನಾಯಕರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವರಿಗೆ ರಾಜಕೀಯ ಅಧಿಕಾರ ಅನಿವಾರ್ಯತೆಗೆ ತಲೆ ತಗ್ಗಿಸಿಕೊಂಡಿದ್ದಾರೆ ಎಂದರು.ವೀರಕುಮಾರ ಪಾಟೀಲ, ಟಿ.ಈಶ್ವರ, ಸುರೇಶ ಸವಣೂರ, ಶಂಕರಗೌಡ ಪಾಟೀಲ, ಬಸವರಾಜ ನಾಯಕ ಇನ್ನಿತರರಿದ್ದರು.

Advertisement

ಬಿಜೆಪಿ ನಾಯಕರಿಂದ ದಿಕ್ಕು ತಪ್ಪಿಸುವ ಕೆಲಸ

ಹುಬ್ಬಳ್ಳಿ: 2018 ರಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹೆಚ್ಚು ಶಾಸಕರು ಇರುವ ನಮಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಜನರ ದಾರಿ ತಪ್ಪಿಸುವ ಬಿಜೆಪಿ ನಾಯಕರ ಮಾತಿಗೆ ಕಿಮ್ಮತ್ತಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.

ಶನಿವಾರ ಕುಂದಗೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಿಜೆಪಿ ನಾಯಕರು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸರಕಾರ ರಚಿಸಲು ಬೇಡ ಅಂದವರು ಯಾರು? 2018ರ ವಿಧಾನಸಭೆ ಚುನಾವಣೆ ಫ‌ಲಿತಾಂಶ ಬಳಿಕ ಬಿಜೆಪಿ ಸರ್ಕಾರ ರಚಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇಷ್ಟಾದರೂ ಅಧಿಕಾರಕ್ಕೆ ಬರುವ ಕನಸು ಇಟ್ಟುಕೊಂಡಿದ್ದು, ಇದು ಈಡೇರಲ್ಲ ಎಂದು ಲೇವಡಿ ಮಾಡಿದರು.

ಕ್ಷೇತ್ರದಲ್ಲಿ ಒಬ್ಬರೇ ಶಾಸಕಿ: ಕುಸುಮಾವತಿ ಶಿವಳ್ಳಿ ಅವರು ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಿನಿಂದ ತೆಗೆದುಕೊಂಡೇ ಹೋಗುತ್ತಾರೆ. ಇವರೊಬ್ಬರೇ ಕ್ಷೇತ್ರದಲ್ಲಿ ಶಾಸಕರಾಗಿರುತ್ತಾರೆ ವಿನಃ ಮತ್ತಾರು ಆಡಳಿತ ಮಾಡಲ್ಲ. ಬಿಜೆಪಿ ನಾಯಕರಿಗೆ ಅರೋಪ ಮಾಡಲು ಬೇರಾವ ವಿಚಾರ ಇಲ್ಲದ ಕಾರಣಕ್ಕೆ ಇಂತಹ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕುಂದಗೋಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಮ್ರತೆಯಿಂದ ಮನೆ-ಮನೆಗೆ ತೆರಳಿ ಮನವಿ ಮಾಡುವ ಮೂಲಕ ಮತಯಾಚಿಸುತ್ತದೆ. ಭರಾಟೆಯ ಪ್ರಚಾರ ನಡೆಸಲ್ಲ ಎಂದು ತಿಳಿಸಿದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ಕುರಿತು ಚರ್ಚಿಸಲು ಇಲ್ಲಿಗೆ ಬಂದಿದ್ದರು. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವ ಕುರಿತಾಗಿ ಜಲಸಂಪನ್ಮೂಲ ಸಚಿವನಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕುವೆ. ನೀರಿನ ವಿಚಾರ ಹೊರತಾಗಿ ಶ್ರೀಮಂತ ಪಾಟೀಲ ಬೇರೆ ಯಾವ ಬೇಡಿಕೆ ಇಟ್ಟಿಲ್ಲ. ಶ್ರೀಮಂತ ಪಾಟೀಲ ಅವರು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು. ಯಾವ ಪಕ್ಷಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಮಹಿಷಾಸುರ ಮಾಡಿದಂತೆ ಮಾಡಲಿ

ಈಶ್ವರಪ್ಪ ಅವರಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ಅವರ ಖುಷಿಗೆ ಮಹಿಷಾಸುರ ಮಾಡಿದಂತೆ ಮಾಡಲಿ ಬಿಡ್ರಪ್ಪ. 2018 ರಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹೆಚ್ಚು ಶಾಸಕರು ಇರುವ ನಮಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಜನರ ದಾರಿ ತಪ್ಪಿಸುವ ಬಿಜೆಪಿ ನಾಯಕರ ಮಾತಿಗೆ ಕಿಮ್ಮತ್ತಿಲ್ಲ ಎಂದು ಡಿಕೆಶಿ ಹೇಳಿದರು.

