Advertisement

ಹಾರುತ ದೂರಾದೂರ…

09:05 AM Jun 06, 2019 | mahesh |

ಹೋಟೆಲ್‌ನಲ್ಲಿ ಹರಟುತ್ತಿರುವಾಗ, ತಡೆಯಲಾರದೆ, ಇಲ್ಲಿನ ಹಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ಆಗುತ್ತಿರುವ ದಾರುಣಗಳ ಬಗ್ಗೆ ಹೇಳಿ, “ನಮ್ಮ ದೇಶದಲ್ಲೇ ಸರ್ವೀಸ್‌ ಮಾಡಬಹುದಲ್ಲಾ ?’ ಅಂತ ಕೇಳಿದೆ. ಅವರು ಮುಗುಳ್ನಗುತ್ತಾ ತಗಾದೆಯ ಧ್ವನಿಯಲ್ಲಿ, “ಅಷ್ಟು ದೊಡ್ಡ ಪ್ಯಾಕೇಜ್‌ ಬಿಟ್ಟು, ಇಲ್ಲಿ ಕೆಲಸ ಮಾಡೋದಾ?’ ಅಂದರು…

Advertisement

ಈ ಕಡೆ ಸೀಟಿನಲ್ಲಿ ಕುಳಿತ ವ್ಯಕ್ತಿಗೆ ಸುಮಾರು 28ರ ಪ್ರಾಯ. ಬಸ್‌ ಹತ್ತಿದಾಗಿನಿಂದಲೂ ಆತ ನಿದ್ದೆಯೊಂದನ್ನು ಬಿಟ್ಟು ಇನ್ನೇನನ್ನೂ ಮಾಡುತ್ತಿಲ್ಲ. ತೆಳು ದೇಹ, ದಪ್ಪ ಕನ್ನಡಕ. ತನ್ನೊಂದಿಗೆ ತನ್ನ ಟ್ರ್ಯಾಲಿಯನ್ನು ನೆರಳಿನಂತೆ… ಇಲ್ಲ ನೆರಳಾದರೂ ಕತ್ತಲಲ್ಲಿ ಬಿಡುವುದೇನೋ, ಆತ ಅರೆಗಳಿಗೆಯೂ ಅದನ್ನು ಬಿಟ್ಟಿರುತ್ತಿಲ್ಲ. ಬಸ್‌ ನಿಲ್ಲಿಸಿದಾಗ, ಹೋದಲ್ಲೆಲ್ಲ ಬಾಲದಂತೆ, ಆ ಟ್ರ್ಯಾಲಿಯನ್ನು ಎಳಕೊಂಡು ಹೋಗುತ್ತಲೇ ಇರುತ್ತಿದ್ದ.

ಪೂನಾ ಹೈವೇಲಿ ಬಸ್‌, ಊಟಕ್ಕೆ ನಿಲ್ಲಿಸಿತು. ಆತ ತನ್ನ ಟ್ರ್ಯಾಲಿಯ ಪಕ್ಕದಲ್ಲಿಯೇ ಕುಳಿತ. ಅವರಮ್ಮ- ಅಪ್ಪ ಬೇರೆ ಟೇಬಲ್‌. ಕುತೂಹಲ ತಾಳಲಾರದೇ, ನಾನು ಅವರಪ್ಪ- ಅಮ್ಮನ ಜತೆ ಕುಳಿತೆ.

ಚಿತ್ರದುರ್ಗದವರೇ ಆದ್ದರಿಂದ ಪರಿಚಯವಾಗಲು ತಡವಾಗಲಿಲ್ಲ. ಮಾತಿನಲ್ಲೇ ಹತ್ತಿರವಾದೆವು. ಅವರಪ್ಪ ರೆವಿನ್ಯೂ ಇಲಾಖೆ- ಅಮ್ಮ ಶಿಕ್ಷಕಿ. ಇಡೀ ಕುಟುಂಬ ವಿವೇಕಾನಂದರ ಆರಾಧಕರು. ಇತ್ತೀಚೆಗಷ್ಟೆ ಕೋಲ್ಕತ್ತಾದ ಬೇಲೂರಿಗೂ ಹೋಗಿ ಬಂದಿದ್ದಾರೆ. ತಡೆಯಲಾರದೆ, ಅವರ ಮಗ ಮತ್ತು ಟ್ರ್ಯಾಲಿಯ ಬಗ್ಗೆ ಕೇಳಿದೆ.

