ನವದೆಹಲಿ:ದೇಶದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದಲ್ಲಿನ ಹಾರಾಟ ಐಶಾರಾಮಿ ಮರ್ಸಿಡೆಸ್ ಬೆಂಜ್ ಕಾರಿನ ಡ್ರೈವಿಂಗ್ ನಡೆಸಿದಂತಾಗುತ್ತದೆ ಎಂಬುದಾಗಿ ಭಾರತೀಯ ವಾಯುಸೇನಾ ಪಡೆಯ ಮುಖ್ಯಸ್ಥ ಬಿಎಸ್ ಧನೋವಾ ತಮ್ಮ ರೋಮಾಂಚನಕಾರಿ ಅನುಭವವನ್ನು ಹಂಚಿಕೊಂಡಿರುವುದು ಹೀಗೆ.
ಒಬ್ಬ ಮಾರುತಿ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಗೆ ಮರ್ಸಿಡೆಸ್ ಬೆಂಜ್ ಸಿಕ್ಕಿದರೆ ಹೇಗಾಗುತ್ತದೆಯೋ. ಅದೇ ರೀತಿ ರಫೇಲ್ ಹಾರಾಟ ನಡೆಸುವುದು ಕೂಡಾ ವಿಶಿಷ್ಟ ಅನುಭವ ನೀಡಲಿದೆ. ನಿಜಕ್ಕೂ ಇದೊಂದು ಖುಷಿ ವಿಚಾರ ಎಂದು ಇಂಡಿಯಾ ಟುಡೇಯ ಕನ್ ಕ್ಲೇವ್ ನಲ್ಲಿ ರಫೇಲ್ ಯುದ್ಧ ವಿಮಾನದಲ್ಲಿನ ಹಾರಾಟ ಹೇಗಿದೆ ಎಂಬ ಪ್ರಶ್ನೆಗೆ ಈ ರೀತಿ ಧನೋವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ಮೂಲದ ರಫೇಲ್ ಯುದ್ಧ ವಿಮಾನದ ಮೊದಲ ಕಂತಿನ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಏರ್ ಚೀಫ್ ಧನೋವಾ ಅವರು ಜುಲೈನಲ್ಲಿ ಪ್ರಥಮ ಬಾರಿಗೆ ರಫೇಲ್ ನಲ್ಲಿ ಹಾರಾಟ ನಡೆಸಿದ್ದರು.
ರಫೇಲ್ ಯುದ್ಧ ವಿಮಾನ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆ ಬಲ ಮತ್ತಷ್ಟು ಬಲಿಷ್ಠವಾಗಿದೆ. ಅಲ್ಲದೇ ವಾಯುಪಡೆ ಮತ್ತಷ್ಟು ಆಧುನೀಕರಣಗೊಳ್ಳಬೇಕಾದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ರಫೇಲ್ ಯುದ್ಧ ವಿಮಾನ ಸೇನೆಯ ಗೇಮ್ ಚೇಂಜರ್ ಆಗಲಿದೆ. ಪ್ರಸ್ತುತ ಸಂದರ್ಭದಲ್ಲಿ ರಫೇಲ್ ನಂತಹ ಯುದ್ಧ ವಿಮಾನ ಎಲ್ಲಾ ರೀತಿಯಿಂದಲೂ ಅತ್ಯುತ್ತಮವಾದ ಆಯ್ಕೆಯಾಗಿದೆ ಎಂದು ಧನೋವಾ ತಿಳಿಸಿದರು.