ನಾಳೆ ಕುಂದಗೋಳಕ್ಕೆ ಸಿಎಂ ಎ‍ಚ್ಡಿಕೆ ಆಗಮನ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪ ಚುನಾವಣೆ ಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇ 13ರಂದು ಸಂಜೆ 4 ಗಂಟೆಗೆ ಕುಂದಗೋಳಕ್ಕೆ ಆಗಮಿಸಲಿದ್ದಾರೆ. ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾಲೂಕು ಜೆಡಿಎಸ್‌ ಮುಖಂಡ ಹಜರತ್‌ಅಲಿ ಜೋಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಬೆಂಬಲಿಸಲು ಮನವಿ

ಹುಬ್ಬಳ್ಳಿ: ಕ್ಷೌರವೃತ್ತಿ ಮತ್ತು ಮಂಗಳವಾದ್ಯ ವೃತ್ತಿ ಅವಲಂಭಿಸಿರುವ ಸವಿತಾ ಸಮಾಜಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈತ್ರಿ ಸರಕಾರ ಬಹಳಷ್ಟು ಸವಲತ್ತುಗಳನ್ನು ಒದಗಿಸಿದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ಸಮಾಜ ಬೆಂಬಲ ನೀಡಬೇಕೆಂದು ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎಂ.ಎಸ್‌. ಮುತ್ತುರಾಜ್‌ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಸಂಘದಿಂದ ಸಮಾಜದ ಪ್ರತಿ ಸಲೂನ್‌ಗೆ ತೆರಳಿ ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಯಾತ್ರೆ ಮಾಡಲಾಗುತ್ತಿದೆ. ಅಂಗಡಿಗೆ ಬರುವ ಗ್ರಾಹಕರಿಗೂ ಮೈತ್ರಿ ಪರ ಅಭ್ಯರ್ಥಿಗೆ ಮತ ಹಾಕುವಂತೆ ಮನವರಿಕೆ ಮಾಡಲು ಕೋರಲಾಗುವುದು ಎಂದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ಮಾತನಾಡಿ, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.60 ಅಸಂಘಟಿತ ಹಾಗೂ ದಿನಗೂಲಿ ಕಾರ್ಮಿಕರಿದ್ದು, ಅವರ ಸಮಸ್ಯೆಗಳಿಗೆ ಕಾಂಗ್ರೆಸ್‌ ಪಕ್ಷ ಸ್ಪಂದಿಸಿ ಪರಿಹಾರ ನೀಡಿದೆ. ಇಲ್ಲಿ ಕುಸುಮಾವತಿ ಗೆಲ್ಲುವುದು ಖಚಿತವೆಂದರು. ವಿಭಾಗದ ಕಾರ್ಯಾಧ್ಯಕ್ಷ ಡಾ| ಮೋಹನರಾವ ನಲವಡೆ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ರಾಜು ಹಿರೇವಡೆಯರ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಶ್ರೀಂಗಾರಿ, ಮಣಿಕಂಟ ಗುಡಿಹಾಳ, ತಾಜುದ್ದೀನ್‌ ಮುನವಳ್ಳಿ, ದೂರಪ್ಪ ಗಾಂಡೊಳ್ಕರ, ಸಚ್ಚಿದಾನಂದ ರಾಯ್ಕರ ಮೊದಲಾದವರಿದ್ದರು.