ಅವನ ಹೆಸರು, ಪದ್ಮನಾಭನ್‌. ವೈದ್ಯಕೀಯ ಮುಗಿಸಿ, ಉದ್ಯೋಗಕ್ಕಾಗಿ ಇನ್ನೆರಡು ದಿನಗಳಲ್ಲಿ ನ್ಯೂಯಾರ್ಕ್‌ಗೆ ಹೊರಡುವವನಿದ್ದ. “ಡಾಕ್ಯುಮೆಂಟ್ಸ್‌ ಕಳೆದುಹೋದ್ರೆ…’, ಅನ್ನೋ ಭಯ. ಅವನ ಜೀವವೆಲ್ಲ ಆ ಟ್ರ್ಯಾಲಿಯಲ್ಲೇ ಇತ್ತು. ಅದಕ್ಕಾಗಿ ಆತ ಟ್ರ್ಯಾಲಿ ಬಿಟ್ಟು ಇರುತ್ತಿಲ್ಲ. ಅವನ ಅಣ್ಣ, ಈಗಾಗಲೇ ಎಂ.ಡಿ. ಮುಗಿಸಿ, ಅಲ್ಲೇ ಸೆಟಲ್‌ ಆಗಿದ್ದಾನೆ. ಈಗ ಈತನ ಜೀವನದ ಉದ್ದೇಶವೂ ಅದೇ. ನಮ್ಮ ಬಹುಪಾಲು ಯುವಜನತೆಯನ್ನು ಪ್ರತಿನಿಧಿಸುತ್ತಿರುವಂತೆ ಕಂಡ.

Advertisement

ಹೋಟೆಲ್‌ನಲ್ಲಿ ಹರಟುತ್ತಿರುವಾಗ, ತಡೆಯಲಾರದೆ, ಇಲ್ಲಿನ ಹಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ಆಗುತ್ತಿರುವ ದಾರುಣಗಳ ಬಗ್ಗೆ ಹೇಳಿ, “ಇಲ್ಲೇ ಸರ್ವೀಸ್‌ ಮಾಡಬಹುದಲ್ಲಾ?’ ಅಂತ ಕೇಳಿದೆ.

ಅವರು ಮುಗುಳ್ನಗುತ್ತಾ ತಗಾದೆಯ ಧ್ವನಿಯಲ್ಲಿ, “ಅಷ್ಟು ದೊಡ್ಡ ಪ್ಯಾಕೇಜ್‌ ಬಿಟ್ಟು, ಇಲ್ಲಿ ಕೆಲಸ ಮಾಡೋದಾ?’ ಅಂದರು. ಬಸ್‌ ಮೇಲಿದ್ದ, ಕೈಕಟ್ಟಿ ನಿಂತ ವಿವೇಕಾನಂದರ ಉದ್ದುದ್ದ ಫೋಟೋ ಯಾಕೋ ಕಿರುನಗೆ ಬೀರಿದಂತೆನಿಸಿತು. ಬಸ್‌ ಹೊರಟಿತು. ಇನ್ನೇನು ಜೊಂಪು ಹತ್ತಬೇಕು… ಟಿ.ವಿ.ಯ ಸದ್ದು. ಪ್ರಯಾಸದಿಂದ ಕಣ್ಣು- ಕಿವಿ ಆ ಕಡೆ ತಿರುಗಿಸಿದರೆ, ಯಾವುದೋ ಸೈನಿಕನ ಕುರಿತಾದ ಸಿನಿಮಾ. ಗಾಯಾಳು ಸೈನಿಕನ ಮುಖ ಕಂಡು, ಮನಸು ರಣರಂಗಕ್ಕೆ ನುಸುಳಿತು. ಈ ಕಡೆ ತಿರುಗಿ ನೋಡಿದರೆ, ಅದೇ ಪದ್ಮನಾಭನ್‌ ಮತ್ತು ಅವನ ಟ್ರ್ಯಾಲಿ…

ಯಾಕೋ, ಕೊರಿಯಾದ 1950ರ ಯುದ್ಧದ ವೇಳೆ ಸ್ಟೆಥೋಸ್ಕೋಪ್‌ ತೂಗಿ ಹಾಕಿಕೊಂಡ ಆರ್ಮಿ ವೈದ್ಯನ ಚಿತ್ರ ಕಣ್ಮುಂದೆ ಬಂತು… ಲೆ. ಕಲೋನಲ್‌ ಎ ಜಿ. ರಂಗರಾಜನ್‌ ಅವರ ಫೋಟೋ. ಕೊರಿಯಾ ಯುದ್ಧದ ವೇಳೆಯ ಇವರ ಸಾಹಸ ಸ್ಮರಣೀಯ.

