ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ (ಜಿಪಂ)ಹಮ್ಮಿಕೊಂಡಿದ್ದ ಫಲ ಪುಷ್ಪ ಪ್ರದರ್ಶನ ಜಾತ್ರಾರ್ಥಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಹಂಪೆಯ ಜ್ಞಾಪಿಸುವ ಪುಷ್ಪಾಲಂಕೃತ ವಿಜಯ ವಿಠಲ ಹೂವಿನ ರಥ, ತೆಂಗಿನ ಕಾಯಿಯಲ್ಲಿ ಅರಳಿದ ವಿವಿಧ ಕಲಾಕೃತಿ, ಪುಷ್ಪಧಾರೆ, ವರ್ಟಿಕಲ್ ಗಾರ್ಡನ್ ಪುಷ್ಪ ಪ್ರಿಯರನ್ನು ಮುದಗೊಳಿಸಿದವು.
ಫಲ ಪುಷ್ಪ ಪ್ರದರ್ಶನಕ್ಕೆ ಕಳೆದ ವಾರದಿಂದಲೇ ತಯಾರಿ ನಡೆಸಲಾಗಿದೆ. 5 ಕ್ವಿಂಟಲ್ ಗುಲಾಬಿ ಹೂ, 25 ತರಹದ ವಿವಿಧ ಪುಷ್ಪಗಳನ್ನು ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ವಾರ್ಷಿಕವಾಗಿ ಅರಳುವ ಹೂಗಳ ಪ್ರದರ್ಶನ ಗಮನಾರ್ಹವೆನಿಸಿತು. ಪುಷ್ಪಾಂಲಕೃತ ಪುಷ್ಪಧಾರೆ, ಬೋನ್ಸಾಯ್ ಮರಗಳು, ಶಿವಮೊಗ್ಗದ ಕಲಾವಿದ ಹರೀಶ ಅವರ ಕೈಯಲ್ಲಿ ಕಲೆಯಾಗಿ ಅರಳಿದ ಕಲ್ಲಂಗಡಿ ಹಣ್ಣು, ಮರಳಿನ ಕಲಾಕೃತಿಯಲ್ಲಿ ಮೂಡಿಬಂದ ಗವಿ ಶ್ರೀ, ಧಾರವಾಡದ ಜಗದೀಶ ಭಾವಿಕಟ್ಟಿ ಅವರ ಕೈಯಲ್ಲಿ ಅರಳಿದ ತೆಂಗಿನ ಕಾಯಿ ಸೇರಿದಂತೆ ಬಗೆ ಬಗೆಯ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದವು. ಯುನಿಟಿ ಆಪ್ ನೇಷನ್ ಸರ್ದಾರ ವಲ್ಲಭಬಾಯಿ ಪಟೇಲ್ ಪ್ರತಿಕೃತಿಗಳು ಗಮನ ಸೆಳೆದವು. ತೋಟಗಾರಿಕೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ತಯಾರಿಸಿದ ಹೈಡ್ರೋಫೀನಿಕ್ಸ್ ಪದ್ಧತಿ ವೀಕ್ಷಕರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಯಿತು. ಕಡಿಮೆ ಜಾಗೆ, ನೀರು, ಸ್ವಲ್ಪ ಮಣ್ಣಿನಲ್ಲಿ ಮನೆಯ ಟೆರೇಸ್‌ನಲ್ಲಿ ತರಕಾರಿ ಬೆಳೆದ ಬಗೆ ತಿಳಿದುಕೊಳ್ಳಲು ಜನ ಉತ್ಸುಕರಾಗಿದ್ದು ಕಂಡು ಬಂತು.
ಪ್ರಮುಖ ಆಕರ್ಷಣೆ: ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ತಾಲೂಕಿನಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಗಡ್ಡೆಗಳನ್ನು ಪ್ರದರ್ಶನಕ್ಕಿಟ್ಟಿರುವುದು ಪ್ರಮುಖ ಆಕರ್ಷಣೆಯಾಗಿತ್ತು. ಬರ ಪ್ರದೇಶದಲ್ಲೂ ತರಹೇವಾರಿ ಉತ್ಕೃಷ್ಟ ಫಲಗಳನ್ನು ಕಂಡು ಮಾರು ಹೋದರು.
-ಮಂಜುನಾಥ ಮಹಾಲಿಂಗಪುರ