Advertisement

ಬ್ರಹ್ಮಾವರಕ್ಕೆ ಎಫ್ಎಂ ಸ್ಟೇಷನ್‌: ಸಚಿವ ಅನುರಾಗ್‌ ಸಿಂಗ್‌

01:06 AM Dec 25, 2022 | Team Udayavani |

ಉಡುಪಿ: ಬ್ರಹ್ಮಾವರ ತಾಲೂಕಿಗೆ 4 ತಿಂಗಳೊಳಗೆ ಎಫ್ಎಂ ಸ್ಟೇಷನ್‌ ಮಂಜೂರು ಮಾಡ ಲಾಗುವುದು. ರಾಜ್ಯದ 8 ಜಿಲ್ಲೆಗೆ ಒಂದರಂತೆ ಕ್ರೀಡಾ ವಿಜ್ಞಾನ ತೆರೆಯಲು ಅನುಮತಿ ನೀಡಲಾಗುತ್ತಿದೆ ಎಂದು ಯುವಜನ ಮತ್ತು ಕ್ರೀಡೆ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಕೇಂದ್ರ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ.ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಿಸಿರುವ ಕ್ರೀಡಾ ವಿಜ್ಞಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಸೈನ್ಸ್‌ ಸೆಂಟರ್‌ನಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಖೇಲೋ ಇಂಡಿಯಾ ಮೂಲಕ ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಕರ್ಯ ನೀಡಲಾಗುತ್ತಿದೆ ಎಂದರು.

ಭಾಗವಹಿಸುವಿಕೆ ಮುಖ್ಯ
ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಭಾಗವಹಿಸುವಿಕೆ ಮುಖ್ಯ. ಪೋಷಕರು ಮಕ್ಕಳಿಗೆ ಒತ್ತಡ ಹಾಕಬಾರದು. ಕೋಚ್‌ಗಳ ತರಬೇತಿಗೆ ಬೆಂಬಲವಾಗಿರಬೇಕು ಎಂದರು.

ಅನುದಾನ ಹೆಚ್ಚಳ
2014ಕ್ಕಿಂತ ಮುಂಚೆ ಕ್ರೀಡೆಗೆ ಹೆಚ್ಚಿನ ಅನುದಾನವಿರಲಿಲ್ಲ. ಹಿಂದೆ ಕ್ರೀಡೆಗೆ 864 ಕೋ.ರೂ. ನೀಡಲಾಗುತ್ತಿತ್ತು. ಪ್ರಸ್ತುತ 3,100 ಕೋ.ರೂ. ಮೀಸಲಿರಿಸಿದೆ. 2014ರಲ್ಲಿ 630 ಕೋ.ರೂ. ವೆಚ್ಚದಲ್ಲಿ ವಿವಿಧ ಕ್ರೀಡೆಗೆ ಸಂಬಂಧಿಸಿದ ಮೂಲ ಸೌಕರ್ಯ ಕಾಮಗಾರಿ ನಡೆಯುತ್ತಿತ್ತು. ಪ್ರಸ್ತುತ ಇದು 2,700 ಕೋ. ರೂ.ಗೆ ಏರಿಕೆಯಾಗಿದೆ ಎಂದರು.

Advertisement

ಕ್ರೀಡೆಯ ಬಗ್ಗೆ ಸುಲಭ ಮಾಹಿತಿ
ಕೇಂದ್ರ ಸರಕಾರ ಖೇಲೋ ಇಂಡಿಯಾ ಡ್ಯಾಷ್‌ ಬೋರ್ಡ್‌ ಪ್ರಾರಂಭಿಸಲಾಗಿದೆ. ಕ್ರೀಡಾಂಗಣಗಳು, ಕೋಚಿಂಗ್‌ಗಳ ಬಗ್ಗೆ ಸಮಗ್ರ ಮಾಹಿತಿ ಕ್ರೀಡಾಳುಗಳಿಗೆ ಲಭಿಸಲಿದೆ. ತಮ್ಮ ನೆರೆಹೊರೆಯ ಕ್ರೀಡಾಂಗಣಗಳ ಬಗ್ಗೆ ಸುಲಭದಲ್ಲಿ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.

ಹೆಚ್ಚುವರಿ ಅನುದಾನ
ರಾಜ್ಯ ಸರಕಾರ 500 ಕೋ.ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಲ್ಲಿಯೂ ಕ್ರೀಡಾಂಗಣಗಳನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ. ಇದರಿಂದ ಮಕ್ಕಳಿಗೆ ಸ್ಥಳೀಯ ಮಟ್ಟದಲ್ಲಿ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಾಲ ಸೌಲಭ್ಯ
ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಪಂಚಾಯತ್‌ ಹಂತದಲ್ಲಿಯೂ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 400ಕ್ಕೂ ಅಧಿಕ ಕ್ರೀಡಾಂಗಣಗಳನ್ನು ಸಜ್ಜುಗೊಳಿಸಲಾಗಿದೆ. 75 ಕ್ರೀಡಾಪಟುಗಳನ್ನು ದತ್ತು ಸ್ವೀಕರಿಸಲಾಗಿದೆ. ಅಮೃತ ಯೋಜನೆಯಡಿ ಕ್ರೀಡಾಳುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸ್ವದ್ಯೋಗಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌. ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿ.ಪಂ. ಸಿಇಒ ಪ್ರಸನ್ನ, ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಮಣಿಪಾಲ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಮಂಗಳೂರು ವಿ.ವಿ. ರಿಜಿಸ್ಟ್ರಾರ್‌ ಕಿಶೋರ್‌ ಕುಮಾರ್‌ ಉಪಸ್ಥಿತರಿದ್ದರು.

ಶಾಸಕ ರಘುಪತಿ ಭಟ್‌ ಪ್ರಸ್ತಾವನೆಗೈದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಮುಲ್ಲಾಯ್‌ ಮುಹಿಲನ್‌ ಎಂ.ಪಿ. ಸ್ವಾಗತಿಸಿದರು. ಡಾ| ರೀನಾ ಪರ್ವಿನ್‌ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next