Advertisement
ಆರಂಭದಲ್ಲಿ ಶಿರೂರಿನ ರೈತ ನಾಗಪ್ಪ ಅಚನೂರ ಅವರು ಚೆಂಡು ಹೂ ಬೆಳೆಯಲು ಮುಂದಾದಾಗ, ಯೋಗ್ಯ ಬೆಲೆ ಸಿಗದೇ ನಷ್ಟ ಅನುಭವಿಸಿದರಂತೆ. ಸತತ ನಷ್ಟದಿಂದ ಕಂಗೆಟ್ಟರೂ, ಧೃತಿಗೆಡದೆ, ಮತ್ತೆ ತಮ್ಮ ಎರಡು ಎಕರೆಯಲ್ಲಿ ಚೆಂಡು ಹೂ ಬೆಳೆದರು.ಜಮೀನಿನಲ್ಲಿ 3 ಅಡಿಯ ಸಾಲುಗಳನ್ನು ಬಿಡಿಸಿ, 15 ಸಾವಿರ ಸಸಿಗಳನ್ನು, ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿಯ ಆಸರೆ ನೀಡಿದರು. ಕೇವಲ 45 ದಿನಗಳಲ್ಲಿ ಗಿಡಗಳು, ಹೂ ಬಿಡಲಾರಂಭಿಸಿದವು. ಸತತ ಬರದಿಂದ ಕಂಗೆಟ್ಟಿದ್ದ ರೈತನಿಗೆ ಬೇಸಿಗೆಯಲ್ಲಿ ಉತ್ತಮ ಲಾಭ ಬೆಳೆಯಾಗಿ, ಚೆಂಡು ಹೂ ಕಂಡಿತು. ಹೂ ಬಿಡಲು ಆರಂಭಿಸಿದ ಒಂದೇ ತಿಂಗಳಲ್ಲಿ ನಾಗಪ್ಪ, 1 ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾರೆ. ಪ್ರತಿವಾರ 2 ರಿಂದ 3 ಸಲ ಹೂ ಕಟಾವು ಮಾಡುತ್ತಾರೆ.
ನಾಗಪ್ಪ ಬೆಳೆದ ಚೆಂಡು ಹೂ ಬಾಂಬೆ ಮಾರುಕಟ್ಟೆಯಲ್ಲೂ ಭರ್ಜರಿ ಹಣ ಗಳಿಸಿತು. “ಕರ್ನಾಟಕದ ಮಾರುಕಟ್ಟೆಗಿಂತ ಹೂರ ರಾಜ್ಯದಲ್ಲಿ ಸಾಕಷ್ಟು ಲಾಭ ಸಿಗುತ್ತದೆ. ಒಂದು ಕೆ.ಜಿ.ಗೆ ಅಂದಾಜು 50- 80 ರೂ. ವರೆಗೆ ಲಾಭ ಸಿಗುತ್ತದೆ’ ಅಂತಾರೆ ನಾಗಪ್ಪ. ಅಲ್ಲಿ ಮಾರುಕಟ್ಟೆಯ ಬೆಲೆ ಇಳಿಮುಖ ಕಂಡಾಗ, ಬಾಗಲಕೋಟೆ ಮಾರುಕಟ್ಟೆಗೆ ಸಾಗಿಸುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30- 50 ರೂ. ವರೆಗೆ ಆದಾಯ ಸಿಗುತ್ತದೆ. ಹಬ್ಬ ಹರಿದಿನಗಳಲ್ಲಿ ಅಮವಾಸ್ಯೆಯ ದಿನಗಳಲ್ಲಿ 100 ರೂ.ವರೆಗೂ ಬೆಲೆ ಸಿಗುತ್ತದಂತೆ. ಹಳದಿ ಚೆಂಡು ಹೂವಿನಲ್ಲಿ ಹಲವಾರು ತಳಿಗಳಿವೆ. ಆದರೆ, ಅದರಲ್ಲಿ ಗೋಲ್ಡ್ ಸ್ಪಾಟ್ 2 ಮತ್ತು ಕಲ್ಕತ್ತಾ ಆರೆಂಜ್ ತಳಿಯ ಚೆಂಡು ಹೂವಿಗೆ ಬೇಡಿಕೆ ಹೆಚ್ಚು. ಇವು ಗಾತ್ರದಲ್ಲಿ ದೊಡ್ಡದಾಗಿರದೇ, ನೋಡಲು ಆಕರ್ಷಕವಾಗಿರುತ್ತವೆ.ಓದಿದ್ದು ಎಸ್ಸೆಸ್ಸೆಲ್ಸಿಯೇ ಆದರೂ, ನಾಗಪ್ಪ (ಮೊ. 9008153295) ಇಂದು ಕೃಷಿಯಿಂದ ನೆಮ್ಮದಿ ಬದುಕು ಕಾಣುತ್ತಿದ್ದಾರೆ.
Related Articles
ಕ್ರಿಮಿನಾಶಕ ಸಿಂಪಡಣೆಯಿಂದ ಹೂವಿನ ಫಸಲು ಬೇಗ ಸಿಗುತ್ತದೆ. ಅಲ್ಲದೇ, ದುಂಡು ದುಂಡಾಗಿಯೂ ಅರಳುತ್ತವೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದರೆ, ಜಾಸ್ತಿ ನೀರು ಬೇಡುವುದಿಲ್ಲ. ನಾಗಪ್ಪ ಅವರು ತಮ್ಮ ಉಳಿದ 25 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಕಲ್ಲಂಗಡಿ ಬೆಳೆದಿದ್ದಾರೆ. ಹಬ್ಬದ ಸೀಜನ್ ನೋಡಿಕೊಂಡು ಮುಂಚಿತವಾಗಿ ಹಬ್ಬಕ್ಕೆ ಬರುವ ಹಾಗೆ ನಾಟಿ ಮಾಡಿದರೆ ಲಾಭ ನಿಶ್ಚಿತ ಎನ್ನುವುದು ನಾಗಪ್ಪ ಅವರ ಸಕ್ಸಸ್ಸಿನ ಗುಟ್ಟು.
Advertisement
– ಪ್ರಶಾಂತ ಜಿ. ಹೂಗಾರ