Advertisement

ಜಲ ಪ್ರಳಯ!

06:00 AM Aug 26, 2018 | |

ನೀರಿನ ಸಹಜ ದಾರಿಯನ್ನು ನಾವು ಬದಲಾಯಿಸಿದರೆ ಅದು ನಮ್ಮ ಬದುಕನ್ನೇ ಗುಡಿಸಿ ಬಿಡುತ್ತದೆ ಎಂಬುದಕ್ಕೆ ಈ ಜಲಪ್ರಳಯವೇ ಸಾಕ್ಷಿ . ನಿನ್ನೆ , ಮೊನ್ನೆಯವರೆಗೆ “ನೀರು ಬಿಡಿ’ ಎಂದು ಕೋರ್ಟಿಗೆ ಹೋದವರು ಮುಂದೆ ಅಣೆಕಟ್ಟುಗಳಿಂದ “ನೀರು ಬಿಡಲೇ ಬೇಡಿ’ ಎಂದು ತಗಾದೆ ಹೂಡುವ ಸಾಧ್ಯತೆಗಳಿವೆ! ನಿಸರ್ಗದ ಸಿದ್ಧಸೂತ್ರದ ವಿರುದ್ಧ “ಮಹಾ ಮನುಷ್ಯ’ ಗೋಡೆ ಕಟ್ಟಿದರೆ ಪ್ರಕೃತಿ ಮನುಷ್ಯನ ವಿರುದ್ಧ ಖೆಡ್ಡಾವನ್ನೇ ತೋಡುತ್ತದೆ!

Advertisement

ಕಟ್ಟಿದ ಅಣೆಕಟ್ಟು ತುಂಬದೇ ಇದ್ದಾಗ, ಎಷ್ಟೋ ವರ್ಷ ಅದರ ಗೇಟೇ ತೆರೆಯದೇ ಇದ್ದಾಗ ಆ ಕಟ್ಟದ ಕೆಳಗಡೆ ಬದುಕುವವರಲ್ಲಿ ನೀರಿನ ಬಗ್ಗೆ ಯಾವುದೇ ಭಯಾನಕ ಕಲ್ಪನೆಗಳೇ ಇರುವುದಿಲ್ಲ. ಮೇಲಿನ ಎಲ್ಲಾ ಊರು, ಭೂಮಿ, ಹೊಳೆ-ನದಿಗಳ ನೀರನ್ನು ಬಸಿದುಕೊಂಡು ನಿಯತವಾಗಿ ನಾಲೆಗೆ ಹರಿಸಿ ವರ್ಷದ ಕೊನೆಗೆ ಬರಿದಾಗಿ ಮತ್ತೆ ಆ ಕಟ್ಟ ಮಳೆಗೆ ಕಾಯುತ್ತದೆ. ಕೇರಳದಲ್ಲಿ ಆದದ್ದು ಅದೇ. ಮುಂದೆ ಕರ್ನಾಟಕ, ಆಂಧ್ರ, ಗುಜರಾತ್‌ ಎಲ್ಲೂ ಬೇಕಾದರೂ ಹೀಗೆಯೇ ಆಗಬಹುದು. ಕಟ್ಟದ ನೀರು ಒಮ್ಮೆಲೇ ಬಿಟ್ಟಾಗ ಎಷ್ಟೊಂದು ಮನೆಗಳು ಪ್ರವಾಹಕ್ಕೆ ಹೋದವೋ ಅದು ನಿಜವಾಗಿಯೂ ಅದೇ ನೀರಿನ ಹಳೆಯ ಸಹಜ ದಾರಿ. ಮನುಷ್ಯ ನೀರಿಲ್ಲ ಎಂದು ಅತಿಕ್ರಮಿಸಿದ ದಾರಿ. ಒಂದು ಐವತ್ತು ವರ್ಷ ಈ ದೇಶದ ಯಾವುದೇ ನದಿ-ಹೊಳೆ ನೀರಿಲ್ಲದೆ ಬತ್ತಲಿ, ನಿಧಾನವಾಗಿ ಅಲ್ಲೆಲ್ಲ “ಮಹಾಮನುಷ್ಯ’ ಬದುಕಲಾರಂಭಿಸುತ್ತಾನೆ. ಅಲ್ಲಿಂದಲೇ ಮರಳೆತ್ತಿ ಅಲ್ಲೇ ಮನೆಕಟ್ಟುತ್ತಾನೆ. ಅದೇ ಖಾಲಿ ಹೊಳೆಗೆ ಮಣ್ಣು ಜಾರಿಸಿ ಕೃಷಿ ಮಾಡುತ್ತಾನೆ. ಅದೇ ಹೊಳೆ-ನದಿಯಲ್ಲಿ ಪ್ರವಾಹ ನೋಡಿದವರೆಲ್ಲ ಹಳಬರಾಗಿ ವಯಸ್ಸಾಗಿ ತೀರಿದ ಮೇಲೆ ಅವರೊಂದಿಗೇ ಆ ನೀರಿನ ಕತೆಯೂ ಮುಕ್ತಾಯವಾಗುತ್ತದೆ.

