ಆಂಧ್ರಪ್ರದೇಶಕ್ಕೆ ಕೇಂದ್ರ ಸರಕಾರದಿಂದ ವಿಶೇಷ ಸ್ಥಾನಮಾನ ಸಿಗದೆ ಇದ್ದರೂ 2024-25ನೇ ಸಾಲಿನ ಆಯ-ವ್ಯಯದಲ್ಲಿ ಭರಪೂರ ಅನುದಾನ ದೊರೆತಿದೆ. ಆಂಧ್ರಪ್ರದೇಶದ ಹೊಸ ರಾಜಧಾನಿ ನಿರ್ಮಾಣಕ್ಕೆ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಜ್ಯದ ರಾಜಧಾನಿ ಅಭಿವೃದ್ಧಿಗೆ ಪ್ರಸಕ್ತ ಮತ್ತು ಮುಂದಿನ ವರ್ಷಗಳಲ್ಲಿ ವಿಶೇಷ ಹಣಕಾಸು ನೆರವು ನೀಡುವುದಾಗಿ ಹೇಳಿದರು.
ಇದರಿಂದಾಗಿ ಆಂಧ್ರಪ್ರದೇಶದಲ್ಲಿ ನೂತನ ರಾಜಧಾನಿಯ ಮಧ್ಯೆ ಹೊಯ್ದಾಟ ಮುಗಿದಿದ್ದು ಅಮರಾವತಿಯನ್ನು ಆಂಧ್ರಪ್ರದೇಶದ ಏಕೈಕ ರಾಜಧಾನಿಯನ್ನಾಗಿ ಕೇಂದ್ರ ಸರಕಾರ ಒಪ್ಪಿಕೊಂ ಡಂತಾಗಿದೆ. ಇದರಿಂದ ನೂತನ ರಾಜಧಾನಿ ನಿರ್ಮಾಣಕ್ಕೆ ಹಣಕಾಸಿನ ನೆರವು ದೊರೆಯಲಿದೆ. ಈ ಹಿಂದಿನ ವೈಎಸ್‌ಆರ್‌ಪಿ ನೇತೃತ್ವದ ಜಗನ್‌ಮೋಹನ ರೆಡ್ಡಿ ಸರಕಾರ ಆಂಧ್ರಪ್ರದೇಶಕ್ಕೆ 3 ರಾಜಧಾನಿಗಳನ್ನು ಘೋಷಿಸಿತ್ತು. ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲ್ ಅಭಿವೃದ್ಧಿಪಡಿಸುವು ದಾಗಿ ಹೇಳಿತ್ತು. ಆದರೆ ಟಿಡಿಪಿಯ ಚಂದ್ರಬಾಬು ನಾಯ್ಡು ಸರಕಾರ ರಾಜ್ಯಕ್ಕೆ ಏಕೈಕ ರಾಜಧಾನಿಯಾಗಿ ಅಮರಾವತಿಗೆ ಅಸ್ತು ಎಂದಿದ್ದು ಅಭಿವೃದ್ಧಿ ಕಾರ್ಯಗಳಿಗೆ ಇನ್ನು ಬೂಸ್ಟರ್ ಸಿಗಲಿದೆ.
ಇದರ ಜತೆಗೆ 2004ರಿಂದ ಕುಂಟುತ್ತ ಸಾಗಿರುವ ಪೋಲಾವರಂ ನೀರಾವರಿ ಯೋಜನೆ ಪೂರ್ಣ ಗೊಳಿಸಲು ಅನುದಾನ ನೀಡುವುದಾಗಿ ಘೋಷಿಸ ಲಾಗಿದೆ. ನೀರಾವರಿ ಯೋಜನೆ ಪೂರ್ಣಗೊಳಿಸುವ ವಿಚಾರದಲ್ಲಿ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು. 194 ಟಿಎಂಸಿ ನೀರು ಸಾಮರ್ಥ್ಯದ ಪೋಲಾವರಂ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಅಗಾಧ ಮೊತ್ತ ಅಗತ್ಯವಾಗಿರುವುದರಿಂದ ಯೋಜನೆ ಪೂರ್ಣಗೊಳ್ಳುತ್ತಿಲ್ಲ. 2016ರಲ್ಲೇ ಇದನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಕೇಂದ್ರ ಸರಕಾರ ಘೋಷಿಸಿದ್ದರೂ ಸಾಕಷ್ಟು ಅನುದಾನ ಪ್ರತಿ ಬಜೆಟ್‌ನಲ್ಲಿ ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆ ಟಿಡಿಪಿಯು ಕೇಂದ್ರ ಸರಕಾರದ ಬೆನ್ನು ಬಿದ್ದಿತ್ತು.
