ನವದೆಹಲಿ: ನಿಸರ್ಗ ಚಂಡಮಾರುತ ಬುಧವಾರ ಮಹಾರಾಷ್ಟ್ರ ಬಳಿಯ ಅಲಿಭಾಗ್ ಕರಾವಳಿಯಲ್ಲಿ ಗಂಟೆಗೆ 110 ಕಿ.ಮೀ ವೇಗದಲ್ಲಿ ಬಂದು ಅಪ್ಪಳಿಸಿದ್ದು ಭಾರೀ ಗಾಳಿ- ಮಳೆಯೊಂದಿಗೆ, ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ರಾಯಗಢದಿಂದ 87 ಕಿ. ಮೀ ದೂರದಲ್ಲಿರುವ ಶ್ರೀವರ್ಧನ್ ಬಳಿಯ ಏರಿಯಾವೊಂದರಲ್ಲೂ ಈ ಚಂಡಮಾರುತ ತನ್ನ ಪ್ರತಾಪ ತೋರ್ಪಡಿಸಿದೆ. ಇತ್ತೀಚಿಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಾಂಗ್ಲಾದೇಶದಲ್ಲಿ ಅಟ್ಟಹಾಸ ಬೀರಿದ ಆಂಫಾನ್ ಚಂಡಮಾರುತದಂತೆ, ನಿಸರ್ಗ ಕೂಡ ಕೂಡ ಅಬ್ಬರಿಸುವ ಮುನ್ಸೂಚನೆ ಇದ್ದರೂ ಬುಧವಾರ ಅಪರಾಹ್ನ 2:30ರ ವೇಳೆಗೆ ಚಂಡಮಾರುತದ ಪ್ರಭಾವ ಇಳಿಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ರಭಸಕ್ಕೆ ಪುಣೆಯಲ್ಲಿ ಇಬ್ಬರು, ರಾಯಭಾಗ್‌ನಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ರಾಯ್‌ಭಾಗ್ ಭಾಗದಲ್ಲಿ ಸುಮಾರು 100 ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಕೆಲವು ಮರಗಳು, ವಿದ್ಯುತ್ ಕಂಬಗಳು ಮನೆಗಳ ಮೇಲೆ ಬಿದ್ದಿವೆ. ಹಲವು ಕಡೆ ಮೇಲ್ಛಾವಣಿಗಳು ಹಾರಿ ಹೋಗಿವೆ. ಸಹಸ್ರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇದೀಗ ಚಂಡಮಾರುತದ ಪ್ರಭಾವ ತೋರ್ಪಡಿಸುವ ಕೆಲವು ವಿಡಿಯೋಗಳು ಬಿಡುಗಡೆಗೊಂಡಿದ್ದು ಭಯಾನಕವಾಗಿದೆ. ಈ ವಿಡಿಯೋವನ್ನು ಎನ್ ಡಿ ಆರ್ ಎಫ್ ನ ಡಿಜಿ ಸತ್ಯ ನಾರಾಯಣ್ ಪ್ರಧಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇವರು ರಾಯಗಡ್ ಜಿಲ್ಲೆಯ ಪೆನ್ ಪ್ರದೇಶದವರು.
ಗಾಳಿಯ ರಭಸಕ್ಕೆ ಮುಂಬಯಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು,ಕಂಬಗಳು ಬಿದ್ದ ಪರಿಣಾಮ ವಾಹನಗಳು, ಮನೆಗಳು ಜಖಂಗೊಂಡಿವೆ. ಮುಂಬಯಿಯ ಸಾಂತಾಕ್ರೂಸ್‌ನಲ್ಲಿ ಸಿಮೆಂಟ್ ಇಟ್ಟಿಗೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಕರಾವಳಿ ತೀರದ 40 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಇದೇ ರೀತಿ ಗುಜರಾತ್‌ನಲ್ಲಿ 50 ಸಾವಿರ ಮಂದಿ ಹಾಗೂ ಕೇಂದ್ರಾಡಳಿತ ಪ್ರದೇಶ ದಮನ್‌ನಿಂದ 4 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು.
ಚಂಡಮಾರುತವು ಪುಣೆಯತ್ತ ಸಾಗುತ್ತಿದ್ದಂತೆ, ಹಲವಾರು ತಗ್ಗು ಪ್ರದೇಶಗಳ ಕಡೆ ನೀರು ನುಗ್ಗಿದ್ದವು.