ನೀರ ದಾರಿಗೆ ಅಡ್ಡ ಬರಬೇಡಿ 
ಈಗ ಕೇರಳ-ಕೊಡಗಿಗೆ ಇನ್ನು ನೂರು ವರ್ಷ ಸಾಕು. ಸದ್ಯಕ್ಕೆ ನದಿಯ ಹಾದಿಯಲ್ಲಿ ಇನ್ಯಾರೂ ಮನೆಕಟ್ಟಲು ಹೋಗುವುದಿಲ್ಲ. ಈಗ ಕಟ್ಟಿದವರ ಆರ್‌ಟಿಸಿ, ಆಧಾರ್‌ ಯಾವುದನ್ನೂ ನೀರು ಬಿಟ್ಟಿಲ್ಲ. ಅದಕ್ಕಿಂತಲೂ ನೀರಿನ ಒಯ್ಲಿನ ಭಯಾನಕ ಕತೆಗಳು. ನೋಡಿದವರು, ಅನುಭವಿಸಿದವರು ಅದನ್ನು ಹಾಗೆಯೇ ಉಳಿಸಿ ಬಾಯಿಂದ ಬಾಯಿಗೆ ದಾಟಿಸುತ್ತಾರೆ. ಅದು ಭೀಭತ್ಸ ಸಂಕಥನ. ಮನುಷ್ಯರಿಂದ ಮನುಷ್ಯರಿಗೆ ಜಾರಿ ಎಷ್ಟೋ ಕಾಲ ಹಾಗೆಯೇ ಉಳಿದು ಭವಿಷ್ಯದಲ್ಲಿ ಆ ನೀರದಾರಿ ಹಾಗೆಯೇ ಉಳಿಯುತ್ತದೆ.

ಮನುಷ್ಯ ಕೆಳಗಡೆ ನಿಂತು ನೀರನ್ನು ಎತ್ತರದಲ್ಲಿಡುವುದು, ಮನುಷ್ಯ ಎತ್ತರದಲ್ಲಿ ನಿಂತು ನೀರನ್ನು ಪಾತಾಳದಿಂದ ಬಗೆಯುವುದು ಎರಡೂ ಅಪಾಯಕಾರಿಯೇ. ನೀರನ್ನು ಭೂಮಿಯ ಮೇಲೆ ಸಹಜವಾಗಿ ಹರಿಯಲು ಬಿಟ್ಟು ಅದರ ಸಮಾನಾಂತರಕ್ಕೆ ಬಾಳುವುದು ನಿಜವಾಗಿಯೂ ಮನುಷ್ಯರೂ ಪ್ರಕೃತಿಯ ಭಾಗವಾಗಿ ಬದುಕುವ ಕ್ರಮ. ಇರುವೆ, ಮಂಗ, ಕೋಗಿಲೆ, ಆನೆ, ನಾಯಿ ಹೀಗೆಯೇ ಬದುಕುವುದು. ಮನುಷ್ಯ ಮಾತ್ರ ತನ್ನ ಎತ್ತರಕ್ಕೆ ತನ್ನ ಆಳಕ್ಕೆ ನೀರನ್ನು ತರಬಲ್ಲ. ಹಾಗಂತ ಅದೇ ಆದಾಗ ನೀರೂ ದಾರಿ ಬದಲಾಯಿಸದೆ ಸಹಜವಾಗಿ ಹರಿದು ತನ್ನ ದಾರಿಯನ್ನು ತಾನೇ ಕಂಡುಕೊಂಡು ತನ್ನ ದಾರಿ ಬದಲಾಯಿಸಿದವನಿಗೆ ಬುದ್ಧಿ ಕಲಿಸುತ್ತದೆ!

ನೀರಿನ ಈ ಸರಳ ಪಾಠ ಅಮೆರಿಕ-ಚೀನಾ ಮುಂತಾದ ಬಲಾಡ್ಯ ದೇಶಗಳಿಗೆ ಈಗಾಗಲೇ ಅರ್ಥವಾಗಿದೆ. ಅವರು ಕಟ್ಟಿದ ಕಟ್ಟಗಳನ್ನು ಮುರಿಯಲು, ನೀರನ್ನು ಸಹಜವಾಗಿ ಹರಿಯಬಿಡಲು ಶುರುಮಾಡಿದ್ದಾರೆ. ನಮ್ಮ ಹತ್ತಿರ ನದಿ ಬರುವುದು ಬೇಡ, ನಾವೇ ನದಿಯ ಹತ್ತಿರ ಹೋಗುವ ಎಂದು ತೀರ್ಮಾನಿಸಿದ್ದಾರೆ.

