Advertisement

ಚನ್ನಮ್ಮ ವೃತ್ತದ ಫ್ಲೈಓವರ್‌ ಕನಸು ನನಸಾಗುವ ಕಾಲ ಸನಿಹ

04:44 PM Sep 01, 2020 | Suhan S |

ಹುಬ್ಬಳ್ಳಿ: ವಾಹನಗಳ ದಟ್ಟಣೆ ಸರಿದೂಗಿಸುವ ನಿಟ್ಟಿನಲ್ಲಿ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಅನೇಕ ವರ್ಷಗಳದ್ದಾಗಿದ್ದು, ಇದೀಗ ಫ್ಲೈಓವರ್‌ ಕನಸು ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ. ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಯತ್ನಕ್ಕೆ ಮಹತ್ವದ ಫ‌ಲ ದೊರೆತಂತಾಗಿದೆ.

Advertisement

ಹುಬ್ಬಳ್ಳಿಗೆ ವ್ಯಾಪಾರ-ವಹಿವಾಟು, ಆರೋಗ್ಯ ಇನ್ನಿತರ ದೃಷ್ಟಿಯಿಂದ ಸಾಕಷ್ಟು ಜನರು ಆಗಮಿಸುತ್ತಿದ್ದು, ನಗರವೂ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯತೊಡಗಿದೆ. ವಾಹನಗಳ ಸಂಚಾರ ಸಂಖ್ಯೆಯಲ್ಲೂ ವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ರಸ್ತೆಗಳ ವ್ಯವಸ್ಥೆ ಇಲ್ಲವಾಗಿದ್ದು, ನಗರದ ಹೃದಯ ಭಾಗ ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ಆಗಬೇಕು ಎಂಬ ಕೂಗು ಅನೇಕ ವರ್ಷಗಳದ್ದಾಗಿತ್ತು. ಸ್ಥಳದಲ್ಲೇ ಸಮ್ಮತಿ ಸೂಚಿಸಿದ್ದ ಗಡ್ಕರಿ: ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಈ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದಾಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣದ ಬೇಡಿಕೆ ಸಲ್ಲಿಸಿದ್ದರು. ಸ್ಥಳದಲ್ಲೇ ಇದಕ್ಕೆ ಸಮ್ಮತಿ ಸೂಚಿಸಿದ್ದ ಸಚಿವ ನಿತಿನ್‌ ಗಡ್ಕರಿ ಅವರು, ಈ ಕುರಿತು ಪ್ರಸ್ತಾವನೆ ಸಲ್ಲಿಸಿದಲ್ಲಿ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದರು. ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಕೆ ವಿಚಾರದಲ್ಲಿ ವಿಳಂಬ, ಒಂದಿಷ್ಟು ಗೊಂದಲ ಉಂಟಾಗಿತ್ತಾದರೂ, ಅಂತಿಮವಾಗಿ ರಾಜ್ಯದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

ಒಪ್ಪಿಗೆ ಆದೇಶ ಪತ್ರ ರವಾನೆ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣ ಯೋಜನೆ ಕುರಿತಾಗಿ ಖುದ್ದಾಗಿ ಕಾಳಜಿ ವಹಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಚಿವ ಸಂಪುಟದಲ್ಲಿ ತಮ್ಮ ಪ್ರಭಾವ ಬೀರುವ ಮೂಲಕ ಅಂದಾಜು 298 ಕೋಟಿ ವೆಚ್ಚದ ಯೋಜನೆಗೆ ಕೇಂದ್ರದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಯೋಜನೆಗೆ ಒಪ್ಪಿಗೆ ನೀಡಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಜ್ಯದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಯೋಜನೆಯ ಒಪ್ಪಿಗೆಯ ಆದೇಶ ಪತ್ರ ರವಾನಿಸಿದೆ. ಇನ್ನೇನಿದ್ದರೂ ಯೋಜನೆ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳುವುದು ರಾಜ್ಯ ಸರಕಾರದ ಕಾರ್ಯವಾಗಿದೆ.

ಫ್ಲೈಓವರ್‌ ಒಂದೇ ಪರಿಹಾರ :  ಚನ್ನಮ್ಮ ವೃತ್ತದಲ್ಲಿ ಬೆಂಗಳೂರು ಕಡೆಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ-ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಹೀಗೆ ವಿವಿಧ ಹೆದ್ದಾರಿಗಳು ಸಮಾಗಮಗೊಳ್ಳುತ್ತಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ರಸ್ತೆ ಅಗಲೀಕರಣಕ್ಕೆ ಕಷ್ಟಸಾಧ್ಯದ ಸ್ಥಿತಿ ಇದ್ದು, ಫ್ಲೈಓವರ್‌ ಒಂದೇ ಪರಿಹಾರವಾಗಿತ್ತು. ಇದೀಗ ಫ್ಲೈಓವರ್‌ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದೆನಿಸುತ್ತಿದೆ.

ಟ್ರಾಫಿಕ್‌ ಜಾಮ್‌ ಸಮಸ್ಯೆ :  ಬಿಆರ್‌ಟಿಎಸ್‌ ಬಸ್‌ಗಳ ಸಂಚಾರಕ್ಕೆ ಹು-ಧಾ ನಡುವೆ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದ್ದರೂ ಹುಬ್ಬಳ್ಳಿ ಹಾಗೂ ಧಾರವಾಡ ನಗರ ಪ್ರವೇಶಿಸುತ್ತಿದ್ದಂತೆಯೇ ಪ್ರತ್ಯೇಕ ರಸ್ತೆ ವ್ಯವಸ್ಥೆ ಇಲ್ಲದೆಯೇ ಇತರೆ ವಾಹನಗಳ ಜತೆಯಲ್ಲಿಯೇ ಬಿಆರ್‌ಟಿಎಸ್‌ ಬಸ್‌ಗಳು ಸಾಗಬೇಕಾಗಿದೆ. ಮುಖ್ಯವಾಗಿ ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಗುತ್ತಿದೆ.

Advertisement

ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅಂದಾಜು 298 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಸಂತಸವಾಗಿದೆ. ಯೋಜನೆ ಸಂಚಾರ ಸಮಸ್ಯೆಗೆ ಮಹತ್ವದ ಪರಿಹಾರ ಆಗಬಲ್ಲದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  -ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next