Advertisement

ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ಗಮನಹರಿಸಿ

09:09 PM Feb 15, 2020 | Lakshmi GovindaRaj |

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಯಾವುದೇ ಕೊರತೆಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಗಮನ ಹರಿಸಬೇಕು. ಕುಡಿಯುವ ನೀರು, ದಾಸೋಹ, ನೈರ್ಮಲ್ಯ, ಶೌಚಾಲಯ, ಸಾರಿಗೆ ವ್ಯವಸ್ಥೆಗೆ ಅಡಚಣೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ,ಮಹದೇಶ್ವರ ಬೆಟ್ಟದ ನಾಗಮಲೆ ಭವನದ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಫೆ.20ರಿಂದ 24ರವರೆಗೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಜಾತ್ರೆಯ ಅಂಗವಾಗಿ ಕೈಗೊಳ್ಳಲಾಗಿರುವ ಪ್ರತಿಹಂತದ ಸಿದ್ಧತೆಗಳನ್ನು ವ್ಯಾಪಕವಾಗಿ ಪರಾಮರ್ಶೆ ನಡೆಸಿದರು.

ನೀರಿನ ಮೂಲ ಶುದ್ಧವಾಗಿರಿಸಿ: ಕುಡಿಯುವ ನೀರು ಪೂರೈಸುವ ಮೂಲಗಳನ್ನು ಶುದ್ಧವಾಗಿರಿಸಿಕೊಳ್ಳಬೇಕು. ನೀರಿನ ಸಂಗ್ರಹಾಗಾರಗಳು ಸ್ವಚ್ಛತೆಯಿಂದ ಇವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಪರಿಸರ ಅಧಿಕಾರಿ, ಇಂಜಿನಿಯರ್‌ಗಳನ್ನು ನಿಯೋಜಿಸಿ ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಕಾಲ್ನಡಿಗೆಯಲ್ಲಿ ಬರುವ ಭಕ್ತಾದಿಗಳಿಗೆ ಕೌದಳ್ಳಿಯಿಂದ ಮಹದೇಶ್ವರ ಬೆಟ್ಟದವರೆಗೆ ಮಾರ್ಗ ಮಧ್ಯೆ ಶುದ್ಧ ನೀರಿನ ವ್ಯವಸ್ಥೆ ಮಾಡಿರುವ ಬಗ್ಗೆ ಪರಿಶೀಲಿಸಿದ ಡೀಸಿ, ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನೀರು ಪೋಲಾಗದಂತೆ ಅಗತ್ಯ ವ್ಯವಸ್ಥೆ ಹಾಗೂ ತಿಳಿವಳಿಕೆ ನೀಡುವ ಕೆಲಸವಾಗಬೇಕು ಎಂದು ತಿಳಿಸಿದರು.

ಭಕ್ತಾದಿಗಳಿಗೆ ಅರಿವು ಮೂಡಿಸಿ: ತಾಳುಬೆಟ್ಟದಲ್ಲಿ ಭಕ್ತಾದಿಗಳಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲು ಕಿಯಾಸ್ಕ್ ಮಾದರಿಯಲ್ಲಿ ವ್ಯವಸ್ಥೆಯಾಗಬೇಕು. ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿರುವುದರಿಂದ ತಾಳಬೆಟ್ಟ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಳಸದಿರುವಂತೆ ಜಾಗೃತಿ ಮೂಡಿಸುವ ಫ‌ಲಕಗಳು, ಪರಿಸರ ಸಂರಕ್ಷಣೆ ಹಾಗೂ ಶುಚಿತ್ವ, ಸೇರಿದಂತೆ ಇನ್ನಿತರ ವಿಧಾನಗಳ ಮೂಲಕ ಭಕ್ತಾದಿಗಳಿಗೆ ಅರಿವು ಮೂಡಿಸಬೇಕು ಎಂದರು.

