Advertisement

ಸೋರುತಿಹುದು ಸರ್ಕಾರಿ ಶಾಲೆಗಳ ಮಾಳಿಗೆ! ಜಿಲ್ಲೆಯ ನೂರಾರು ಶಾಲಾ ಕೊಠಡಿಗಳು ಶಿಥಿಲ

03:12 PM Jun 03, 2023 | Team Udayavani |

ರಾಮನಗರ: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಶಾಲೆಗಳ ಬಾಗಿಲು ತೆರೆದು ಶಿಕ್ಷಣ ಇಲಾಖೆ ಶಾಲೆಗೆ ಬನ್ನಿಮಕ್ಕಳೆ ಎಂದು ಕೈಬೀಸಿ ಕರೆಯುತ್ತಿದೆ. ಆದರೆ, ಜಿಲ್ಲೆಯ ಸಾಕಷ್ಟು ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಮಳೆ-ಗಾಳಿಗೆ ಮುರಿದು ಬೀಳುವ ಶಾಲೆಗಳಲ್ಲಿ ಕುಳಿತು ಪಾಠಕೇಳುವ ದುಸ್ಥಿತಿ ನಿರ್ಮಾಣಗೊಂಡಿದೆ.

Advertisement

ಹೌದು.., ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕೊಠಡಿಗಳು ಸುಸ್ಥಿತಿಯಲ್ಲಿವೆ, ಶಾಲಾ ಕೊಠಡಿಗಳ ಸಮಸ್ಯೆ ಇಲ್ಲವೆಂದು ಜಿಲ್ಲಾ
ಶಿಕ್ಷಣ ಇಲಾಖೆ ಹೇಳುತ್ತಿದೆಯಾದರೂ, ಕೆಲ ಶಾಲೆಗಳ ಅಂಗಳಕ್ಕೆ ಹೋಗಿ ನೋಡಿದರೆ ವಾಸ್ತವ ಸ್ಥಿತಿ ಅನಾವರಣಗೊಳ್ಳುತ್ತದೆ. ಮಕ್ಕಳು ಹಾಗೂ ಶಿಕ್ಷಕರು ಜೀವಭಯದಲ್ಲಿ ಕೊಠಡಿ ಯಲ್ಲಿ ಕುಳಿತು ಪಾಠ ಕೇಳುತ್ತಿರುವ ಚಿತ್ರಣ ಸ್ಪಷ್ಟವಾಗಿ ಕಾಣುತ್ತದೆ.

400 ಕ್ಕೂ ಹೆಚ್ಚು ಕೊಠಡಿಗಳು ಶಿಥಿಲ: ಜಿಲ್ಲೆಯ 1,677 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ ಎಂಬ ಮಾಹಿತಿಯನ್ನು ಎಸ್‌ಡಿಎಂಸಿ ಮೇಲುಸ್ತವಾರಿ ಸಮಿತಿಯೇ ಹೇಳುತ್ತಿದೆ. ಜಿಲ್ಲೆಯ ಗಡಿಗ್ರಾಮಗಳಲ್ಲಿನ ಶಾಲೆಗಳು ದುರಸ್ತಿ ಕಾಣದಾಗಿದೆ. ಇನ್ನು ಪಟ್ಟಣ ಪ್ರದೇಶದಲ್ಲಿರುವ ಶಾಲೆಗಳ ಅವ್ಯವಸ್ಥೆಯೂ ಹೇಳತೀರದಾಗಿದ್ದು, ಶಾಲೆಗಳಿಗೆ ಕೊಠಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಗಮನಹರಿಸಿಲ್ಲ ಎಂಬ ಆಪಾದನೆ ವ್ಯಾಪಕವಾಗಿದೆ.

ಜೀವ ಕೈಯಲ್ಲಿಡಿದು ಪಾಠಕೇಳುವ ಸಂದಿಗ್ಧತೆ: ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಪಾಠ ಕೇಳದ ಸ್ಥಿತಿಯಲ್ಲಿವೆ. ಕೆಲ ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ ಒಂದೆರಡು ಕೊಠಡಿಗಳನ್ನು ಬಳಕೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಮತ್ತೆ ಕೆಲ ಶಾಲೆಗಳಲ್ಲಿ ಕಟ್ಟಡದ ಸೀಲಿಂಗ್‌ ಕಿತ್ತು ಬರುತ್ತಿದ್ದರೂ, ಅದರ ಕಳೆಗೇ ಕುಳಿತು ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದಾಗಿದ್ದರೆ, ಜೀವ ಕೈಯಲ್ಲಿಡಿದು ಪಾಠಕೇಳುವ ಸಂದಿಗ್ಧತೆ ಮಕ್ಕಳದ್ದಾಗಿದೆ.

ಮುರುಕು ಜಂತಿ, ಉಳುಕು ತೊಲೆ, ಬಿರುಕು ಬಿಟ್ಟ ಗೋಡೆಗಳು
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ಸಾಕಷ್ಟು ಶಾಲೆಗಳು ಸುಮಾರು 30 ರಿಂದ 50 ವರ್ಷಗಳಷ್ಟು ಹಳೆಯ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿರುವುದು ಒಂದೆಡೆಯಾದರೆ, ಮತ್ತೆ ಕೆಲ ಗ್ರಾಮಗಳಲ್ಲಿ ಮೇಲ್ಛಾವಣಿಗೆ ಹಾಕಿರುವ ತೊಲೆ, ಜಂತಿಗಳು ಮುರಿದು ಹೋಗಿವೆ. ಹೆಂಚುಗಳು ಇಲ್ಲವಾಗಿದ್ದು, ಬಿಸಿಲಿನಲ್ಲಿ ಒಣಗುವ ಮಳೆಯಲ್ಲಿ ನೆನೆಯುತ್ತಾ ಪಾಠ ಕೇಳುವ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಮಳೆಯಲ್ಲಿ ಸೋರುವ ಕೊಠಡಿಗಳಲ್ಲಿ ಶಾಲಾ ದಾಖಲಾತಿಗಳನ್ನು ಸಂರಕ್ಷಿಸುವುದೇ ಶಿಕ್ಷಕರಿಗೆ ಬಹುದೊಡ್ಡ ಸವಾಲಾಗಿದೆ.

