Advertisement

ಲಾಲ್‌ಬಾಗ್‌ನಲ್ಲಿ ನೋಡ ಬನ್ನಿ ಹೂ ಲೋಕ

10:05 AM Aug 02, 2023 | Team Udayavani |

ಬೆಂಗಳೂರು: ಬಣ್ಣ-ಬಣ್ಣದ ಹೂವುಗಳಿಂದ ನಿರ್ಮಿಸಿದ ವಿಧಾನ ಸೌಧ, ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಉಗಿಬಂಡಿ, ಕೋಲಾರ ಚಿನ್ನದ ಗಣಿ ರಾಷ್ಟ್ರೀಕರಣ, ಹೂವಿನ ಜಲಪಾತ ಸೇರಿದಂತೆ ವಿವಿಧ ಹೂವಿನ ಆಕರ್ಷಕಗಳನ್ನು ವೀಕ್ಷಿಸಬೇಕೆಂದರೆ, ಲಾಲ್‌ಬಾಗ್‌ಗೆ ಬನ್ನಿ!

Advertisement

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ, ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ “ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಸ್ಮರಣಾರ್ಥ’ ಆ.4ರಿಂದ 15ರವರೆಗೆ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಗಾಜಿನ ಮನೆಯ ಮೂಲೆಗಳಲ್ಲಿ ಆಕರ್ಷಕ ಪುಷ್ಪ ಪಿರಮಿಡ್‌ಗಳು ತಲೆ ಎತ್ತಲಿವೆ. ಹಳದಿ ಮೆರಿಗೋಲ್ಡ್‌, ಟೋರೇನಿಯಂ, ರೆಡ್‌ ಸಾಲ್ವಿಯಾ, ವಿವಿಧ ವರ್ಣದ ಸೇವಂತಿಗೆ, ಬೇಬಿ ಜಿನ್ನಿಯಾ, ಇಂಫೇಷನ್ಸ್‌, ಸೆಲೋಷಿಯಾ, ಡ್ವಾರ್ಪ್‌ ಇಕ್ಸೋರಾ, ಪಾಯಿನ್‌ಸಿಟಿಯಾ ಹೀಗೆ ಹಲವು ರೀತಿಯ 10 ಪುಷ್ಪ ಪಿರಮಿಡ್‌ಗಳಿಗೆ 12 ರೀತಿಯ ಆಕರ್ಷಕ ಹೂ ಜಾತಿಗೆ ಸೇರಿದ ಒಟ್ಟು 15 ಸಾವಿರಕ್ಕೂ ಹೆಚ್ಚು ಹೂ ಕುಂಡಗಳನ್ನು ಬಳಸಲಾಗುತ್ತಿದೆ. ಇದರ ಜತೆಗೆ ಗಾಜಿನ ಮನೆ ಒಳಭಾಗದಲ್ಲಿ 60 ಪ್ರತ್ಯೇಕ ಫ‌ಲಕಗಳಲ್ಲಿ ಹನುಮಂತಯ್ಯ ಅವರ ಜೀವನ ದರ್ಶನವನ್ನು ಸಾದರಪಡಿಸುವ ಅಪರೂಪದ ಚಿತ್ರಗಳೊಂದಿಗೆ ಅವರ ಬದುಕಿನ ಕಿರುಚಿತ್ರಣವನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರದರ್ಶಿಸಲಾಗುತ್ತದೆ. ಗಾಜಿನಮನೆ ಹೊರಭಾಗದಲ್ಲಿ ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು, ಹೃದಯಾಕಾರದ ಹೂವಿನ ಕಾಮಾನುಗಳು, ಮೆಗಾ ಫ್ಲೋರಲ್‌ ಫ್ಲೊ, ತೂಗುವ ಹೂವುಗಳ ಬಾಗುವ ಚೆಲುವೆಯನ್ನು ನಿರ್ಮಿಸಲಾಗುತ್ತಿದೆ. ಲಾಲ್‌ಬಾಗ್‌ನ ಆಯ್ದ ಭಾಗಗಳಲ್ಲಿ ಎಲ್‌ಇಡಿ ಪರದೆಗಳ ಮೂಲಕ ಕೆಂಗಲ್‌ ಹನುಮಂತಯ್ಯ ಅವರ ಬದುಕು-ಸಾಧನೆಗೆ ಸಂಬಂಧಿಸಿದ ಸಚಿತ್ರ ಮಾಹಿತಿಯನ್ನು ಪ್ರದರ್ಶನದ ಪೂರ್ಣಾವಧಿ ಪ್ರದರ್ಶಿಸಲಾಗುವುದು. ಲಾಲ್‌ಬಾಗ್‌ನಾದ್ಯಂತ ಒಟ್ಟು 136 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಆಂತರಿಕ ಭದ್ರತಾ ಸಿಬ್ಬಂದಿ ಸೇವೆ, ಆಯ್ದ 10 ಭಾಗಗಳಲ್ಲಿ ಎತ್ತರದ ಟವರ್‌ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು, 38 ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಅಳವಡಿಕೆ, ನಾಲ್ಕು ಪ್ರವೇಶ ದ್ವಾರಗಳ ಬಳಿ ಆಂಬ್ಯುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧಕ್ಕೆ 3.6 ಲಕ್ಷ ಹೂ ಬಳಕೆ :