ಜಾತ್ರಾ ಸಂದರ್ಭದಲ್ಲಿ ಹೋಗಿಬರಲು ಕೆಎಸ್‌ಆರ್‌ಟಿಸಿ ಹಾಗೂ ತಮಿಳುನಾಡು ಸಾರಿಗೆ ಸಂಸ್ಥೆಯಿಂದಲೂ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಬೇಕು. ಪಾರ್ಕಿಂಗ್‌ ವಾಹನಗಳ ನಿಲುಗಡೆಗೆ ಈಗಾಗಲೇ ಗುರುತಿಸಲಾಗಿರುವ ಜಾಗಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಜನರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಪೂರ್ವ ನಿಯೋಜಿತ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

Advertisement

ತಾತ್ಕಾಲಿಕ ಶೌಚಾಲಯ ನಿರ್ಮಿಸಿ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ನೆರಳು ಹಾಗೂ ವಾಸ್ತವ್ಯಕ್ಕೆ ಯಾವುದೇ ಕೊರತೆಯಾಗಬಾರದು. ಸ್ನಾನಘಟ್ಟ, ಅಂತರಗಂಗೆ ಇನ್ನಿತರ ಕಡೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈಗಿರುವ ಶೌಚಾಲಯಗಳ ಜತೆಗೆ ಮತ್ತಷ್ಟು ತಾತ್ಕಾಲಿಕ ಶೌಚಾಲಯಗಳನ್ನು ತೆರೆಯಬೇಕು. ಪ್ರತಿನಿತ್ಯವು ಸ್ವಚ್ಛತಾ ಕೆಲಸವನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ತ್ಯಾಜ್ಯ ಸಂಗ್ರಹಣೆ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಸೇವೆಗೆ ಸಿದ್ಧರಾಗಿ: ಜಾತ್ರೆ ವೇಳೆ ಜನರ ಆರೋಗ್ಯ ಸೇವೆಗಾಗಿ ವೈದ್ಯಕೀಯ ಸಿಬ್ಬಂದಿ ಅಗತ್ಯ ಸಿದ್ಧತೆಯೊಂದಿಗೆ ಸನ್ನದ್ಧರಾಗಿರಬೇಕು. ಅಂಬುಲೆನ್ಸ್‌, ಅಗತ್ಯ ಔಷಧೋಪಚಾರಕ್ಕೆ ಸಿಬ್ಬಂದಿ ನಿಯೋಜಿತರಾಗಿರಬೇಕು. ಎಲ್ಲಾ ಅವಧಿಯಲ್ಲಿಯೂ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು. ಹೋಟೆಲ್‌ಗ‌ಳಲ್ಲಿ ಕಡ್ಡಾಯವಾಗಿ ಕುಡಿಯಲು ಬಿಸಿನೀರನ್ನು ಒದಗಿಸಬೇಕು. ನೈರ್ಮಲ್ಯ ಕಾಪಾಡಿಕೊಳ್ಳಬೇಕು. ದಾಸೋಹ ಇನ್ನಿತರ ಎಲ್ಲಾ ಬಗೆಯ ಪ್ರಸಾದ ಹಾಗೂ ಪರು ಮಾಡುವ ಕಡೆ ಆಹಾರವನ್ನು ಪರೀಕ್ಷಿಸಬೇಕು. ಜಾತ್ರಾ ಸಮಯದಲ್ಲಿ ಅಗತ್ಯ ಪೊಲೀಸ್‌ ಬಂದೋಬಸ್ತ್ ಇರಬೇಕು. ಮದ್ಯ ಮಾರಾಟ, ಸಾಗಾಣಿಕೆ, ಸಂಗ್ರಹಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು. ಎಲ್ಲ ಇಲಾಖೆಗಳು ಈ ಎಲ್ಲಾ ಸೂಚನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ಜಾತ್ರಾ ಮಹೋತ್ಸವದ ಕೆಲಸಗಳನ್ನು ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಸಾಲೂರು ಶ್ರೀಗಳಾದ ಗುರುಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ರಾಜಶೇಖರ ಮೂರ್ತಿ, ಉಪವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ, ಡಿವೈಎಸ್‌ಪಿ ನವೀನ್‌, ತಹಶೀಲ್ದಾರ್‌ ಕೆ. ಕುನಾಲ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next