Advertisement
*ಅರವಿಂದ ನಾವಡ
Related Articles
Advertisement
ಭೂತ, ವರ್ತಮಾನ ಹಾಗೂ ಭವಿಷ್ಯ-ಮೂರೂ ಕಾಲಕ್ಕೆ ಧ್ವನಿಸುವ ಚಿತ್ರವಿದು ಎನ್ನುವುದು ವಿಶೇಷ. ಕಥೆ ಆರಂಭವಾಗುವುದೇ ಆನೆಗಳು ಹಾರುತ್ತಿವೆ ಎಂಬ ಕಲ್ಪನೆಯಲ್ಲಿ. ತಾಯಿ ಆನೆಯೊಂದು ತನ್ನ ಪೂರ್ವಜರ ಬದುಕನ್ನು ವಿವರಿಸುತ್ತಾಳೆ. ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ಹಾರುತ್ತಿದ್ದರಂತೆ. ಒಂದು ದಿನ ಆಲದ ಮರದ ಮೇಲೆ ಸಂತೋಷದಿಂದ ನಮ್ಮದೇ ಖುಷಿ, ಗೌಜಿಯಲ್ಲಿದ್ದಾಗ ಏನಾಯಿತು? ಹೇಗೆ ಭೂಮಿಗೆ ಬಂದೆ ಎಂದು ವಿವರಿಸುತ್ತಾಳೆ ತಾಯಿ. ಕಥೆಯ ಪೂರ್ವಾರ್ಧದ ಪ್ರಕಾರ ತಪೋಭಂಗವಾದ ಮುನಿ ಶಾಪ ಕೊಟ್ಟು ಆನೆಯ ರೆಕ್ಕೆಯನ್ನು ಕಿತ್ತುಕೊಂಡನಂತೆ.
ಆ ಬಳಿಕ ವರ್ತಮಾನಕ್ಕೆ ಕಥೆಯನ್ನು ಅನ್ವಯಿಸಿ, ಇಂದು ನಡೆಯುತ್ತಿರುವ ಆನೆಗಳ ಹತ್ಯೆ, ದಂತಗಳಿಗಾಗಿ ಆನೆಗಳ ಹನನ, ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಸೇರಿದಂತೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಿರುವ ನಮ್ಮ [ಮನುಷ್ಯರ] ಹಪಾಹಪಿತನ, ಆದರಿಂದ ವನ್ಯಜೀವಿಗಳಿಗಾಗುತ್ತಿರುವ ಸಂಕಷ್ಟ, ದಂತ ಕಳ್ಳಸಾಗಣೆ-ಎಲ್ಲವನ್ನೂ ಸ್ಥೂಲವಾಗಿ ವಿವರಿಸಲಾಗುತ್ತದೆ. ಭವಿಷ್ಯಕ್ಕೆ ಸಂಬಂಧಿಸಿ, ನಿಮ್ಮ [ಮಕ್ಕಳ] ಬದುಕು ಹೇಗೋ? ಇಂಥ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತೀರೋ? ಎಂಬ ಆತಂಕವನ್ನು ತಾಯಿ ವ್ಯಕ್ತಪಡಿಸುತ್ತಾಳೆ. ಕಥೆಯ ಒಂದು ಸಾಲು ’ನಮ್ಮ ದಂತ ಕೊಡುತ್ತೇವೆ, ನಮ್ಮ ರೆಕ್ಕೆಗಳು ಕೊಟ್ಟು ಬಿಡಿ’ ಎನ್ನುವ ವಾಕ್ಯ ವನ್ಯಜೀವಿಗಳು ಬಯಸುವ ಸ್ವಾತಂತ್ರ್ಯದ ಬಯಕೆಯನ್ನು ವ್ಯಕ್ತಪಡಿಸುತ್ತದೆ. ದಂತಗಳಿಗಿಂತ ನಮಗೂ ನಮ್ಮ ಸ್ವಾತಂತ್ರ್ಯ ಮುಖ್ಯ ಎಂಬ ಒಳಧ್ವನಿ ಇಡೀ ಚಿತ್ರದ ಆಶಯವನ್ನು ಹಿಡಿದುಕೊಡುತ್ತದೆ.
