Advertisement
ಕೋಳಿ, ಕುರಿ, ಮೊಲ, ಹಸು, ಹಂದಿ ಸಾಕಣೆ ಘಟಕಗಳಲ್ಲಿ ನೊಣಗಳ ಹಾವಳಿ ವಿಪರೀತ. ಇವುಗಳನ್ನು ನಿಯಂತ್ರಿಸದಿದ್ದರೆ ಕೆಲವೇ ದಿನಗಳಲ್ಲಿ 60ಕ್ಕೂ ಹೆಚ್ಚು ರೋಗಗಳು ಪಸರಿಸುವ ಅಪಾಯಗಳು ಉಂಟು. ನೊಣಗಳು ಮನುಷ್ಯರ ಆರೋಗ್ಯವನ್ನು ಬಾಧಿಸುವಂತೆ ಜಾನುವಾರುಗಳ ಆರೋಗ್ಯಸ್ಥಿತಿಗೂ ಧಕ್ಕೆ ತರುತ್ತವೆ. ಹೈನುಸಾಕಣೆ ಕೇಂದ್ರಗಳಲ್ಲಿ ಹಾಲಿಗೆ ರೋಗಾಣುಗಳು ಬಾಧಿಸದಂತೆ ನೋಡಿಕೊಳ್ಳುವ ಅಗತ್ಯವಿರುತ್ತದೆ.
Related Articles
Advertisement
ಇದು ಸಾಂಪ್ರದಾಯಿಕ ಮಾದರಿಯ ಬಲೆಯಲ್ಲ. ಮೂರು ಪ್ರತ್ಯೇಕ ಬಿಡಿಭಾಗಗಳನ್ನು ಜೋಡಿಸಿರುವ ಪುಟ್ಟ ಬಾಕ್ಸ್ ಮಾದರಿಯಲ್ಲಿ ಇರುವ ಬಲೆ. ಇದನ್ನು ಹೌಸ್ ಫ್ಲೈ ಡೊಮೊ ಟ್ರ್ಯಾಪ್ ಎಂದು ಕರೆಯಲಾಗುತ್ತದೆ. ಇದರ ನಿರ್ವಹಣೆ ಅತೀ ಸರಳ. ಖರ್ಚೂ ಕಡಿಮೆ. ಕೈರೊ ಲ್ಯೂರ್ ಪೌಚ್‌ಕಟ್ ಮಾಡಿ ಅದರಲ್ಲಿರುವ ಪೌಡರ್ ಅನ್ನು ಬೇಸ್ ಬೌಲ್ಗೆ ನೀರಿನೊಂದಿಗೆ ಹಾಕಬೇಕು. ಇದನ್ನು ಕಲಕಿದ ನಂತರ ಬೌಲ್ ಮೇಲೆ ಕೋನ್‌ಫಿಕ್ಸ್ ಮಾಡಬೇಕು.
ಇದರ ರೀಮ್ ಸುತ್ತಲೂ ಫೆರೊ ಲ್ಯೂರ್ ಹಚ್ಚಬೇಕು. ನಂತರ ಕೋನ್ ಮೇಲೆ ಪಾರದರ್ಶಕ ಬಾಕ್ಸ್ ಹಾಕಿದರೆ ನೊಣಗಳ ಬಲೆ ಸಿದ್ಧ. ಈ ಬಲೆಯಲ್ಲಿರುವ ಕೈರೊ, ಲ್ಯೂರ್ ಮತ್ತು ಫೆರೊ ಲ್ಯೂರ್ ಸೂಸುವ ವಾಸನೆಗೆ ನೊಣಗಳು ಆಕರ್ಷಿತವಾಗುತ್ತವೆ. ಬೇಸ್‌ಬೌಲ…ನಲ್ಲಿರುವ ದೊಡ್ಡ ರಂಧ್ರಗಳ ಮೂಲಕ ಒಳಪ್ರವೇಶಿಸಿ ಫೆರೋ ಲ್ಯೂರ್ ಹಚ್ಚಿದ ಕೋನ್ ಭಾಗಕ್ಕೆ ಬರುತ್ತವೆ.
ನಂತರ ಇವುಗಳು ಆಚೆ ಹೋಗಲು ಸಾಧ್ಯವೇ ಇಲ್ಲದಂತೆ ಬಲೆಯನ್ನು ವಿನ್ಯಾಸ ಮಾಡಲಾಗಿದೆ. ಒಂದೆರಡೇ ದಿನಗಳಲ್ಲಿ ಬಲೆಯೊಳಗೆ ಅಪಾರ ಸಂಖ್ಯೆಯ ನೊಣಗಳು ಬಂಧಿಯಾಗುತ್ತವೆ. ನಂತರ ಬಲೆಯ ಕ್ಯಾಪ್ ತೆಗೆದು ಸತ್ತ ನೊಣಗಳನ್ನು ಹೊರಚೆಲ್ಲಿ ಅದರ ಮೇಲೆ ಮಣ್ಣು ಮುಚ್ಚಬೇಕು. ನಂತರ ಬಲೆಯ ಭಾಗಗಳನ್ನು ನೀರಿನಿಂದ ತೊಳೆದು ಲ್ಯೂರ್‌ಗಳನ್ನು ಹಾಕಬೇಕು. ಇದರಿಂದ ಮತ್ತೆ ನೊಣಗಳನ್ನು ಆಕರ್ಷಿಸುವ ಬಲೆ ಸಿದ್ಧವಾಗುತ್ತದೆ.
ಪರಿಸರಕ್ಕೆ ಹಾನಿಕಾರಕವಲ್ಲದ, ಸುಲಭ, ಸರಳ ರೀತಿಯ, ಕಡಿಮೆ ವೆಚ್ಚದ್ದಾದ ಇಂಥ ಬಲೆಯನ್ನು ಬಳಸುವುದರಿಂದ ನೊಣಗಳ ಹಾವಳಿಯನ್ನು ತಡೆಯಬಹುದು. ಆ ಮೂಲಕ, ಕೋಳಿ ಮತ್ತು ಜಾನುವಾರುಗಳ ಸ್ವತ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು. ಜಾನುವಾರುಗಳ ಸಾಕಣೆ ಕೇಂದ್ರದಲ್ಲಿ ಮಾತ್ರವಲ್ಲ; ಸಿದ್ಧ ಆಹಾರ ತಯಾರಿಕಾ ಘಟಕಗಳಲ್ಲಿ, ಬೇಕರಿ, ಹೋಟೆಲ್, ಜ್ಯೂಸ್ ತಯಾರಿಕ ಸೆಂಟರುಗಳಲ್ಲಿ, ಆಸ್ಪತ್ರೆಗಳಲ್ಲಿ, ಮನೆಗಳಲ್ಲಿಯೂ ನೊಣ ಹಿಡಿಯುವ ಬಲೆಯನ್ನು ಪರಿಣಾಮಕಾರಿಯಾಗಿ ಬಳಸಬಹುದು.
ಮಾಹಿತಿಗೆ: 98802 52119
* ಕುಮಾರ ರೈತ