Advertisement

ಎತ್ತಿನಹೊಳೆ ವ್ಯಾಪ್ತಿಯಲ್ಲಿ ಫ್ಲೋ ಮೀಟರ್‌ ಅಳವಡಿಕೆ

11:38 AM May 27, 2018 | |

ಬೆಂಗಳೂರು: ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಒಳಪಡುವ ಹಳ್ಳಗಳು ಹಾಗೂ ಉಪ ನದಿಗಳಲ್ಲಿ ಟೆಲಿಮೆಟ್ರಿಕ್‌ ಫ್ಲೋ ಮೀಟರ್‌ ಅಳವಡಿಸುವ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Advertisement

ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಹಾಗೂ ಅಂರ್ತಜಲ ಮರುಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50ರಷ್ಟು ನೀರು ತುಂಬಿಸುವ ಉದ್ದೇಶದಿಂದ ಎತ್ತಿನ ಹೊಳೆ ಯೋಜನೆ ರೂಪಿಸಲಾಗಿದೆ.

ಪ್ರಸ್ತುತ ಯೋಜನೆಯಡಿ ಲಿಫ್ಟ್ ಮತ್ತು ಗುರುತ್ವ ಕಾಲುವೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಫ್ಲೋ ಮೀಟರ್‌ ಅಳವಡಿಕೆ ಸಂಬಂಧ ಕೆಟಿಪಿಪಿ ನಿಯಮಗಳನ್ವಯ ಇತ್ತೀಚೆಗೆ ಟೆಂಡರ್‌ ಪ್ರಕ್ರಿಯೆ ನಡೆಸಿ, ಜರ್ಮನಿ ಮೂಲದ ಕ್ಯಾನರಿ ಆಟೋಮೇಷನ್ಸ್‌ ಸಂಸ್ಥೆಗೆ ಕಾಮಗಾರಿ ಹೊಣೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಸಿರು ನ್ಯಾಯಾಧಿಕರಣ ಮತ್ತು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಆದೇಶದ ಅನ್ವಯ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆಯ ಲಿಫ್ಟ್ ಕಾಮಗಾರಿಗೆ ಸೀಮಿತವಾಗಿ ಪ್ರಾರಂಭಿಕ ಹಂತದಲ್ಲಿ ಟೆಲಿಮೆಟ್ರಿಕ್‌ ಫ್ಲೋ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ.

ಲಿಫ್ಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಲಿಫ್ಟ್ಗಳಿಗೆ ಚಾಲನೆ ನೀಡಲಾಗುತ್ತದೆ. ಇದರ ಜತೆಜತೆಗೇ ಫ್ಲೋ ಮೀಟರ್‌ಗಳ ಅಳವಡಿಕೆ ಕಾರ್ಯವನ್ನೂ ಪೂರ್ಣಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಗುತ್ತಿಗೆ ಪಡೆದಿರುವ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

Advertisement

ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಂಸ್ಥೆಯು ಜರ್ಮನಿಯಲ್ಲೇ ತಯಾರಿಸಿದ್ದು, ಅವುಗಳನ್ನು ಬಳಸಿ ಕಾಮಗಾರಿ ಆರಂಭಿಸುವ ಮೊದಲು ಸಂಬಂಧಪಟ್ಟ ಮೇಲಧಿಕಾರಿಗಳ ಪರಿವೀಕ್ಷಣೆಗೆ ಒಳಪಡಿಸುವಂತೆಯೂ ಕಂಪನಿಗೆ ಸೂಚಿಸಲಾಗಿದೆ.

ಇದೇ ವೇಳೆ ಕ್ಯಾನರಿ ಸಂಸ್ಥೆಯು ಈ ಹಿಂದೆ ಟೆಲಿಮೆಟ್ರಿಕ್‌ ಫ್ಲೋ ಮೀಟರ್‌ಗಳನ್ನು ಅಳವಡಿಸಿರುವ ಸ್ವಿಡ್ಜರ್‌ಲ್ಯಾಂಡ್‌ನ‌ ಸ್ಥಳಗಳಿಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಕಾಮಗಾರಿಯ ಗುಣಮಟ್ಟ, ಉಪಯುಕ್ತತೆ ಸೇರಿ ಹಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದೆ.

ಇಲಾಖೆ ಕಾರ್ಯದರ್ಶಿ ಬಿ.ಜಿ.ಗುರುಪಾದಸ್ವಾಮಿ, ವಿಶ್ವೇಶ್ವರಯ್ಯ ಜಲ ನಿಗಮದ  ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್‌, ಎತ್ತಿನಹೊಳೆ ಯೋಜನೆ ತುಮಕೂರು ವಿಭಾಗದ ಮುಖ್ಯ ಇಂಜಿನಿಯರ್‌ ಪಿ.ಚನ್ನಪ್ಪ ನಾಯಕ್‌, ಜಲಸಂಪನ್ಮೂಲ ಇಲಾಖೆ ಉಪ ಕಾರ್ಯದರ್ಶಿ ಡಾ.ಗೀತಾ ಅವರು ಪರಿಶೀಲನೆಗಾಗಿ ವಿದೇಶಕ್ಕೆ ತೆರಳಿದ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next