ಇದಲ್ಲದೇ ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಗೆ ಹಿಂದುಳಿದ ಪ್ರಾಂತ್ಯಗಳ ನಿಧಿ ಕೂಡ ನೀಡುವುದಾಗಿ ಸಚಿವರು ಪ್ರಕಟಿಸಿದ್ದಾರೆ. ಇದರಿಂದ ರಾಜ್ಯದ ಹಿಂದುಳಿದ ಪ್ರಾಂತ್ಯಗಳಾದ ರಾಯಲಸೀಮಾ, ಪ್ರಕಾಶಂ, ಉತ್ತರ ಕರಾವಳಿ ಪ್ರಾಂತ್ಯಗಳು ನೀರು, ವಿದ್ಯುತ್, ರೈಲ್ವೆ ಮತ್ತು ರಸ್ತೆ ಅಭಿವೃದ್ಧಿಗೆ ಹಣಕಾಸಿನ ನೆರವು ಪಡೆಯಲಿವೆ. ಅಲ್ಲದೆ ಕೈಗಾರಿಕಾ ಅಭಿವೃದ್ಧಿಗೆ ಅನುದಾನ ದೊರೆಯಲಿದೆ. ಬೆಂಗಳೂರು- ಹೈದ್ರಾಬಾದ್, ಚೆನ್ನೈ-ಹೈದ್ರಾಬಾದ್ ಕೈಗಾರಿಕಾ ಕಾರಿಡಾರ್‌ಕಳೆದ ವರ್ಷ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ದೊರೆತ ಹಿನ್ನೆಲೆಯಲ್ಲಿ ಆಡಳಿತಾರೂಢ ಟಿಡಿಪಿ ಹರ್ಷ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ, ಆಂಧ್ರ ಸಚಿವ ನಾ.ರಾ.ಲೋಕೇಶ್ ಅವರು ಎನ್‌ಡಿಎ ಸರಕಾರಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಇದು ಆಂಧ್ರಪ್ರದೇಶದ ಮರು ನಿರ್ಮಾರ್ಣಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಪ್ರಮುಖ ಯೋಜನೆಗಳು?
-ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.
-ಪೋಲಾವರಂ ನೀರಾವರಿ ಯೋಜನೆ ಪೂರ್ಣಕ್ಕೆ ಅನುದಾನ
-ರಾಜ್ಯದ ಅತಿ ಹಿಂದುಳಿದ 3 ಜಿಲ್ಲೆಗಳಿಗೆ ಹಿಂದುಳಿದ ಪ್ರಾಂತ್ಯ ನಿಧಿ
ಕೇಂದ್ರ ಸರಕಾರಕ್ಕೆ ಧನ್ಯವಾದಗಳು
ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಮತ್ತು ರಾಜ್ಯದ ಜನರ ಜೀವನಾಡಿಯಾದ ಪೋಲಾವರಂ ಪ್ರಾಜೆಕ್ಟ್ ಪೂರ್ಣಗೊಳಿಸಲು ಅನುದಾನ ನೀಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು. ಆಂಧ್ರಪ್ರದೇಶದ ಮರು ನಿರ್ಮಾಣಕ್ಕೆ 15 ಸಾವಿರ ಕೋಟಿ ರೂ. ಒದಗಿಸಿದ ಎನ್‌ಡಿಎ ಸರಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
-ನಾ.ರಾ.ಲೋಕೇಶ್, ಆಂಧ್ರ ಸಚಿವ ಮತ್ತು ಚಂದ್ರಬಾಬು ನಾಯ್ಡು ಪುತ್ರ