ಗೆಳೆಯರೆಲ್ಲ ವಿ.ವಿ. ಪುರಂ ಚಾಟ್ ಸ್ಟ್ರೀಟಲ್ಲಿ ಅದ್ನ ತಿಂದೆ, ಇದ್ನ ತಿಂದೆ ಅಂತ ಹೇಳ್ಳೋದ್ನ ಕೇಳಿ ಕೇಳಿ ಬೇಜಾರಾಗಿದ್ದ ನನಗೆ ಅಲ್ಲಿಗೆ ಒಂದ್ಸಲನಾದ್ರೂ ಹೋಗ್ಬೇಕು ಅನ್ನೋ ಆಸೆ ಕಾಡ್ತಿತ್ತು. ಕೊನೆಗೂ ಹೋಗಿದ್ದೆ. ಅಲ್ಲೋ ಜನ ಜಾತ್ರೆ. ದೋಸೆ, ಶ್ಯಾವಿಗೆ, ಇಡ್ಲಿ ಮುಂತಾದ ಕಾಯಂ ತಿಂಡಿಗಳು ಬಿಡಿ, ಅದೆಷ್ಟೊ ಹೆಸರೇ ಕೇಳದ, ಕಾಣದ ತಿಂಡಿಗಳ ಸಂತೆ ಅದು.
ಅಪರೂಪದ ತಿಂಡಿಗಳನ್ನು ಬಾಯಿ ಕಳೆದುಕೊಂಡು ನೋಡ್ತಾ, ಮಧ್ಯ ಮಧ್ಯ ಕೆಲವನ್ನು ಮೆಲ್ಲುತ್ತಾ ಮುಂದೆ ಸಾಗುವಾಗ, ನನ್ನ ಎಡದಿಂದ ಥಟ್ಟನೆ ಒಬ್ಬ ಮೇಲಕ್ಕೇನೋ ಎಸೆದ. ಏನಪ್ಪಾ ಇದು ಅಂತ ಯೋಚಿಸುತ್ತಿರುವಾಗಲೇ, ಕೆಳಗೆ ಬಂದ ಅದನ್ನು ಹಿಡಿದು ಮತ್ತೆ ಮೇಲಕ್ಕೆಸೆದ. ಅರರೆ, ರೊಟ್ಟಿ!
ರೊಟ್ಟಿಯನ್ನು ಸ್ವಲ್ಪ ಒರೆಯೋದು, ಒರೆದದ್ದನ್ನ ಮೇಲಕ್ಕೆ ಎಸೆದಾಗ ಅದು ಹಿಗ್ಗಿಕೊಳ್ಳೋದು, ಹಾರಿ ಕೆಳಗಿಳಿದ ರೊಟ್ಟಿಯನ್ನೇ ಹಿಡಿದು ಬಿಸಿ ಬಾಣಲಿಯಲ್ಲಿ ಬೇಯಿಸೋದು… ಅಷ್ಟು ಮೇಲಕ್ಕೆಸೆದ್ರೂ ಅದು ಅವನ ಬಳಿಯೇ ಬರುತ್ತಾ ಅಥವಾ ಅದು ಬರೋದನ್ನೇ ಹಿಡಿಯೋದು ಅವನ ಚಾಕಚಕ್ಯತೆಯಾ, ಅಂತ ಬೆರಗಾಗುತ್ತಾ ಅಲ್ಲಿದ್ದ ಜನರ ಗುಂಪಿನಲ್ಲಿ ನಾವೂ ಒಂದಾಗಿ ರೊಟ್ಟಿ ಸವಿದೆವು.
ಅಂವ ಆ ಹಾರೋ ರೊಟ್ಟಿಯ ಜೊತೆಗೆ ಕೊಟ್ಟ ಸೋಯಾ, ಕಾಬೂಲಿ ಕಡಲೆ ಪಲ್ಯಗಳಿಗಿಂತಲೂ ಅವನ ಕೌಶಲ್ಯಕ್ಕೇ ಹೆಚ್ಚಿನ ಶಹಭಾಷ್‌ಗಿರಿ ಕೊಡುತ್ತಾ ತಿಂಡಿಯಂಗಡಿಗಳ ನಡುವೆ ಮುಂದಡಿಯಿಟ್ಟೆವು. ಅಂದಹಾಗೆ, ಆ ಜಾಗಕ್ಕೆ ಗೂಗಲ್ಲಿನ ಹೆಸರು ವಿ.ವಿ. ಪುರಂ ಫುಡ್‌ಸ್ಟ್ರೀಟ್.
* ಪ್ರಶಸ್ತಿ ಪಿ.