Advertisement

ಶೌಚಗೃಹ ಬಳಕೆಗೆ ಹೂ ನೀಡಿ ಜಾಗೃತಿ

04:31 PM Nov 20, 2019 | Suhan S |

ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಸಾರ್ವಜನಿಕರಿಗೆ ಶೌಚಾಲಯ ಬಳಸಿ, ಪರಿಸರ ಸಂರಕ್ಷಿಸಿ ಎಂದು ಗುಲಾಬಿ ಹೂ ನೀಡಿ ವಿನೂತನವಾಗಿ ಅರಿವು ಮೂಡಿಸಲಾಯಿತು.

Advertisement

ಮಂಗಳವಾರ ನಗರದ ಸಿಟಿ ಬಸ್‌ ನಿಲ್ದಾಣದ ಶೌಚಾಲಯದ ಮುಂಭಾಗ ಅರಿವು ಮೂಡಿಸುವ ಫ‌ಲಕಗಳನ್ನು ಪ್ರದರ್ಶಿಸಿ ಅರಿವು ಮೂಡಿಸಿದರು. ಈ ವೇಳೆ ಮಾತ ನಾಡಿದ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮೈಸೂರು ಸ್ವಚ್ಛ ನಗರಿ ಎಂದು ಈಗಾಗಲೇ ಖ್ಯಾತಿ ಪಡೆದಿದೆ. ನಗರಪಾಲಿಕೆ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಕೂಡ ಎಲ್ಲ ನಾಗರಿಕರು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.  ಇದನ್ನು ಮನಗಂಡು ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ. ನಗರಪಾಲಿಕೆ ಹೆಚ್ಚು ಹೆಚ್ಚು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಿ ಎಂದು ಮನವಿ ಮಾಡಿದರು.

ದುಬಾರಿ ದಂಡ ವಿಧಿಸಿ: ಗೂಗಲ್‌ ಮ್ಯಾಪ್‌ ನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸೇರಿಸಬೇಕು ಮಾಡಬೇಕು. ಬೇಡದೆ ಇರುವ ಫ‌ಲಕಗಳನ್ನು ಹಾಕುವ ಬದಲು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ದಾರಿಗಳ ಫ‌ಲಕಗಳನ್ನು ಹಾಕುವುದು ಮುಖ್ಯ. ಸ್ವಚ್ಛತೆ ಕಾಪಾಡಬೇಕು ಇಷ್ಟೆಲ್ಲಾ ಮಾಡಿದ ಮೇಲೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಅವರಿಗೆ ಐದು ಸಾವಿರ ದಂಡ ಹಾಗೂ ಒಂದು ದಿನ ಶೌಚಾಲಯ ಕ್ಲೀನ್‌ ಮಾಡುವ ಕೆಲಸ ನೀಡಬೇಕು ಎಂದು ಹೇಳಿದರು.

ಮಲಮೂತ್ರದಿಂದ ಗೊಬ್ಬರ: ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ವಿಕ್ರಮ್‌ ಅಯ್ಯಂಗಾರ್‌ ಮಾತನಾಡಿ, ಮಾನವ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿದರೆ ಸ್ವಚ್ಛ ಪರಿಸರ ಹೊಂದುವುದು ಸಾಧ್ಯವಾಗಲಿದೆ. ವಿದೇಶಗಳಲ್ಲಿ ಮಾನವ ಮಲಮೂತ್ರದಿಂದ ಗೊಬ್ಬರ ತಯಾರಿಸಲಾಗುತ್ತಿದೆ. ಇದು ನಮ್ಮಲ್ಲೂ ಪ್ರಯೋಗವಾಗಬೇಕು. ಇದರಿಂದ ಕೃಷಿ ಚಟುವಟಿಕೆಗೂ ಪ್ರೋತ್ಸಾಹ ಸಿಕ್ಕಂತಾಗಲಿದೆ. ಈ ಪ್ರಯತ್ನ ಎಚ್‌.ಡಿ.ಕೋಟೆ ತಾಲೂಕಿನಲ್ಲಿ 600ಕ್ಕೂ ಹೆಚ್ಚು ಶೌಚಾ ಲಯಗಳಲ್ಲಿ ನಡೆದಿದೆ. ಹೊಸಹಳ್ಳಿ ಗ್ರಾಮಸ್ಥರು ಮನೆ ಮನೆಗಳಲ್ಲೂ ಗೊಬ್ಬರ ತಯಾರು ಮಾಡುತ್ತಿದ್ದಾರೆ. ನಗರಗಳಿಗಿಂತ ಹಳ್ಳಿಗಳಲ್ಲಿ ಶೌಚಾಲಯಕ್ಕೆ ನೀರನ್ನು ಕಡಿಮೆ ಬಳಸುತ್ತಾರೆ. ಇದು ನಗರಗಳಲ್ಲೂ ಪಾಲನೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ. ಪಾರ್ಥಸಾರಥಿ, ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕುಮಾರ್‌ ಗೌಡ , ಪದಾಧಿಕಾರಿಗಳಾದ ರಾಕೇಶ್‌ ಶ್ರೀನಿವಾಸ್‌, ಸುಚೀಂದ್ರ, ಚಕ್ರಪಾಣಿ, ಎಸ್‌.ಎನ್‌.ರಾಜೇಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next