ಮಹದೇವಪುರ: ನಗರದಲ್ಲಿ ಸುರಿದ ಬಾರಿ ಮಳೆಗೆ ಮತ್ತೂಮ್ಮೆ ವರ್ತೂರು ಕೆರೆ ಕೋಡಿಯಲ್ಲಿ ಉಕ್ಕಿ ಬಂದಿರುವ ನೊರೆ, ಗಾಳಿಗೆ ರಸ್ತೆ ಮೇಲೆ ಹಾರಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಕಳೆದ ಮೂರು ದಿನಗಳಿಂದ ನಗರದಲ್ಲಿ ಆಲಿಕಲ್ಲು ಸಹಿತ ಧಾರಕಾರ ಮಳೆ ಸುರಿಯುತ್ತಿರುವ ಕಾರಣ ವರ್ತೂರು ಕೆರೆಗೆ ನೀರಿನ ಒಳ ಹರಿವು ಹೆಚ್ಚಾಗಿದೆ. ಪರಿಣಾಮ ಕೆರೆ ಕೋಡಿಯಲ್ಲಿ ನೊರೆ ಉತ್ಪತ್ತಿಯಾಗಿದೆ. ಅಲ್ಲದೆ ಕೆರೆ ನೀರು ಹರಿಯುವ ಕಾಲುವೆಯಲ್ಲಿ ಕೆ.ಸಿ ವ್ಯಾಲಿ (ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ಹಾಯಿಸುವ) ಯೋಜನೆಗೆ ಪೈಪ್ ಅಳವಡಿಕೆ ಕಾಮಾಗಾರಿ ನಡೆಯುತ್ತಿರುವುದರಿಂದ ಕಾಲುವೆ ಕಿರಿದಾಗಿದ್ದು, ನೊರೆಯ ಪ್ರಮಾಣ ಹೆಚ್ಚಾಗಲು ಇದೂ ಕೂಡ ಕಾರಣವಾಗಿದೆ.
ಈ ಹಿಂದೆ ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದ ನೊರೆ ಉಂಟಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ನೊರೆ ರಸ್ತೆಗೆ ಹಾರದಂತೆ ಬಿಬಿಎಂಪಿಯಿಂದ ಮೆಶ್ ಅಳಡಿಸಲಾಗಿತ್ತು. ಜತೆಗೆ ನೊರೆ ಹೆಚ್ಚಾಗದಂತೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸಲಾಗುತ್ತಿತ್ತು. ಅದರೆ ಕೆ.ಸಿ.ವ್ಯಾಲಿ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಮೆಶ್ ತೆಗೆಯಲಾಗಿದೆ. ಅಲ್ಲದೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸುವುದನ್ನೂ ನಿಲ್ಲಿಸ;ಆಗಿದೆ. ಹೀಗಾಗಿ ನೊರೆ ಹೆಚ್ಚಾಗಿ ಜನರಿಗೆ ತೊಂದರೆಯಾಗಿದೆ.
ದಶಕಗಳಿಂದ ವರ್ತೂರು ಕೆರೆ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದ್ದು, ಈ ಮಾಲಿನ್ಯದಿಂದ ನಾವು ಬಳಲುತ್ತಿದ್ದೇವೆ. ಅಲ್ಲದೆ ಅಗಾಗ ಇಲ್ಲಿ ವಿಷಪೂರಿತ ನೊರೆ ಉತ್ಪತ್ತಿಯಾಗುತ್ತಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮಕೈಗೊಂಡಿಲ್ಲ.
-ಗಣೇಶ್, ಸ್ಥಳಿಯ