ಇಡೀ ಚಿತ್ರ ಒಂದು ವಿಷಾದ ಕಾವ್ಯದ ವಾಚನವೆನ್ನುವಂತೆ ಸಾಗುತ್ತದೆ. ಕಪ್ಪುಬಿಳುಪಿನಲ್ಲಿ ಚಿತ್ರವನ್ನು ಕಡೆದುಕೊಟ್ಟಿರುವುದು ವಿಷಾದದ ತೀವ್ರತೆಯನ್ನು ಹೆಚ್ಚಿಸಿ ನಮ್ಮೊಳಗೆ ಸಣ್ಣದೊಂದು ಯೋಚನೆಯ ಹಣತೆಯನ್ನು ಹಚ್ಚುತ್ತದೆ. ಅದೇ ಸಂದರ್ಭದಲ್ಲಿ ನಮ್ಮ [ಮನುಷ್ಯರ] ಸ್ವಾರ್ಥತನದ ಅರಿವು ಮಾಡಿಕೊಡುತ್ತದೆ.
ನಿರೂಪಣೆಗೆ ಬಳಸಿರುವ ಭಾಷೆಯೂ ಬೆಟ್ಟ ಕುರುಬ ಬುಡಕಟ್ಟು ಜನಾಂಗದ ಭಾಷೆಯನ್ನು ಬಳಸಿರುವುದು ಕಾಡುಜೀವಿಗಳ [ಕಾಡಿನಲ್ಲಿ ವಾಸಿಸುವ ವಿವಿಧ ಬುಡಕಟ್ಟು ಜನಾಂಗಗಳು] ಧ್ವನಿಯಾಗಿಯೂ ಧ್ವನಿತವಾಗುತ್ತದೆ. ಅಂದರೆ ಕೇವಲ ಆನೆ ಸೇರಿದಂತೆ ವನ್ಯಜೀವಿಗಳಷ್ಟೇ ಅಲ್ಲ, ಕಾಡಿನಲ್ಲಿರುವ ವಿವಿಧ ಬುಡಕಟ್ಟು ಜನಾಂಗಗಳೂ ನಮಗೆ ನಮ್ಮ ಬದುಕನ್ನು ಕೊಡಿ ಎನ್ನುವಂತಿದೆ ಚಿತ್ರದ ನಿರೂಪಣೆ. ‘ಮತ್ತೆ ನೀನು ಹಾರುವಂತಾಗಲಿ’ ಎಂಬ ಆಶಾವಾದದೊಂದಿಗೆ ಅಂತ್ಯಗೊಳ್ಳುವ ಕಥೆ ತಾಯಿಯ ಭರವಸೆಯನ್ನು ಈಡೇರಿಸುವ ಹೊಣೆಗಾರಿಕೆಯನ್ನು ನಮಗೆ [ಮನುಷ್ಯರಿಗೆ] ವಹಿಸುತ್ತದೆ. ಇಲ್ಲಿ ಹಾರಲಿ ಎಂಬ ಆಶಯದಡಿ ಎರಡು ಧ್ವನಿಗಳಿವೆ. ಒಂದು ರೆಕ್ಕೆ ಪಡೆದು ಸ್ವತಂತ್ರವಾಗುವುದು. ಇದರರ್ಥ ಬಂಧಮುಕ್ತಗೊಳ್ಳುವುದು. ಇನ್ನೊಂದು-ಪೀಳಿಗೆ ಅವನತಿಯಾಗದಿರಲಿ ಎಂಬುದು. ಈ ಎಲ್ಲ ಹೊಣೆಗಾರಿಕೆ ನಮ್ಮದೇ.
