ನವದೆಹಲಿ: ಹಬ್ಬಗಳನ್ನು ಆಚರಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದರೆ, ಕೋವಿಡ್ ನಿಯಂತ್ರಣವು ಹಳಿ ತಪ್ಪುವ ಅಪಾಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
ಕೋವಿಡ್ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಪಾಲಿಸುವುದು ಮತ್ತು ಲಸಿಕೆ ವಿತರಣೆಗೆ ವೇಗ ನೀಡುವುದು ಸೋಂಕು ನಿಯಂತ್ರಣಕ್ಕಿರುವ ಮಾರ್ಗಗಳು. ಹಬ್ಬಗಳ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ, ಮುಂದೆ ಅಪಾಯ ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಕರ್ನಾಟಕ ಸೇರಿದಂತೆ 19 ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕರೊಂದಿಗೆ ಶನಿವಾರ ನಡೆದ ಕೋವಿಡ್ ಲಸಿಕೆಯ ಪ್ರಗತಿ ಪರಿಶೀಲನೆ ವೇಳೆ ಸಚಿವ ಮಾಂಡವಿಯ ಈ ಮಾತುಗಳನ್ನಾಡಿದ್ದಾರೆ.
ಜತೆಗೆ, ಭಾರತದಲ್ಲಿ ಈಗಾಗಲೇ 94 ಕೋಟಿ ಡೋಸ್ ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈ 19 ರಾಜ್ಯಗಳು ಲಸಿಕೆ ವಿತರಣೆ ಪ್ರಕ್ರಿಯೆಗೆ ವೇಗ ನೀಡಿದರೆ, ದೇಶವು ಶೀಘ್ರದಲ್ಲೇ 100 ಕೋಟಿ ಡೋಸ್ ಲಸಿಕೆ ವಿತರಣೆ ಪೂರ್ಣಗೊಳಿಸಲಿದೆ ಎಂದೂ ಅವರು ಹೇಳಿದ್ದಾರೆ.
206 ದಿನಗಳಲ್ಲೇ ಕನಿಷ್ಠ ಕೇಸು:
ದೇಶಾದ್ಯಂತ ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳಲ್ಲಿ 19,740 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 248 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 206 ದಿನಗಳಲ್ಲೇ ದಾಖಲಾದ ಕನಿಷ್ಠ ಪ್ರಕರಣ ಇದಾಗಿದೆ.