ವರದಿ : ಕೆ.ಬಿ.ಗಿರೆಣ್ಣವರ
ಮೂಡಲಗಿ: ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ದಿಂದಾಗಿ ಹೂವು ಬೆಳೆ ಮಾರುಕಟ್ಟೆ ದೊರಕದೇ ನಾಶವಾಗಿ ಬೆಳೆಗಾರರ ನಿದ್ದೆಗೆಡಿಸಿತ್ತು. ಈ ವರ್ಷ ಮತ್ತೆ ಕೊರೊನಾ ಎರಡನೆಯ ಅಲೆಯಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
ಮೂಡಲಗಿ ಸಮೀಪದ ಸಂಗನಕೇರಿ ಗ್ರಾಮದಲ್ಲಿ ರಾಜು ಖೋತ ಎಂಬ ರೈತ ಗುಲಾಬಿ, ಚಂಡು ಹೂವುಗಳನ್ನು ಬೆಳೆಸಿದ್ದಾನೆ. ಆದರೆ ಹೂವುಗಳು ಮಾರಾಟವಾಗದಿರುವುದರಿಂದ ರೈತನ ಕಣ್ಣೀರು ಒರೆಸುವವರು ಯಾರು ಇಲ್ಲದಂತಾಗಿದೆ. ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳು ಇನ್ನೂ ಎಷ್ಟು ದಿನ ಮುಂದುವರೆಯುತ್ತೋ ಗೊತ್ತಿಲ್ಲ. ಆದರೆ ಕಳೆದ ವರ್ಷದ ನಷ್ಟದ ಮಧ್ಯೆಯೂ ಈ ವರ್ಷ ಮತ್ತೆ ಹೂವು ಬೆಳೆದು ಬದುಕು ಕಟ್ಟಿಕೊಳ್ಳಲು ಹೊರಟಿದ್ದ ರೈತರ ಸ್ಥಿತಿ ಅತಂತ್ರವಾಗಿದೆ. ರಾಜ್ಯವಲ್ಲದೇ ಪಕ್ಕದ ರಾಜ್ಯಗಳಲ್ಲಿ ಮದುವೆ, ಉತ್ಸವ, ಕಾರ್ಯಕ್ರಮಗಳು, ಜಾತ್ರೆಗಳೆಲ್ಲ ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ.
ಇನ್ನು ದೇವಾಲಯಗಳ ಬಾಗಿಲು ಮುಚ್ಚಲಾಗಿದೆ. ಹೀಗಾಗಿ ಹೂವುಗಳಿಗೆ ಮಾರುಕಟ್ಟೆಯೇ ಇಲ್ಲದಾಗಿದೆ. ತಾಲೂಕಿನಲ್ಲಿ ಇನ್ನೂ ಅನೇಕ ರೈತರು ಹೂವುಗಳನ್ನು ಬೆಳೆದಿದ್ದಾರೆ. ಆದ್ದರಿಂದ ಸರ್ಕಾರ ಹೂವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.
ಮೂರು ಎಕರೆಯಲ್ಲಿ ಗುಲಾಬಿ, ಚಂಡು ಹೂವು ಬೆಳೆದಿದ್ದೇನೆ. ಆದರೆ ಕೊರೊನಾದಿಂದ ವ್ಯಾಪಾರ ಇಲ್ಲ. ಕಳೆದ ವರ್ಷ ಬೆಳೆ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ನಮ್ಮಂತಹ ಹೂವು ಬೆಳೆಗಾರರ ಕಡೆ ಗಮನ ಹರಿಸಬೇಕು. (ರಾಜು ತಿಮಪ್ಪ ಖೋತ, ಹೂವು ಬೆಳೆಗಾರ, )
ಸಂಗನಕೇರಿ ಗ್ರಾಮ ಮೂಡಲಗಿ: ಸಮೀಪದ ಸಂಗನಕೇರಿ ಬಳಿ ಗುಲಾಬಿ, ಚಂಡು ಹೂವುಗಳನ್ನು ಬೆಳೆದ ರೈತ. ಲಾಕ್‌ಡೌನ್‌ದಿಂದ ಎಲ್ಲ ಕಾರ್ಯಕ್ರಮಗಳು ಸ್ಥಗಿತಗೊಂಡಿರುವುದರಿಂದ ಸ್ವಲ್ಪ ಮಟ್ಟಿಗೆ ರೈತರಿಗೆ ತೊಂದರೆ ಉಂಟಾಗಿದೆ. ರೈತರು ನಮ್ಮನ್ನು ಸಂಪರ್ಕ ಮಾಡಿದರೆ ಮಾರುಕಟ್ಟೆಯವರ ಜೊತೆ ಮಾತನಾಡಿ ಹೂವು ರಫ್ತು ಮಾಡಲು ಸಹಕಾರ ಮಾಡಲಾಗುವುದು.( ಮಲ್ಲಿಕಾರ್ಜುನ ಜಾನಮಟ್ಟಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಗೋಕಾಕ).