ತಾವರಗೇರಾ: ಸಮೀಪದ ಅಮರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿವ ನೀರು ಇಲ್ಲದ ಕಾರಣ ಮಕ್ಕಳಿಗೆ ಫ್ಲೊರೈಡ್‌ಯುಕ್ತ ನೀರೇ ಗತಿ ಎನ್ನುವಂತಾಗಿದೆ.
ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಸಿಆರ್‌ಪಿ ವ್ಯಾಪ್ತಿಯ ಈ ಶಾಲೆ ತಾಲೂಕು ಕೇಂದ್ರದಿಂದ 50 ಕಿ.ಮೀ. ದೂರದ ಗಡಿಭಾಗದಲ್ಲಿದೆ. ಸದ್ಯಕ್ಕೆ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 184 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶುದ್ಧ ಕುಡಿಯುವ ನೀರಿಲ್ಲ. ಗ್ರಾಮಕ್ಕೆ ಪೂರೈಸುವ ಕುಡಿಯುವ ನೀರನ್ನೇ ಶಾಲೆಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಅಂತರ್ಜಲ ಕುಸಿತಗೊಂಡ ಕಾರಣ 8 ತಿಂಗಳಿಂದ ಬೋರ್‌ವೆಲ್ ನೀರು ಸರಬರಾಜು ಸ್ಥಗಿತಗೊಂಡಿದೆ.
ವಿದ್ಯಾರ್ಥಿಗಳು ನಿತ್ಯ ಪುಸಕ್ತಗಳ ಬದಲಾಗಿ ನೀರಿನ ಬಾಟಲಿ ತರುತ್ತಿದ್ದಾರೆ. ಗ್ರಾಮದಲ್ಲಿ ಫ್ಲೊರೈಡ್‌ಯುಕ್ತ ನೀರೇ ಗತಿಯಾಗಿದೆ, ಶೈಕ್ಷಣಿಕ ವರ್ಷದ ಶಾಲೆ ತರಗತಿಗಳು ಆರಂಭವಾಗಿ 2 ತಿಂಗಳು ಕಳೆಯುತ್ತಿದ್ದರೂ ಸಹ ಪಂಚಾಯಿತಿ ಆಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವಲ್ಲಿ ತುರ್ತು ಕ್ರಮಕ್ಕೆ ಮುಂದಾಗಿಲ್ಲ.
ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಶಾಲೆಗೆ ಎರಡು ದಿನಕ್ಕೊಮ್ಮೆ ಅರ್ಧ ಟ್ಯಾಂಕ್ ನೀರು ಮಾತ್ರ ನೀಡುತ್ತಿದ್ದು, ಬ್ಯಾರಲ್ನಲ್ಲಿ ನೀರು ಸಂಗ್ರಹಿಸಿಕೊಂಡು ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಅನಿವಾರ್ಯ ಕಾರಣದಿಂದ ನೀರು ಬರದಿದ್ದರೆ. ಅಡುಗೆದಾರರು ಕೊಡ ಹೊತ್ತು ತೋಟದ ಬೋರ್‌ವೆಲ್ಗಾಗಿ ಅಲೆದಾಡಬೇಕಿದೆ. ನೀರು ಸಂಪೂರ್ಣ ಫ್ಲೊರೈಡಯುಕ್ತ ಇರುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರಾಪೇರಾಗುವ ಸಾಧ್ಯತೆಯಿದೆ. ಶಾಸಕರು ಜನ ಸಂಪರ್ಕ ಸಭೆಯಲ್ಲಿ ಗ್ರಾಮಕ್ಕೆ ಸೂಕ್ತ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚಿಸಿದರು ಸಹ ಅಧಿಕಾರಿಗಳಿಗೆ ನಿರ್ಲಕ್ಷ ್ಯ ವಹಿಸಿದ್ದಾರೆ ಎನ್ನುತ್ತಾರೆ ಗ್ರಾಪಂ ಸದಸ್ಯ ನಾಗರಾಜ.
ಜಿಲ್ಲಾ ಪಂಚಾಯಿತಿ ಆಡಳಿತ ಎರಡು ವರ್ಷಗಳಿಂದೆ ಶಾಲಾ ಮುಂಭಾಗದಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿದೆ. ಆದರೇ ಶೆಡ್ಡ್ನಲ್ಲಿ ಇಲ್ಲಿಯವರಿಗೂ ಯಂತ್ರ ಜೋಡಿಸಿಲ್ಲ ಮತ್ತು ನೀರಿನ ಪೈಪ್, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಎರಡು ವರ್ಷಗಳಿಂದ ನಿರ್ಮಿಸಿದ ಶೆಡ್ ಬಿಸಿಲಿಗೆ ಸುಟ್ಟು ಹಾಳಾಗುತ್ತಿದೆ.
ಶಾಲೆಗೆ ಗ್ರಾಪಂ ಪೂರೈಸುವ ನೀರು ಸಾಕಾಗುವುದಿಲ್ಲ. ನೀರಿನ ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಗ್ರಾಪಂ ಆಡಳಿತ ಗಮನಕ್ಕೆ ತರಲಾಗಿದ್ದು, ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
•ತಿಮ್ಮಪ್ಪ ಮಡ್ಡೇರ್ ಅಮರಾಪೂರ ಶಾಲೆ, ಮುಖ್ಯಶಿಕ್ಷಕ
ನೀರಿನ ಸಮಸ್ಯೆ ಕುರಿತು ಶಾಲಾ ಮುಖ್ಯಗುರುಗಳು ಗ್ರಾಪಂ ಗಮನಕ್ಕೆ ತಂದಿದ್ದಾರೆ. ಆದರೆ ಶಾಲೆಗೆ ಪ್ರತ್ಯೇಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಬೇಡಿಕೆ ಇಟ್ಟಿದ್ದು, ಈ ಕುರಿತು ತಾಲೂಕು ಕಾರ್ಯನಿರ್ವಾಕ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ನಂತರ 2-3 ದಿನಗಳಲ್ಲಿ ಸೂಕ್ತ ಪರಿಹಾರ ಕೈಗೊಳ್ಳಲಾಗುವುದು. •ಶಂಕರ ರಾಠೊಡ, ಪಿಡಿಒ
•ಎನ್. ಶಾಮೀದ