ತಾವರಗೇರಾ: ಪಟ್ಟಣದ ರೈತ ಶ್ರೀನಿವಾಸಸಿಂಗ್ ಬಳ್ಳಾರಿ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಎರಡು ಎಕರೆ ಜಮೀನಿನಲ್ಲಿ ವಾಣಿಜ್ಯ ಬೆಳೆ ಪುಷ್ಪ ಕೃಷಿಗೆ ಮುಂದಾಗಿದ್ದಾರೆ. ಅಲ್ಪ ಶ್ರಮದಲ್ಲಿ ಅಧಿಕ ಲಾಭ ತಂದು ಕೊಡುವ ಚೆಂಡು ಹೂ, ಅಡಿಕೆ ಹೂ ಬೆಳೆ ಬೆಳೆಯುವ ಮೂಲಕ ಪುಷ್ಪೋದ್ಯಮದತ್ತ ಮುಖ ಮಾಡಿ ಹೂ ನಗೆ ಬೀರಿದ್ದಾರೆ.
ಪಟ್ಟಣದ ಕುಷ್ಟಗಿ ರಸ್ತೆ ಬಳಿಯಿರುವ ಶ್ರೀನಿವಾಸಸಿಂಗ್ ಅವರ ಹೊಲದಲ್ಲಿ ಬೆಳೆದು ನಿಂತಿರುವ ಚಂಡು ಹೂ ದಾರಿಹೋಕರನ್ನು ಕೈ ಬೀಸಿ ಕರೆಯುತ್ತಿದೆ. ಚಂಡು ಹೂವಿನ ಹೊಲ ನೋಡಲು ಆತ್ಯಾಕರ್ಷವಾಗಿದ್ದು, ದೀಪಾವಳಿಗೆ ಬಂಪರ್ ಲಾಭ ತಂದು ಕೊಡಲಿದೆ ಎಂಬ ಅಭಿಲಾಷೆ ರೈತನದ್ದಾಗಿದೆ. ರೈತ ಶ್ರೀನಿವಾಸಸಿಂಗ್ ಈ ಮೊದಲು ಬೆಳಗಾವಿಯಿಂದ ಚಂಡು ಹೂವಿನ ಬೀಜ ತಂದಿದ್ದರು. ನಂತರ ನಾಟಿ ಮಾಡಿದ ಸಸಿಗಳ ಹೂಗಳಿಂದ ತಾವೇ ಸ್ವತ ಬೀಜ ತಯಾರಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಚಂಡು ಹೂ ಬೆಳೆಯುತ್ತಿದ್ದಾರೆ.
ಹದವಾದ ಜಮೀನಿನಲ್ಲಿ ಬಿತ್ತನೆ ಮಾಡಿ ಸಸಿ ತಯಾರಿಸಿಕೊಂಡಿದ್ದಾರೆ. ಬೀಜ ಬಿತ್ತಿದ 25-30 ದಿನಕ್ಕೆ ಸಸಿಗಳು ನಾಟಿಗೆ ಬರುತ್ತವೆ. ಗಿಡದಿಂದ ಗಿಡಕ್ಕೆ ಒಂದೂವರೆ ಅಡಿಯಿಂದ ಎರಡು ಅಡಿ ಹಾಗೂ ಸಾಲಿನಿಂದ ಸಾಲಿಗೆ 3 ಅಡಿ ಅಂತರ ಬಿಟ್ಟು ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲನೆ ವಾರದಲ್ಲಿ ಸಸಿ ನಾಟಿ ಮಾಡಿದ್ದಾರೆ. ಸಸಿಗಳಿಗೆ ಡ್ರೀಪ್ ಅಳವಡಿಸಿದ್ದು, ಭೂಮಿ ತೇವಾಂಶ ನೋಡಿಕೊಂಡು ನೀರು ಬೀಡಲಾಗುತ್ತಿದೆ. ಅರ್ಧಎಕರೆ ಅಡಿಕೆ ಹೂಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡಿದ 35-45 ದಿನದೊಳಗೆ ಹೂ ಕೊಯ್ಲಿಗೆ ಬರುತ್ತದೆ. ಚಂಡು ಹೂ ಮೂರು-ಮೂರುವರೆ ತಿಂಗಳ ಬೆಳೆಯಾಗಿದೆ.
ಹೂವಿಗೆ ರೋಗ ಬಾಧೆ ಇಲ್ಲ: ಮೊಗ್ಗು ಬೀಡುವ ಸಮಯದಲ್ಲಿ ಕೀಟಗಳು ಬರುತ್ತವೆ. ಅವುಗಳ ನಿರ್ವಹಣೆಗೆ ಕೀಟನಾಶಕ ಸಿಂಪಡಣೆ ಮಾಡಬೇಕು. ಎಕರೆಗೆ 4-5 ಸಾವಿರ ರೂ ಖರ್ಚು ಬರುತ್ತದೆ. ಒಂದು ಕೆಜಿ ಹೂಗೆ 40-50 ರೂ.ಗೆ ಮಾರಾಟ ಮಾಡುತ್ತಿದ್ದು, ಒಂದೂವರೆ ಎಕರೆಯಲ್ಲಿ ಚಂಡು ಹೂ 3 ಟನ್ ಆಗುವ ಸಾಧ್ಯತೆಯಿದೆ ಎನ್ನುತ್ತಾರೆ ರೈತ ಶ್ರೀನಿವಾಸ್‌ಸಿಂಗ್.
-ಎನ್. ಶಾಮೀದ್