ಸತತ 3 ವರ್ಷಗಳ ಯುದ್ಧ. ಆದರೆ, ದಕ್ಷಿಣ ಕೊರಿಯಾಕ್ಕೆ ಪಡೆಗಳನ್ನು ಕಲಿಸುವಂತೆ ಯುನೈಟೆಡ್‌ ನೇಷನ್ ನಿಂದ 21 ರಾಷ್ಟ್ರಗಳಿಗೆ ಕರೆ ಬಂತು. ಭಾರತ ಆಗಷ್ಟೇ ಸ್ವಾತಂತ್ರ್ಯ ಪಡೆದು, ಚೇತರಿಸಿಕೊಳ್ಳುವ ಹಂತದಲ್ಲಿತ್ತು. ಆದ್ದರಿಂದ, ಮಿಲಿಟರಿ ಪಡೆ ಕಳುಹಿಸದೇ ವೈದ್ಯಕೀಯ ಪಡೆ ಕಳುಹಿಸಿತ್ತು. ಅದೇ ಲೆ. ಕಲೋನಲ್‌ ಎ.ಜಿ. ರಂಗರಾಜನ್‌ರ 346 ಜನರ ಪಡೆ. ಕೊರಿಯಾ ನೆಲದಲ್ಲಿ ಹಗಲು ರಾತ್ರಿಯೆನ್ನದೇ, 20 ಸಾವಿರ ಮಂದಿಗೆ ಚಿಕಿತ್ಸೆ ಕೊಟ್ಟರು. 2,300 ಶಸ್ತ್ರಚಿಕಿತ್ಸೆ ನಡೆಸಿ, ಅಷ್ಟೂ ಜೀವಗಳನ್ನು ರಕ್ಷಿಸಿದರು. ಈ ಯೂನಿಟ್‌ನ ಸೇವೆ ಪರಿಗಣಿಸಿ, ಅಮೆರಿಕ ಸರ್ಕಾರ ಬ್ರೋನ್‌l ಸ್ಟಾರ್‌ ಮತ್ತು ಐತಿಹಾಸಿಕ ಸಾಧನೆಗೆ ಡೆಕೊರೇಷನ್‌ ಅವಾರ್ಡ್‌ ನೀಡಿದೆ. ದೆಹಲಿಯಲ್ಲಿ ಭಾರತ ಮತ್ತು ದ. ಕೊರಿಯಾ ಜಂಟಿಯಾಗಿ ಕೊರಿಯಾ ಯುದ್ಧದ ಮೆಮೋರಿಯಲ್‌ ರಚನೆಗೆ ಮುಂದಾಗಿವೆ. ಭಾರತ ಸರ್ಕಾರ ಈ ಕುರಿತು ಅಂಚೆ ಚೀಟಿಯನ್ನೂ ಹೊರಡಿಸಿದೆ. ರಂಗರಾಜನ್‌ ಅವರಿಗೆ ಮಹಾವೀರ ಚಕ್ರ ನೀಡಿಯೂ ಗೌರವಿಸಿದೆ. ದೇಶಕ್ಕಾಗಿ ಪ್ರಾಣ ತೆರುವಂಥ ಸೈನಿಕರಿಗೆ, ಜೀವದಾನ ನೀಡುವ ವೈದ್ಯನ ಕೆಲಸ ಇನ್ನೆಷ್ಟು ಏರು ಎತ್ತರದ್ದು!

ಅದೇ ರೀತಿ ಇನ್ನೊಬ್ಬ ಮಿಲಿಟರಿ ವೈದ್ಯ, ಡಾ. ದ್ವಾರಕನಾಥ ಶಾಂತರಾಮ ಕೊಟ್ನೀಸ್‌. ಭಾರತ ಮತ್ತು ಚೀನಾದ ಹೃದಯವನ್ನು ಬೆಸೆದವ. ಅಖಂಡ ಚೀನಾದಲ್ಲಿ ಇರುವುದು ಮೂವರು ಭಾರತೀಯ ಪ್ರತಿಮೆಗಳು ಮಾತ್ರ. ಬುದ್ಧ, ಗಾಂಧಿ ಮತ್ತು ಕೊಟ್ನೀಸ್‌ ಅವರದ್ದು. ಚೀನಾದ ಮುಖಂಡರು ಭಾರತಕ್ಕೆ ಭೇಟಿ ನೀಡಿದಾಗ, ಕೊಟ್ನೀಸ್‌ ಮನೆಯವರನ್ನು ಮಾತಾಡಿಸದೇ ಹೋಗುವುದಿಲ್ಲ. ಭಾರತದ ಪ್ರಮುಖರು ಚೀನಾಕ್ಕೆ ಭೇಟಿ ನೀಡಿದಾಗ ಕೊಟ್ನೀಸ್‌ರ ಪ್ರತಿಮೆಗೆ ಹಾರ ಅರ್ಪಿಸದೇ ಮರಳುವುದಿಲ್ಲ.

