Advertisement

ಕೆಂಪು ತೋಟದಲ್ಲಿ ವಿವೇಕ ಕಾಂತಿ

11:15 AM Jan 18, 2020 | Suhan S |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆಕಿದ್ದು, ಗಾಜಿನಮನೆಯಲ್ಲಿ ವಿವೇಕಾನಂದರ ಸ್ಮಾರಕ, ವಿವೇಕವಾಣಿ, ವಿವೇಕಾನಂದ ಪ್ರತಿಮೆ ಕಂಗೊಳಿಸುತ್ತಿದೆ.

Advertisement

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಆಯೋಜಿಸಿರುವ ಫ‌ಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಚಾಲನೆ ನೀಡಿದರು.

ವಿವೇಕಾನಂದರ 157ನೇ ಜನ್ಮ ದಿನದ ಪ್ರಯುಕ್ತ ಅವರ ಜೀವನ ಮತ್ತು ನಡೆದು ಬಂದ ದಾರಿಯನ್ನು ಹೂವು ಗಳಿಂದ ಅನಾವರಣಗೊಳಿಸಲಾಗಿದೆ. ಲಕ್ಷಾಂತರ ಹೂವುಗಳನ್ನು ಬಳಸಿ ವಿವೇಕಾನಂದ ಸ್ಮಾರಕ, ಬೇಲೂರು ವಿವೇಕಾನಂದರ ಮಠ, ವಿವೇಕ ಕುಟೀರ ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇವುಗಳ ಜತೆಗೆ ವಿವೇಕಾನಂದ ಸಂದೇಶ, ಸಾಧನೆಗಳ ಕುರಿತ ವಿಶೇಷ ಭಿತ್ತಿಪತ್ರ ಪ್ರದರ್ಶಿಸಲಾಗಿದೆ.

98ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯಹೂವುಗಳನ್ನು ಬಳಸಲಾಗಿದ್ದು, ಈ ಬಾರಿ ವಿಶೇಷವಾಗಿ 10 ದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಧ್ಯಾನಸ್ಥ ವಿವೇಕಾನಂದ ಪ್ರತಿಮೆ ಎಲ್ಲರನ್ನು ಆಕರ್ಷಿಸುತ್ತಿದೆ. ಗಾಜಿನ ಮನೆಯ ಹೃದಯಭಾಗದಲ್ಲಿ ಶಿಲ್ಪಿ ಬಿ.ಪಿ.ಶಿವಕುಮಾರ ಸಿದ್ಧಪಡಿಸಿರುವ ವಿವೇಕಾನಂದರ 16 ಅಡಿ ಎತ್ತರದ ಪ್ರತಿಮೆ, ಪಕ್ಕದಲ್ಲಿಯೇ ಇರುವ 1970 ರಂದು ಕನ್ಯಾಕುಮಾರಿಯಲ್ಲಿ ಉದ್ಘಾಟನೆಗೊಂಡಿ ರುವ ವಿವೇಕಾನಂದ ಸ್ಮಾರಕ ಮತ್ತಷ್ಟು ಅಂದವನ್ನು ಹೆಚ್ಚಿಸಿದೆ. 36 ಅಡಿ ಉದ್ದದ ಬಂಡೆಯ ಮಾದರಿಯ ಮೇಲೆ ದೇವಾಲಯದ ಮಾದರಿ ನಿರ್ಮಾಣ ಮಾಡಿದ್ದು, ಇದಕ್ಕೆ 75 ಸಾವಿರ ಕೆಂಪು, ಬಿಳಿ ಹಾಗೂ ಹಳದಿ, 75 ಸಾವಿರ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆಗಳನ್ನು ಬಳಸಿ ನಿರ್ಮಿಸಲಾಗಿದೆ. ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಭಾಷಣಮಾಡಿ 127 ವರ್ಷಗಳು ಸಂದುತ್ತಿರುವ ಗಳಿಗೆಯಲ್ಲಿ ನಿರ್ಮಿಸಿರುವ ಚಿಕಾಗೋ ವಿವೇಕಾನಂದ ಸ್ಮಾರಕದ ಪುಷ್ಪ ಮಾದರಿ ಎಲ್ಲರನ್ನೂ ಆದರದಿಂದ ಬರಮಾಡಿಕೊಳ್ಳುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ, ಶಾಸಕ ಉದಯ್‌ ಬಿ. ಗರುಡಾಚಾರ್‌, ಮೇಯರ್‌ ಎಂ.ಗೌತಮ್‌ ಕುಮಾರ್‌, ಅನರ್ಹ ಶಾಸಕ ಮುನಿರತ್ನ ಸೇರಿದಂತೆ ಹಲವರು ಭಾಗವಹಿಸಿದ್ದರು.

ಜ.26ವರೆಗೆ ಪ್ರದರ್ಶನ :  ಜ. 26ರವೆರೆಗೆ ಫ‌ಲಪುಷ್ಪ ಪ್ರದರ್ಶನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೂ ಫ‌ಲ ಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಒಟ್ಟಾರೆ ಆರು ಲಕ್ಷ ಹೂಗಳು ಬಳಕೆಯಾಗಿದ್ದು, ತಾಜಾತನ ಹಾಗೂ ಆಕರ್ಷಣೆ ಕಾಯ್ದುಕೊಳ್ಳಲು ಎರಡು ಬಾರಿ ಹೂಗಳನ್ನು ಬದಲಿಸಲಿದ್ದಾರೆ. ಎಚ್‌ಎಎಲ್‌, ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗಳು ಬೆಳೆಸಿರುವ ಆಕರ್ಷಕ ಹೂವುಗಳು ಪ್ರದರ್ಶನ  ದಲ್ಲಿರುವುದು ವಿಶೇಷವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಿವೇಕಾನಂದ ವೇಷಧಾರಿಗಳು :  ಮಕ್ಕಳು ವಿವೇಕಾನಂದ ವೇಷಧರಿಸಿ ಫ‌ಲಪುಷ್ಪ ಪ್ರದರ್ಶನಕ್ಕೆಆಗಮಿಸಿರುವುದು ವಿಶೇಷವಾಗಿತ್ತು. ಶ್ರೀನಗರದ ವಿವೇಕಾನಂದ ಶಾಲೆ, ಮಾತೃಧಾಮ ಶಾಲೆ ಸೇರಿದಂತೆ ಹಲವು ಶಾಲಾ ಮಕ್ಕಳು ವೇಷಧರಿಸಿದ್ದು, ಗಾಜಿನ ಮನೆಯಲ್ಲಿ ಜನರ ಗಮನ ಸೆಳೆದರು.ಮಧ್ಯಾಹ್ನ 12.30 ಗಂಟೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ವಿವೇಕಾನಂದರ ಪ್ರತಿಮೆ, ಹೂದೋಟ, ವಿವೇಕ ಕುಟೀರ ಸೆಲ್ಫಿಮಯವಾಗಿ ಮಾರ್ಪಟ್ಟಿತ್ತು.

ಎಲ್ಲೆಲ್ಲಿ ವಾಹನ ನಿಲುಗಡೆ? :  ಫ‌ಲಪುಷ್ಪ ಪ್ರದರ್ಶನದ ಹಿನ್ನಲೆ ಲಾಲ್‌ಬಾಗ್‌ನಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆ ಮಯೂರ ಹೋಟೆಲ್‌ ಬಳಿಯ ನಿಲುಗಡೆ ಮಾಡಬಹುದು. ಅಲ್‌-ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next