ಡಿ.ಕೆ.ಶಿವಕುಮಾರ ಬಗ್ಗೆ ರೇಣು ಹೇಳಿಕೆಗೆ ಖಂಡನೆ

ಹುಬ್ಬಳ್ಳಿ: ಸಚಿವ ಡಿ.ಕೆ. ಶಿವಕುಮಾರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮಾಜಿ ಸಚಿವ ರೇಣುಕಾಚಾರ್ಯ ತಾವೊಬ್ಬ ಸಂಸ್ಕಾರಹೀನ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ವೇದವ್ಯಾಸ ಕೌಲಗಿ ತಿಳಿಸಿದ್ದಾರೆ. ಮಾರಿಹಬ್ಬದ ಕೋಣ ಕಡಿಯುವಂತೆ ಡಿ.ಕೆ. ಶಿವಕುಮಾರ ಅವರನ್ನು ಕಡಿಯಲಾಗುತ್ತದೆ ಎಂಬ ರೇಣುಕಾಚಾರ್ಯ ಅವರ ಹೇಳಿಕೆ ಖಂಡನೀಯ. ಡಿ.ಕೆ. ಶಿವಕುಮಾರ ಆಟ ನಡೆಯುತ್ತದೋ ಇಲ್ಲವೋ ಎಂಬುದು ಚುನಾವಣೆ ಫಲಿತಾಂಶದ ನಂತರ ಗೊತ್ತಾಗುತ್ತದೆ. ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದ ಡಿ.ಕೆ.ಶಿವಕುಮಾರ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಟ ಹು.ಧಾ.ಕೇಂದ್ರ ಕ್ಷೇತ್ರ ಬಿಟ್ಟು ಬೇರೆಲ್ಲಿಯೂ ನಡೆಯುವುದಿಲ್ಲ. ಅವರ ಉಸ್ತುವಾರಿಯಲ್ಲಿ ಯಾವ ಬಿಜೆಪಿ ಅಭ್ಯರ್ಥಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಶೆಟ್ಟರ ಅವರನ್ನು ಯಾರೂ ಕೂಡ ಮಾಸ್‌ ಲೀಡರ್‌ ಎಂದು ಗುರುತಿಸುವುದಿಲ್ಲ. ಬಿಜೆಪಿಯವರದು ಕಟುಕ ಹೃದಯ. ಆದ್ದರಿಂದ ಅವರಿಗೆ ಯಾರ ಜೀವಕ್ಕೂ ಬೆಲೆಯಿಲ್ಲ. ತಮ್ಮ ಆತ್ಮಿಯ ಸ್ನೇಹಿತ ಸಿ.ಎಸ್‌.ಶಿವಳ್ಳಿ ಅವರನ್ನು ನೆನಪಿಸಿಕೊಂಡ ಡಿ.ಕೆ.ಶಿವಕುಮಾರ ಕಣೀ¡ರು ಹಾಕಿದ್ದಾರೆ. ಅವರು ಕಣೀ¡ರು ಹಾಕಲು ಡಿ.ಕೆ.ಶಿವಕುಮಾರ ಅವರ ಮೃಧು ಹೃದಯ ಕಾರಣ ಎಂದು ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಟದೂರ-ಯಲಿವಾಳದಲ್ಲಿ ಎಚ್ಕೆ ಪ್ರಚಾರ

ಹುಬ್ಬಳ್ಳಿ: ಸಮಾಜದ ಸರ್ವತೋಮುಖ ಹಿತಾಸಕ್ತಿಯನ್ನು ಕಾಪಾಡುವ ಮೌಲ್ಯಗಳನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು. ಬೆಟದೂರು-ಯಲಿವಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ದೇಶದಲ್ಲಿ ಬಡತನ ಹೋಗಲಾಡಿಸಬೇಕು ಎನ್ನುವ ಮೂಲ ಗುರಿಯನ್ನು ಇಂದಿರಾ ಗಾಂಧಿ ಹೊಂದಿದ್ದರು. ಈ ಆದರ್ಶವನ್ನು ಮುಂದುವರಿಸಿಕೊಂಡು ಬಂದಿರುವ ಕಾಂಗ್ರೆಸ್‌ ಪಕ್ಷ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನ್ಯಾಯ ಕಾರ್ಯಕ್ರಮ ಘೋಷಿಸಿದೆ. ಬೇರೆ ಪಕ್ಷಗಳು ಊಹಿಸಲು ಸಾಧ್ಯವಿಲ್ಲದ ಕಾರ್ಯಕ್ರಮವಾಗಿದ್ದು, ಬಡವರನ್ನು ಮೇಲೆತ್ತುವ ಕಾರ್ಯವಾಗಿದೆ. ಗ್ರಾಮಮಟ್ಟದ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಮತ ನೀಡಿ ಎಂದರು.

25 ಸಾವಿರ ಲೀಡ್‌ನಿಂದ ಮೈತ್ರಿ ಅಭ್ಯರ್ಥಿ ಗೆಲುವು

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೇವಲ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾದ್ಯ ಎಂಬುದು ಇಲ್ಲಿಯ ಮತದಾರರಿಗೆ ಗೊತ್ತಿರುವ ವಿಷಯ ಎಂದು ಲಿಡ್ಕರ್‌ ನಿಗಮದ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಕುಂದಗೋಳ ತಾಲೂಕಿನ ಕಮಡೊಳ್ಳಿ, ಹೀರೆಹರಕುಣಿ, ಚಿಕ್ಕಹರಕುಣಿ, ಬು.ಕೊಪ್ಪ, ಇಂಗಳಗಿ, ತರ್ಲಘಟ್ಟ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ದಿ| ಸಿ.ಎಸ್‌. ಶಿವಳ್ಳಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಭಾರಿ ಸಂಖ್ಯೆಯಲ್ಲಿ ಜನರು ಸ್ಮರಿಸಿಕೊಳುತ್ತಿದ್ದಾರೆ. ಜಾತಿ, ಧರ್ಮ ಮರೆತು ಕುಸುಮಾ ಶಿವಳ್ಳಿ ಅವರಿಗೆ ಬೆಂಬಲಿಸಲು ಜನರು ನಿರ್ಣಯ ತೆಗೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಸುಮಾರು 25 ಸಾವಿರ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next