ನಾಗಮಂಗಲ: ಕಳೆದ 30 ದಿನಗಳಿಂದ ವಿಧಿಸಿದ್ದ ಪಟ್ಟಣದ ಕಂಟೈನ್ಮೆಂಟ್ ಝೊನ್ ಪ್ರದೇಶವನ್ನು ಮಂಗಳವಾರ ಬೆಳಿಗ್ಗೆ ತೆರವುಗೊಳಿಸಲಾಯಿತು. ಜಿಲ್ಲಾಧಿಕಾರಿ ಗಳ ಆದೇಶದಂತೆ ತಹಶೀಲ್ದಾರ್ ಕುಂಞ ಅಹಮದ್ ನೇತೃತ್ವದಲ್ಲಿ ಸಾರ್ವಜನಿಕರ ಅಭಿನಂದನೆಗಳೊಂದಿಗೆ ತೆರವು ಗೊಳಿಸಿ ನಿರ್ಬಂಧ ಮುಕ್ತಗೊಳಿಸಲಾಯಿತು.
ತಹಶೀಲ್ದಾರ್ ಕುಂಞ ಅಹಮದ್ ಮಾತನಾಡಿ, ನಾಗಮಂಗಲ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 12, 14, 15, 16ರಲ್ಲಿ ಮುಸ್ಲಿಂ ಧರ್ಮಗುರುಗಳು ನೆಲೆಸಿ ದ್ದ ಹಿನ್ನೆಲೆಯಲ್ಲಿ 28 ದಿನ ಕಂಟೈನ್ಮೆಂಟ್ ಝೊನ್ ಎಂದು ಘೋಷಿಸಲಾಗಿತ್ತು.
ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ಸದರಿ ನಿಯಂತ್ರಣ ಪ್ರದೇಶ ಮತ್ತು ಬಫರ್ ಝೋನ್ ವ್ಯಾಪ್ತಿಯ ಪ್ರದೇಶವನ್ನು ಮಾನ್ಯ ಜಿಲ್ಲಾಧಿಕಾರಿ ಆದೇಶದ ಮೇರೆಗೆ ತೆರವು ಗೊಳಿಸಿ ಸಾರ್ವಜನಿಕರ ಚಟುವಟಿಕೆಗೆ ಅನುವು ಮಾಡಿಕೊಡಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಧನಂಜಯ್ ಮಾತನಾಡಿ, ಕಳೆದ 28 ದಿನಗಳಿಂದ ಕಂಟೈನ್ಮೆಂಟ್ ಝೊನ್ ನಲ್ಲಿದ್ದ ಈ ಪ್ರದೇಶ ಮುಕ್ತವಾಗಿದೆ. ಆದರೆ ಕೊರೋನದಿಂದ ದೇಶ ಮುಕ್ತವಾಗಿಲ್ಲ, ಸೋಂಕು ಯಾವಾಗ ಬೇಕಾದರೂ ಯಾರಿ ಗಾದರೂ ಬರಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸ ಬೇಕು ಎಂದು ಹೇಳಿದರು.
ಸಾರ್ವಜನಿಕರು ಚಪ್ಪಾಳೆ ತಟ್ಟಿ ವಂದೇ ಮಾತರಂ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು. ತಹಶೀಲ್ದಾರ್ ಕುಂಞಿ ಅಹಮದ್, ತಾಲೂಕು ಆರೋಗ್ಯ ಮುಖ್ಯಾಧಿಕಾರಿ ಡಾ.ಧನಂಜಯ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಇಒ ಅನಂತರಾಜು, ಸಿಪಿಐ ರಾಜೇಂದ್ರ, ಪಿಎಸ್‌ಐ ರವಿಕಿರಣ್ ಹಾಜರಿದ್ದರು.