ಬಾಗಲಕೋಟೆ : ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಜಿಲ್ಲೆಯ ಬಹುಭಾಗ ಮುಳುಗಡೆಗೊಂಡು ಮುಳುಗಡೆ ಜಿಲ್ಲೆ ಎಂದೇ ಕರೆಸಿಕೊಳ್ಳುವ ಬಾಗಲಕೋಟೆ, ತಿಂಗಳೋಳಗೆ ಮತ್ತೆ ಪ್ರವಾಹ ಎದುರಿಸುವ ಭೀತಿ ಕಾಡುತ್ತಿದೆ. ಜಿಲ್ಲೆಯ ಮೂರು ನದಿಗಳು ಮತ್ತೊಮ್ಮೆ ತುಂಬಿ ಹರಿದರೆ, ಈಗಾಗಲೇ ಸಂತ್ರಸ್ತರಾಗಿರುವ ಜನರ ಬದುಕು, ಸಂಪೂರ್ಣ ಬೀದಿ ಪಾಲಾಗಲಿದೆ.
ಹೌದು, 105 ವರ್ಷಗಳ ಬಳಿಕ ಜಿಲ್ಲೆ, ಭೀಕರ ಪ್ರವಾಹ ಕಂಡಿದೆ. ಮೂರೂ ನದಿಗಳು, ಜಿಲ್ಲೆಯ 195 ಹಳ್ಳಿಗರ ಬದುಕನ್ನು ಛಿದ್ರಗೊಳಿಸಿವೆ. ಇದೀಗ ಪುನಃ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ, ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ.
ಕಳೆದ ತಿಂಗಳಷ್ಟೇ ಮೂರು ನದಿಗಳ ಪ್ರವಾಹದಿಂದ ನಲುಗಿ, ಮನೆ, ಬೆಳೆ, ಮನೆಯಲ್ಲಿನ ದೈನಂದಿನ ಬದುಕಿನ ಎಲ್ಲ ಸಾಮಗ್ರಿ ಕಳೆದುಕೊಂಡಿರುವ 195 ಹಳ್ಳಿಗಳ, 43,136 ಕುಟುಂಬಗಳ 1,49,408 ಜನರು, ಇದೀಗ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ. ಮನೆಗಳು ಸಂಪೂರ್ಣ ಬಿದ್ದಿದ್ದರಿಂದ 12,764 ಜನರು ಇಂದಿಗೂ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಪುನಃ ಪ್ರವಾಹ ಬಂದರೆ, ಜನ ಜೀವನ ಮತ್ತಷ್ಟು ಬಿಡಗಾಯಿಸಲಿದೆ.
ಮಲಪ್ರಭಾ ನದಿಗೆ ಸವದತ್ತಿ ಬಳಿ ನಿರ್ಮಿಸಿದ ನವಿಲುತೀರ್ಥ ಡ್ಯಾಂ, ತನ್ನ ಇತಿಹಾಸದಲ್ಲೇ ಮೂರು ಬಾರಿ ಮಾತ್ರ ತುಂಬಿದ್ದು, ಅದು ಈ ಬಾರಿ ಭರ್ತಿಯಾಗಿ, 93,092 ಕ್ಯೂಸೆಕ್ ನೀರು ಹೊರ ಬಿಡಲಾಗಿತ್ತು. ಶುಕ್ರವಾರ ಸಂಜೆ ಮಲಪ್ರಭಾ ನದಿಗೆ 16100 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಾಲುವೆ ಮೂಲಕ 1100ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಇನ್ನು ಘಟಪ್ರಭಾ ನದಿಗೆ ಶುಕ್ರವಾರ ಬೆಳಗ್ಗೆ 23 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದರೆ, ಕೃಷ್ಣಾ ನದಿಗೆ 72,182 ಕ್ಯೂಸೆಕ್ ಹರಿದು ಬರುತ್ತಿದ್ದು, ಆಲಮಟ್ಟಿ ಡ್ಯಾಂನಿಂದ 1,85,085 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಮೂರೂ ನದಿಗಳಲ್ಲಿ ಈ ನೀರು, ಶನಿವಾರ ರವಿವಾರದ ಹೊತ್ತಿಗೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನದಿ ಪಾತ್ರದಲ್ಲಿ ಕಟ್ಟೆಚ್ಚರ
ಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ. ಮಲಪ್ರಭಾ ನದಿಗೆ ಸಧ್ಯ 16100 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಘಟಪ್ರಭಾಕ್ಕೆ ಬೆಳಗ್ಗೆ ೫ ಸಾವಿರ ಕ್ಯೂಸೆಕ್ ಮಾತ್ರ ಇತ್ತು. ಇದು ಸಂಜೆಯ ಹೊತ್ತಿಗೆ ಹೆಚ್ಚಾಗಿದೆ. ಇನ್ನು ಕೃಷ್ಣಾ ನದಿಗೆ ಸಧ್ಯ 1.4೦ ಲಕ್ಷ ಕ್ಯೂಸೆಕ್ ವರೆಗೆ ನೀರು ಬರುತ್ತಿದ್ದು, 2.50 ಲಕ್ಷ ಕ್ಯೂಸೆಕ್ ವರೆಗೆ ನೀರು ಬಂದರೂ ಯಾವುದೇ ಸಮಸ್ಯೆ ಆಗಲ್ಲ. ಆದರೂ, ಮೂರೂ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
- ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