ಮುಂಬಯಿ: ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಹೇರುವ ಬದಲು ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ಆದ್ಯತೆ ನೀಡಿ ಮತ್ತು ಸಾವಿನ ಪ್ರಮಾಣವನ್ನು ಇಳಿಕೆ ಮಾಡಲು ಪ್ರಯತ್ನಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮಂಗಳವಾರ(ಮಾರ್ಚ್ 30) ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರೀ ಗಾಳಿ ಮಳೆಗೆ ಕಡಲ ಕಿನಾರೆಗೆ ಬಂದು ನಿಂತ ಮೀನುಗಾರಿಕಾ ಬೋಟ್ ಗಳು!
ಮಹಾರಾಷ್ಟ್ರದಲ್ಲಿ ದಿನೇ, ದಿನೇ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ವಾರ ಸುಳಿವು ನೀಡಿರುವ ನಿಟ್ಟಿನಲ್ಲಿ ಆನಂದ್ ಮಹೀಂದ್ರಾ ಅವರು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಟ್ವೀಟ್ ಗೆ ಟ್ಯಾಗ್ ಮಾಡಿರುವ ಮಹೀಂದ್ರಾ ಅವರು, ಉದ್ಧವ್ ಠಾಕ್ರೆಜೀ, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸಿದರೆ ಇದರಿಂದ ಬಡವರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಸಣ್ಣ ಉದ್ಯಮದಾರರಿಗೆ ತೊಂದರೆಯಾಗಲಿದೆ. ಲಾಕ್ ಡೌನ್ ಜಾರಿ ಬದಲು ಅಗತ್ಯವಾಗಿರುವ ಕೋವಿಡ್ ಆಸ್ಪತ್ರೆ, ಆರೋಗ್ಯ ಮೂಲಸೌಕರ್ಯ ಹೆಚ್ಚಿಸಿ. ಅಲ್ಲದೇ ಸಾವಿನ ಪ್ರಮಾಣ ತಗ್ಗಿಸಲು ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಕರಣ 27 ಲಕ್ಷ ದಾಟಿ ಹೋಗಿದ್ದು, ಸಾವಿನ ಪ್ರಮಾಣ 54,000ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ರಾಜ್ಯದಲ್ಲಿ ಜನರು ಕೋವಿಡ್ ಮಾರ್ಗಸೂಚಿ ಅನುಸರಿಸದೇ ಇದ್ದಲ್ಲಿ, ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಸಿದ್ಧತೆ ಮಾಡುವಂತೆ ಕೋವಿಡ್ 19 ಟಾಸ್ಕ್ ಪೋರ್ಸ್ ಗೆ ಸೂಚಿಸಿದ್ದರು.