Advertisement

ಹಾಗೆ ನೋಡಿದರೆ, ನೀರಿನ ಹತ್ತಿರ ಮನುಷ್ಯ ಹೋದುದು ಚರಿತ್ರೆ. ಮನುಷ್ಯನ ಹತ್ತಿರ ನೀರೇ ಬಂದದ್ದು ವಿಜ್ಞಾನ. ಮನುಷ್ಯನನ್ನುಳಿದು ಬೇರೆಲ್ಲಾ ಜೀವಿಗಳು ಈಗಲೂ ನೀರಿನ ಹತ್ತಿರ ಹೋಗುತ್ತವೆ. ಮನುಷ್ಯ ಮಾತ್ರ ನೀರನ್ನು ಮನೆ ಕಟ್ಟಿದ ಮೇಲೆ, ಮನೆ ಕಟ್ಟಲು ಜಾಗ ನೋಡಿದ ಮೇಲೆ ಕರೆಸಿಕೊಳ್ಳುತ್ತಾನೆ. ಅವನಿಗೀಗ ನೀರಿಗಿಂತ ವಾಸ್ತು ಮುಖ್ಯ, ನೀರಿಗಿಂತ ಮೊಬೈಲ್‌ ರೇಂಜ್‌ ಮುಖ್ಯ. ಕರೆಂಟು, ರಸ್ತೆ ಮುಖ್ಯ. ನೀರಾ? ಬರುತ್ತೆ ಬಿಡಿ, ಎನ್ನುವಷ್ಟು ಸಲೀಸು. ಹತ್ತಾರು ಮೈಲು ದೂರಕ್ಕೆ, ಸಾವಿರಾರು ಅಡಿ ಆಳದಿಂದ ಅವನಿಗೆ ನೀರು ಎತ್ತಿ ಸುರಿದದ್ದು ವಿಜ್ಞಾನ, ತಂತ್ರಜ್ಞಾನ. ಆ ವೇಗ, ಅವಸರ, ಸುಖದಲ್ಲೀಗ ಅವನಿಗೆ ನೀರಿನ ಹತ್ತಿರಕ್ಕೆ ಹೋದ ನಮ್ಮ ಪೂರ್ವಜರ ಚರಿತ್ರೆ ಕಾಣಿಸುವುದೇ ಇಲ್ಲ. ಒಂದೇ ನೀರಿನಲ್ಲಿ ಮುಖ ನೋಡಿದ್ದು, ಮುಖ ತೊಳೆದದ್ದು, ಮೀನು ಹಿಡಿದದ್ದು , ಪಾತ್ರೆ ತೊಳೆದದ್ದು, ಹಸು-ಎಮ್ಮೆ ತೊಳೆದದ್ದು , ಈಜಿದ್ದು , ಕೃಷಿಗೆ ಬಳಸಿದ್ದು- ಎಲ್ಲವೂ ಒಂದೇ ನೀರು, ಹೊಳೆ, ನದಿ.

ಕೇರಳ-ಕರ್ನಾಟಕದಲ್ಲೀಗ ತುಂಬಿ ಹರಿಯುವ ನೀರನ್ನು ಅಂಗೈ ತುಂಬಿಸಿ ನೋಡಿ. ಮಳೆಗಾಲ ಸುರು ವಾಗಿ ಮೂರು ತಿಂಗಳಾದರೂ ಅಂಗೈ ನೀರಲ್ಲಿ ಮಣ್ಣು ತುಂಬಿದೆ. ಎಲ್ಲಾ ನೀರು ಕೆಂಪು ಕೆಂಪು, ಕೆಸರು ಮಣ್ಣು. ನನಗೆ ನದಿಯ ನೀರೀಗ ದ್ರವವಲ್ಲ , ಯಾವುದೋ ಗುಡ್ಡ , ಭೂಮಿಯಂತೆ ಘನವಾಗಿಯೇ ಕಾಣಿಸುತ್ತದೆ. ತುಂಡು ತುಂಡು ಭೂಮಿಯೇ ಕರಗಿ ಸಮುದ್ರ ಸೇರುವ ಪ್ರವಾಹವದು.

