ಅರಸೀಕೆರೆ: ಫ್ಲೋರೈಡ್‌ಯುಕ್ತ ನೀರು ಸೇವನೆ ಆರೋಗ್ಯಕ್ಕೆ ಮಾರಕ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಗರದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಬೆಳಿಗ್ಗೆ ಏರ್ಪಡಿಸಿದ್ದ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಂತರ್ಜಲ ಕುಸಿತ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ಪರಿಣಾಮ ಸಾವಿರ ಅಡಿ ಹಾಳದಲ್ಲಿ ಕೊಳವೆ ಬಾವಿಗಳನ್ನು ಕೊರೆದು ಆ ನೀರನ್ನು ಸೇವನೆ ಮಾಡುತ್ತಿರುವುದರಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತಿದೆ.ಫ್ಲೋರೈಡ್‌ಯುಕ್ತ ನೀರು ಮತ್ತು ಆಹಾರ ಸೇವನೆ, ಟೂತ್‌ಪೇಸ್ಟ್ ಹಾಗೂ ಹಲ್ಲು ಸ್ವಚ್ಛಗೊಳಿಸುವ ದ್ರಾವಣಗಳು ಸೇರಿದಂತೆ ಕೆಲವು ಫ್ಲೋರೈಡ್‌ಯುಕ್ತ ಔಷಧಿಗಳು ಅಥವಾ ಹೈಡ್ರೋಪ್ಲೋರಿಕ್ ಆಮ್ಲವನ್ನು ಬಳಸುವ ಕಾರ್ಖಾನೆಗಳ ಹೊಗೆ ಮೂಲಕ ಫ್ಲೋರೈಡ್ ಅಂಶ ವ್ಯಕ್ತಿಯ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಬಾವಿ ಅಥವಾ ಕೈಪಂಪ್‌ಗ್ಳ ನೀರು ಕುಡಿಯುವ ಜನರಲ್ಲಿ ಈ ಕಾಯಿಲೆ ಕಂಡು ಬರುತ್ತಿದ್ದು ನಾಗರೀಕರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.
ಹಲ್ಲಿನ ಆರೋಗ್ಯ ಕಾಪಾಡಿ: ವಿದ್ಯಾರ್ಥಿಗಳು ತಮ್ಮ ದಂತ ಪಂಕ್ತಿಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ದಂತ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಫ್ಲೋರೈಡ್‌ಯುಕ್ತ ನೀರು ಮತ್ತು ಆಹಾರ ಪದಾರ್ಥಗಳ ಸೇವನೆಯಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತದೆ ಎಂದರು. ಜಾಥಾ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಎಸ್.ಪಿ.ಚಂದ್ರಮ್ಮ, ಕೃಷ್ಣನಾಯ್ಕ, ಹಿರಿಯ ಆರೋಗ್ಯ ಸಹಾಯಕರಾದ ಜಬ್ಬೀರ್ ಪಾಷಾ, ಮಾಲತಿ, ಆರೋಗ್ಯ ಶಿಕ್ಷಣಾಧಿಕಾರಿ ಲಲಿತಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಅನಾರೋಗ್ಯಕ್ಕೆ ಕಾರಣ: ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್.ನಾಗಪ್ಪ ಮಾತನಾಡಿ, ಫ್ಲೋರೋಸಿಸ್ ಇರುವ ವ್ಯಕ್ತಿಗಳಲ್ಲಿ ಹೊಟ್ಟೆ ನೋವು, ಅರ್ಜಿಣ, ಭೇದಿ, ಸ್ನಾಯುಗಳ ದೌರ್ಬಲ್ಯ, ಮೂಳೆಗಳ ನೋವು ,ಕೀಲು ನೋವು ,ನರಗಳ ಎಳೆತ ,ಉದ್ದ ಮೂಳೆಗಳ ನೋವು ಕಂಡುಬರುತ್ತದೆ ಎಂದರು. ರೋಗದ ಮೂರನೇ ಹಂತದಲ್ಲಿ ಸುಕ್ಕುಗಟ್ಟಿಸುವ ಫ್ಲೋರೋಸಿಸ್ ಕತ್ತಿನ ಮೂಳೆ ,ಬೆನ್ನಿನ ಮೂಳೆ ನಿಲುವುಗಳ ಬಾಗುವಿಕೆ ಸ್ನಾಯುಎಳೆತ ಇನ್ನಿತರ ತೊಂದರೆಗಳು ಕಂಡು ಬರುತ್ತವೆ ಎಂದರು. ಈ ರೋಗವನ್ನು ತಡೆಗಟ್ಟಲು ಶುದ್ಧ ನೀರು, ಹಾಲು ,ಬೆಲ್ಲ ,ಹಸಿರು ಸೊಪ್ಪು, ನುಗ್ಗೆ ಕಾಯಿ,ಸೀಬೆ ,ನೆಲ್ಲಿಕಾಯಿ ,ನಿಂಬೆ ,ಟೊಮೆಟೋ, ಕಿತ್ತಲೆ, ಮೂಸಂಬಿ,ಬೆಳ್ಳುಳ್ಳಿ ,ಶುಂಠಿ, ಈರುಳ್ಳಿ ,ಕ್ಯಾರೆಟ್,ಪರಂಗಿ ಹಣ್ಣು ಸೇವನೆಯಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎಂದು ಹೇಳಿದರು.