ಅಕ್ಕಿಆಲೂರು: ಶಿವರಾತ್ರಿ ಆಚರಣೆಗೆ ಅರೇಮಲೆನಾಡು ಪ್ರದೇಶ ಅಕ್ಕಿಆಲೂರು ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಶಿವರಾತ್ರಿ ಉಪವಾಸ ಆಚರಣೆಯ ಹಿನ್ನೆಲೆಯಲ್ಲಿ ಶಿವನ ನೈವೇದ್ಯಕ್ಕಾಗಿ ವಿವಿಧ ಹಣ್ಣು ಹಂಪಲು, ಫಲ-ಪುಷ್ಪಗಳ ಖರೀದಿ ರವಿವಾರ ಮಾರುಕಟ್ಟೆಯಲ್ಲಿ ಭರದಿಂದ ಸಾಗಿತ್ತು.
ಶಿವರಾತ್ರಿಗೆ ಉಪವಾಸ ವೃತ ಆಚರಣೆ ಮಾಡುವ ಬಹುತೇಕ ಜನ ಉಪವಾಸ ಸಮಯದಲ್ಲಿ ಸೇವಿಸುವ ಹಣ್ಣು ಹಂಪಲುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ವಿವಿಧ ಖಾದ್ಯಗಳ ಮೂಲಕ ಭರ್ಜರಿಯಾಗಿ ಆಚರಿಸಲ್ಪಡುವ ಇತರೆ ಹಬ್ಬಗಳಿಗೆ ತದ್ವಿರುದ್ಧವಾಗಿ ಆಚರಿಸಲ್ಪಡುವ ಶಿವರಾತ್ರಿ ಉಪವಾಸ ಆಚರಣೆ ದೇಶಾದ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಉಪವಾಸ ಆಚರಣೆಗೆ ಅಗತ್ಯ ಹಣ್ಣು ಹಂಪಲು ಬೆಲೆ ಕಳೆದಬಾರಿಗಿಂತಲೂ ಹೆಚ್ಚಾಗಿದೆ. ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಕಿತ್ತಳೆ, ಮೋಸಂಬಿ ಸೇರಿದಂತೆ ಹಲವಾರು ಹಣ್ಣುಗಳ ಖರೀದಿಗೆ ಮುಂದಾಗಿದ್ದರು.
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲೊಂದಾದ ಶಿವರಾತ್ರಿಯನ್ನು ಮಾಘ ಮಾಸದ ಬಹುಳ ಚತುದರ್ಶಿಯಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರತಿಮನೆಗಳಲ್ಲಿಯೂ ಆಚರಿಸಲಾಗುತ್ತದೆ. ಮಳೆಯ ಅಭಾವದಿಂದಾಗಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯೂ ಮಾರಿಗೆ 50-70 ರವರೆಗೆ ಏರಿಕೆ ಕಂಡಿತ್ತು. ಉಪವಾಸ ಆರಂಭಕ್ಕೂ ಮುನ್ನ ಶಿವನ ನೈವೇದ್ಯಕ್ಕಾಗಿ ಉಪಯೋಗಿಸುವ ಕಡಲೆ, ಶೇಂಗಾ, ಕರ್ಜೂರಗಳ ಮಾರುಕಟ್ಟೆಯಲ್ಲಿ 60-100 ರೂ. ವರೆಗೆ ಪ್ರತಿ ಕಿಲೋ ಗೆ ಮಾರಾಟವಾಯಿತು. ಹಣ್ಣುಗಳ ಪೈಕಿ ಕಲ್ಲಂಗಡಿ ಪ್ರತಿ ಕೆಜಿಗೆ 25ರೂ. ನಂತೆ ಮಾರಾಟವಾಗಿದ್ದು, ಶಿವರಾತ್ರಿ ಆಚರಣೆಗೆ ಲೋಡ್‌ಗಟ್ಟಲೇ ಕಲ್ಲಂಗಡಿ ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಕೆರೆ ಈಶ್ವರ ದೇವಸ್ಥಾನ ಮತ್ತು ಪೇಟೆ ಓಣಿಯ ಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ದೇವಸ್ಥಾನದ ಶುದ್ಧೀಕರಣ ಕಾರ್ಯವೂ ಭರದಿಂದ ಸಾಗಿತ್ತು. ವಿಶೇಷವೆಂದರೆ ವಿರಕ್ತಮಠದಲ್ಲಿ ಶಿವಬಸವ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ಸಾಮೂಹಿಕ ಇಷ್ಠಲಿಂಗ ಪೂಜೆ ನೆರವೇರುವುದು ಇಲ್ಲಿನ ವಾಡಿಕೆ.
ಉಪವಾಸ ವೃತವನ್ನು ಕಟ್ಟು ನಿಟ್ಟಾಗಿ ಪಾಲಿಸುವವರು ದೇಗುಲಗಳಲ್ಲಿ, ಮಠ ಮಂದಿರಗಳಲ್ಲಿ ಶಿವ ನಾಮ ಸ್ಮರಣೆ, ಭಜನೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಣ್ಣುಗಳ ಬೆಲೆಯಲ್ಲಿ ಹೆಚ್ಚೇನೂ ಏರಿಕೆಯಾಗಿಲ್ಲ. ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಆಚರಿಸಲು ಜನ ಖರೀದಿಗೆ ಮುಂದಾಗುತ್ತಿದ್ದಾರೆ. ವ್ಯಾಪಾರ ರವಿವಾರ ಚೆನ್ನಾಗಿತ್ತು.
. ಮೊಹ್ಮದ್ ಮಕಾಂದಾರ್,
ಹಣ್ಣಿನ ವ್ಯಾಪಾರಿ