75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ನಾವು ವನ್ಯಜೀವಿಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದೇವೆ. 1947 ರಲ್ಲಿ ಬ್ರಿಟಿಷರಿಂದ ನಮಗೆ ಮುಕ್ತಿ ಸಿಕ್ಕಿತು. ಸ್ವಾತಂತ್ರ್ಯ ಪಡೆದ ನಾವು ಅಭಿವೃದ್ಧಿಯ ಹೆಸರಿನಲ್ಲಿ ವನ್ಯಜೀವಿಗಳ ಸ್ವಾತಂತ್ರ್ಯವನ್ನು ಹರಣ ಮಾಡಿ ಸಂಭ್ರಮಿಸುತ್ತಿದ್ದೇವೆ. ನಮ್ಮ ಹಿರಿಯರು ಹೇಗೆ ಬ್ರಿಟಿಷರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಹಾಗೆಯೇ ಆನೆಯಂಥ ವನ್ಯಜೀವಿಗಳು ತಮ್ಮ ಬದುಕಿಗಾಗಿ ನಮ್ಮೊಂದಿಗೆ ಹೋರಾಡುವ ಪರಿಸ್ಥಿತಿಯನ್ನು ನಿರ್ಮಿಸಿದ್ದೇವೆ. ಕಾಡಿನ ನಾಶ ಮತ್ತು ಆನೆ-ಮನುಷ್ಯರ ನಡುವಿನ ಸಂಘರ್ಷ ಆನೆಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ. ಕಥೆಯ ಆರಂಭದಲ್ಲಿ ಬರುವಂತೆ ಮುನಿಯು ಶಾಪ ಕೊಟ್ಟು ರೆಕ್ಕೆಯನ್ನು ಕಿತ್ತುಕೊಂಡ. ಹಾಗೆಯೇ ನಾವೀಗ ಅವುಗಳ ರೆಕ್ಕೆಯನ್ನು ಕಿತ್ತುಕೊಂಡಿದ್ದೇವೆ. ಕಥೆಯ ಮುನಿ ನಮ್ಮ ಪ್ರತಿನಿಧಿಯಂತೆ ತೋರುತ್ತಾನೆ [ತನ್ನ ತಪೋಭಂಗಕ್ಕೆ ರೆಕ್ಕೆಯನ್ನೇ ಕಿತ್ತುಕೊಂಡು ಅಸಹಾಯಕಗೊಳಿಸುವ ಮನಸ್ಥಿತಿಯಂತೆಯೇ ನಾವೂ ನಮ್ಮ ಬದುಕಿಗಾಗಿ ಆವುಗಳ ರೆಕ್ಕೆಯನ್ನು ಕಿತ್ತುಕೊಂಡಿದ್ದೇವೆ].
ಅವುಗಳ ಅಸಹಾಯಕತೆ ಆಕ್ರೋಶವಾಗಿ ಮಾರ್ಪಡುತ್ತಿರುವ ಹೊತ್ತಿದು. ಅದಕ್ಕೇ ಪ್ರತಿ ವರ್ಷ ನಾಡಿನಲ್ಲಿ ವನ್ಯಜೀವಿಗಳು ನಗರಗಳಿಗೆ ನುಗ್ಗುತ್ತಿರುವ ಪ್ರಕರಣಗಳು, ಬೆಳೆ ನಾಶದ ಪ್ರಕರಣಗಳೆಲ್ಲಾ ಹೆಚ್ಚಾಗುತ್ತಿರುವುದು. ಆದರೆ ಅವುಗಳ ಹೋರಾಟ ಆರಂಭವಾಗುವ ಮುನ್ನ ಆವುಗಳ ಬದುಕು [ರೆಕ್ಕೆ] ವಾಪಸು ಕೊಡುವುದು [ಸ್ವಾತಂತ್ರ್ಯವೆಂಬ ರೆಕ್ಕೆ ಕೊಟ್ಟು] ಶರಣಾಗುವುದು ಒಳ್ಳೆಯದು.
ಕಿರುಚಿತ್ರದಲ್ಲಿನ ಕಾಡು ಬೆಟ್ಟ ಇತ್ಯಾದಿ ದೃಶ್ಯಾವಳಿಗಳು ನಾವು ಕಳೆದುಕೊಂಡ ಮತ್ತು ಕಳೆದುಕೊಳ್ಳುತ್ತಿರುವ ಅಮೂಲ್ಯ ಸಂಪತ್ತನ್ನು ನೆನಪಿಸುತ್ತದೆ. ಕಪ್ಪು ಬಿಳುಪು ಇಡೀ ಕಿರುಚಿತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಒಂದುವೇಳೆ ಬಣ್ಣದಲ್ಲಾಗಿದ್ದರೆ, ಹಸಿರು ವನ್ಯ ರಾಶಿಗೆ ಮನಸೋತು ವನ್ಯಜೀವಿಗಳ ಸಂಕಟವನ್ನು ಮರೆತು ಬಿಡುತ್ತಿದ್ದೇವೆನೋ? ಅಂದರೆ ಆ ಧ್ವನಿ ಕ್ಷೀಣಿಸುತ್ತಿತ್ತೇನೋ? ಡಾ. ಕೃತಿ ಕಾರಂತ್ ನಿರ್ಮಿಸಿರುವ ಚಿತ್ರಕ್ಕೆ ಅದಿತಿ ರಾಜಗೋಪಾಲ್ ಕಥೆಯನ್ನು ಒದಗಿಸಿದ್ದಾರೆ. ವಿಶ್ವ ಆನೆಗಳ ದಿನಕ್ಕೆ ಒಂದು ಒಳ್ಳೆಯ ಕೊಡುಗೆ.