ಲಾಲ್‌ಬಾಗ್‌ನ ಗಾಜಿನಮನೆ ಪ್ರವೇಶದಲ್ಲಿ ಇಂಡೋ-ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯು ವಿನೂತನ ಪರಿಕಲ್ಪನೆಯಡಿ ಕುಂಡದಲ್ಲಿ ಬೆಳೆದ ಹೂಗಿಡಗಳನ್ನು ಪ್ರದರ್ಶಿಸಲಿದೆ. ತದನಂತರ, ಈ ಬಾರಿಯ ಫ‌ಲಪುಷ್ಪ ಪ್ರದರ್ಶನದ ಕೇಂದ್ರಬಿಂದುವಾಗಿರುವ ವಿಧಾನಸೌಧವನ್ನು ಗಾಜಿನ ಮನೆ ಕೇಂದ್ರಭಾಗದಲ್ಲಿ 18 ಅಡಿ ಅಗಲ, 36 ಅಡಿ ಉದ್ದ ಮತ್ತು 18 ಅಡಿ ಎತ್ತರದಲ್ಲಿ  ಕಬ್ಬಿನ, ಮರ, ಮೆಷ್‌ ಮೊದಲಾದ ವಸ್ತುಗಳೊಂದಿಗೆ ಸರಿಸುಮಾರು 3.6 ಲಕ್ಷ ವಿವಿಧ ಹೂಗಳಿಂದ ನಿರ್ಮಿಸಲಾಗುತ್ತಿದೆ. ಪುಷ್ಪದ ವಿಧಾನಸೌಧ ಮುಂಭಾಗದಲ್ಲಿ 14 ಅಡಿ ಎತ್ತರದ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ಅನಾವರಣಗೊಳಿಸಲಾಗುತ್ತದೆ.

Advertisement

ಟಿಕೆಟ್‌ ದರ 80 ರೂ..! :

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಟಿಕೆಟ್‌ ದರವನ್ನು ವಯಸ್ಕರಿಗೆ ತಲಾ 70 ರೂ. ಮತ್ತು ರಜಾ ದಿನಗಳಲ್ಲಿ ತಲಾ 80 ರೂ. ನಿಗದಿಪಡಿಸಲಾಗಿದೆ. 12 ವರ್ಷದೊಳ ಗಿನ ಮಕ್ಕಳಿಗೆ ತಲಾ 30 ರೂ. ಇದೆ. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಶಿವಪುರದ ಸ್ಮಾರಕ ಸೌಧಕ್ಕೆ 1.74 ಲಕ್ಷ ಸೇವಂತಿಗೆೆ ಬಳಕೆ: 

ಗಾಜಿನ ಮನೆಯ ಕೇಂದ್ರಭಾಗದ ಬಲಬದಿಯಲ್ಲಿ ಹನುಮಂತಯ್ಯ ಅವರ ಕನಸಿನ ಕೂಸಾದ ಶಿವಪುರದ ಸ್ಮಾರಕ ಧ್ವಜಸತ್ಯಾಗ್ರಹ ಸೌಧವನ್ನು 24 ಅಡಿ ಎತ್ತರ ಹಾಗೂ 17 ಅಡಿ ಸುತ್ತಳತೆಯಲ್ಲಿ ಒಟ್ಟು 1.74 ಲಕ್ಷ  ಸೇವಂತಿಗೆ ಹೂವುಗಳನ್ನು ಬಳಸಿ ಕಟ್ಟಲಾಗಿದೆ. ವಿಧಾನಸೌಧದ ಹಿಂಭಾಗದ 2,200 ಚ.ಅಡಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ 75ಕ್ಕೂ ಹೆಚ್ಚು ವಾರ್ಷಿಕ ಹೂಗಳು ಮತ್ತು ಫೋಲಿಯೆಜ್‌ ಗಿಡಗಳಿಂದ ಕೂಡಿತ ಅತ್ಯಾಕರ್ಷಕ, ವರ್ಣಮಯವಾದ ಯೂರೋಪ್‌ ದೇಶದ ಅರಮನೆಗಳಲ್ಲಿನ ರೂಪದಲ್ಲಿ ಫ್ಲೋರಲ್‌ ಕಾಪೆìಟ್‌ ಹೊರಹೊಮ್ಮಲಿದೆ. ಇದಕ್ಕಾಗಿ 1.5 ಲಕ್ಷಕ್ಕೂ ಹೆಚ್ಚು ವಿವಿಧ ಹೂಕುಂಡಗಳನ್ನು ಬಳಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next