Advertisement

ನೆಪಮಾತ್ರಕ್ಕೆ ರಿಪೇರಿ: ಅಸಮಾಧಾನ ಚುನಾವಣೆ ಸಮಯದಲ್ಲಿ ಶಾಲಾ ಕೊಠಡಿಗಳು ದುರಸ್ತಿಗೊಂಡಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮತದಾನ ನಡೆಯುವ ಒಂದೆರಡು ಕೊಠಡಿಗಳ ಹೆಂಚುಗಳನ್ನು ಸರಿ ಮಾಡಿ ಸಣ್ಣ ಪುಟ್ಟ ರಿಪೇರಿ ಮಾಡಿಸಿ ಚುನಾವಣೆ ಮುಗಿಸಿಕೊಳ್ಳಲಾಗಿದೆ. ಈ ರಿಪೇರಿ ಶಾಲಾ ಕೊಠಡಿಗಳ ಶಾಶ್ವತ ಸಮಸ್ಯೆಗೆ ಪರಿಹಾರ ಕಲ್ಪಿಸುವಂತದಲ್ಲ ಎಂಬುದು ಪೋಷಕರ ವಿವರಣೆಯಾಗಿದೆ. ನೆಪಮಾತ್ರದ ದುರಸ್ತಿಯನ್ನು ತೋರಿಸುತ್ತಿರುವ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶೌಚಾಲಯ, ನೀರಿನ ಸಮಸ್ಯೆ
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಕಾಡುತ್ತಿದೆ. ಕೆಲ ಶಾಲೆಗಳಲ್ಲಿ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದ್ದರೆ, ಮತ್ತೆ ಕೆಲ ಶಾಲೆಗಳಲ್ಲಿ ಶೌಚಾಲಯ ಇದ್ದರೂ ಶೌಚಾಲಯಕ್ಕೆ ಸರಿಯಾಗಿ ನೀರು
ಪೂರೈಕೆ ಇಲ್ಲದ ಕಾರಣ ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಗಮನಹರಿಸಬೇಕಿದೆ.

ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ಸಮಸ್ಯೆ ಇಲ್ಲ. ಕಳೆದ ಬಾರಿ ಕೊಠಡಿಗಳ ದುರಸ್ತಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಬಹುತೇಕ ಕೊಠಡಿಗಳು ದುರಸ್ತಿಯಾಗಿವೆ. ಆಗಿದ್ದಾಗಿಯೂ ಕೊಠಡಿಗಳ ನೂನ್ಯತೆ ಇದ್ದಲ್ಲಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಗಂಗಣ್ಣ ಸ್ವಾಮಿ,
ಜಿಲ್ಲಾ ಉಪನಿರ್ದೇಶಕರು,
ಶಿಕ್ಷಣ ಇಲಾಖೆ

ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ಮಕ್ಕಳು ಕೂರದ ಸ್ಥಿತಿಯಲ್ಲಿದೆ. ಈ ಬಗ್ಗೆ ಹಲವಾರು ಬಾರಿ
ಮನವಿ ಮಾಡಿ ದರೂ ಅಧಿಕಾರಿಗಳು ಗಮನಹರಿ ಸುತ್ತಿಲ್ಲ. ಕೆಲ ಶಾಲೆಗಳಿಗೆ ಶೌಚಾಲಯ ಇಲ್ಲ, ನೀರಿನ ವ್ಯವಸ್ಥೆ ಇಲ್ಲ. ಕಾಂಪೌಂಡ್‌ ಇಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಯಾಕೆ ಇಷ್ಟೋಂದು ಉದಾಸೀನ. ಸರ್ಕಾರಿ ಶಾಲೆಗಳನ್ನು ಮುಚ್ಚಿಸಿ ಬಡ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿಸುವ ಹುನ್ನಾರವೇ?
– ಎನ್‌.ಎಂ. ಶಂಭೂಗೌಡ, ನಾಗವಾರ,
ಉಪಾಧ್ಯಕ್ಷ, ಎಸ್‌ಡಿಎಂಸಿ ಸಮನ್ವಯ ವೇದಿಕೆ

ನಮ್ಮೂರಿನ ಶಾಲೆ ಗೋಡೆ ಬಿರುಕು ಬಿಟ್ಟು ಎರಡು ಮೂರು ವರ್ಷ ಕಳೆದಿವೆ. ತೊಲೆಗಳು ಮುರಿದಿವೆ. ಶಾಲಾ
ಕೊಠಡಿ ದುರಸ್ತಿಗೆ ಆಗ್ರಹಿಸಿ, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ನೀಡಿದರೂ ಖಾಲಿ ಭರವಸೆಯ
ಹೊರತು, ಯಾವುದೇ ಪ್ರಯೋಜನವಾಗಿಲ್ಲ. ಗಡಿಗ್ರಾಮದ ಸರ್ಕಾರಿ ಶಾಲೆ ಬಗ್ಗೆ ತಾಲೂಕು ಆಡಳಿತ ತೋರುತ್ತಿರುವ ಉದಾಸೀನದಿಂದ ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯಬೀಳುತ್ತಿದ್ದಾರೆ.
– ಮಹೇಶ್‌ ಮೆಂಗಹಳ್ಳಿ, ಗ್ರಾಮಸ್ಥ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next