ಕೊಟ್ನೀಸ್‌, ಅತ್ಯಂತ ಕಷ್ಟದಲ್ಲಿ ವೈದ್ಯಕೀಯ ಪದವಿ ಪಡೆಯುವ ಹೊತ್ತಿನಲ್ಲಿ, ಅವರ ಕಣ್ಣೆದುರು ಇದ್ದ ಚಿತ್ರವೇ ಬೇರೆ. 1937ರಲ್ಲಿ ಜಪಾನ್‌ ದಾಳಿಯಿಂದಾಗಿ ಚೀನಾ ಸಹಸ್ರಾರು ಸೈನಿಕರನ್ನು ಕಳಕೊಂಡಿತ್ತು. ಆಗ ಚೀನಾದ ಮನವಿಗೆ ಓಗೊಟ್ಟು ಭಾರತ, ವೈದ್ಯರ ತಂಡವೊಂದನ್ನು ಕಳುಹಿಸಿತ್ತು. ಆಗಷ್ಟೇ ವೈದ್ಯ ಪದವಿ ಪಡೆದು ಹೊರಬಂದಿದ್ದ, ಡಾ. ಕೊಟ್ನೀಸ್‌ ಮತ್ತು ಡಾ. ಅಟಲ್‌ ಸೇರಿ ಐವರು ವೈದ್ಯರನ್ನೊಳಗೊಂಡ ತಂಡ ಕೆಲವೇ ದಿನಗಳಲ್ಲಿ ಚೀನಾದ ಗಡಿಯಲ್ಲಿತ್ತು. ಆರು ಸಾವಿರ ಸೈನಿಕರಿಗೆ ಊಟ- ನಿದ್ದೆ- ಮನೆ- ಮಠ ಮರೆತು, ಚಿಕಿತ್ಸೆ ನೀಡಿ, ಜೀವದಾನ ಮಾಡಿದರು. ಉಳಿದ ವೈದ್ಯರು ಹಿಂತಿರುಗಲು ಚಡಪಡಿಸುತ್ತಿದ್ದರೆ, ಮೃತ್ಯು ಮುಖದಲ್ಲಿದ್ದ ಸೈನಿಕರನ್ನು ಬಿಟ್ಟು ತೆರಳಲು ಮನಸಾಗದೇ ಡಾ. ಕೊಟ್ನೀಸ್‌ ಅಲ್ಲೇ ಉಳಿದುಬಿಟ್ಟರು.
|
ಸಾವಿರಾರು ಸೈನಿಕರ ಪ್ರಾಣ ಉಳಿಸಿದರು. ಕೊಳೆಯುತ್ತಿದ್ದ, ಸೈನಿಕರ ಶವಗಳಿಗೆ ಮಮತೆಯಿಂದ ಅಂತ್ಯಸಂಸ್ಕಾರ ಮಾಡಿದರು. ಕೊಟ್ನೀಸ್‌ ಅವರಿಗಾಗಿ ಪ್ರತ್ಯೇಕ ಕ್ವಾಟ್ರಸ್‌ ನೀಡಿದ್ದರೂ, ಅವರು ನರಳಾಡುತ್ತಿದ್ದ ಸೈನಿಕರ ಡೇರೆಗಳಲ್ಲಿಯೇ KOTNISಮಲಗುತ್ತಿದ್ದರು. ಸೈನಿಕರು ಅವರನ್ನು ಕಳಿಸಲಿಲ್ಲ, ಅವರೂ ಹಿಂತಿರುಗಲಿಲ್ಲ. ಇವರು ಚೀನಾದಲ್ಲಿದ್ದಿದ್ದು, ಐದೇ ವರುಷ. ಸರ್ವಸ್ವವನ್ನೂ ಸೈನಿಕರಿಗಾಯೇ ತ್ಯಜಿಸಿದ್ದು ಅವರ ಜೀವಮಾನ ಸಾಧನೆ.

ಬಸ್ಸು ಚಹಾ ವಿರಾಮಕ್ಕೆಂದು ಬ್ರೇಕ್‌ ಒತ್ತಿತು. ಪದ್ಮನಾಭನ ಕಡೆಗೆ ನೋಡಿದೆ, ಅವನು ಟ್ರ್ಯಾಲಿಯ ಇರುವಿಕೆ ಖಚಿತಪಡಿಸಿಕೊಳ್ಳುವ ಅವಸರದಲ್ಲಿದ್ದ.

– ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next