ಸ್ವಲ್ಪ ತಿರುಗಿ ನೋಡಿ. ನದಿ-ಹೊಳೆಯ ನೀರಿಗೆ ಅಂಟಿಕೊಂಡೆ ಗೂಡುಕಟ್ಟಿ ಬೇಟೆ-ಕಾಡು ಬಿಟ್ಟು ಕೃಷಿಗೆ ತೊಡಗಿದ ಮೇಲೆ ನಿಧಾನವಾಗಿ ನದಿ ಬಗೆದು ರಾಶಿ ಸುರಿದ ಸಾರ ಮಣ್ಣಿನಲ್ಲಿ ಬೆಳೆ ತೆಗೆದ. ಅದು ಸಾಕಾಗಲಿಲ್ಲ. ನದಿತಟದಿಂದ ಎತ್ತರಕ್ಕೆ ಏರಿ ಭೂಮಿ ಬಗೆಯುವ ಆಸೆಯಾಯಿತು. ನೇಗಿಲ ಜತೆಜತೆಗೆ ನೀರು ಎತ್ತುವ ಆವಿಷ್ಕಾರವೂ ಆಯಿತು. ಟಿಲ್ಲರ್‌ನ ಮುಂಚೆ ವಿಲ್ಲಿಯಸ್‌Õì ಪಂಪು ಬಂತು. ಟ್ರ್ಯಾಕ್ಟರ್‌ ಮುಂಚೆ ಕಿರ್ಲೋಸ್ಕರ್‌ ಬಂತು. ಕೈಗೆ ದುಡ್ಡು ಬಂದಾಗ ಗುಡ್ಡದ ತುದಿಗೆ ಜೆಸೀಬಿ ಹತ್ತಿತ್ತು. ಗುಡ್ಡಗಳು ಮಟ್ಟಸವಾದುವು. ದುಡ್ಡು ಕೊಡುವ ಗಿಡಗಳು, ಕಾರ್ಖಾನೆಗಳು, ಕಟ್ಟಡಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡವು. ಭೂಮಿಯ ಮೇಲಿನ ನೀರು ಸಾಕಾಗದೆ ಸಾವಿರಾರು ಅಡಿ ಆಳದಿಂದ ನೀರು ಮೇಲೆ ಬಂತು. ಪ್ರಕೃತಿಯ ಸಹಜ ಪಾಯ ಅಸ್ಥಿರಗೊಂಡು ಹವಾಮಾನದಲ್ಲಿ ವ್ಯತ್ಯಯವಾಯಿತು. ಈ ವರ್ಷದ್ದು ಸಹಜ ಮಳೆಗಾಲ ಅಲ್ಲವೇ ಅಲ್ಲ- ಹವಾಮಾನ ವೈಪರೀತ್ಯ ಎಂಬುದನ್ನು ಈಗಾಗಲೇ ತಜ್ಞರು ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಮಳೆ ಹಳ್ಳಿಗಷ್ಟೇ ಅಲ್ಲ ನಗರ-ಪೇಟೆಗಳಿಗೂ ಚೆನ್ನಾಗಿ ಬುದ್ಧಿ ಕಲಿಸುತ್ತಿದೆ. ಕಾರಣ ಮಳೆಗೆ ಭೂಪಟ, ಕ್ಯಾಲೆಂಡರ್‌, ಗಡಿಯಾರದ ಹಂಗಿಲ್ಲ. ಮಳೆ ಇವುಗಳಾಚೆ ಸುರಿಯುತ್ತದೆ. ಅದಕ್ಕೆ ಅದರ ಕೆಳಗಡೆ ಯಾರು ಬದುಕುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಅದಕ್ಕೆ ಶಿವಮೊಗ್ಗದ ಸಂಸ್ಕೃತ ಗ್ರಾಮವೂ ಒಂದೇ, ಸಿಲಿಕಾನ್‌ ಸಿಟಿಯೂ ಒಂದೇ. ಚಿನ್ನದ ಕಿರೀಟ ಹೊತ್ತ ರಾಜನೂ ಮುಟ್ಟಾಳೆ ಇಟ್ಟ ರೈತನೂ ಮಳೆಗೆ ಒಂದೇ. ಎಲ್ಲರೂ ಸಮಾನರು.

ಜನಕೇಂದ್ರಿತ ಮಹಾನಗರಗಳಲ್ಲಿ ಬಹುಪಾಲು ಹಳ್ಳಿಯಷ್ಟೇ ಮಳೆ ಬರುತ್ತದೆ. ಆದರೆ, ಅರ್ಧಗಂಟೆ ಮಳೆ ಬಂದ‌ರೂ ಸಾಕು, ಪೇಟೆಯಲ್ಲಿ ಉಸಿರು ಕಟ್ಟುತ್ತದೆ. ಕಾರಣ ಅಲ್ಲಿ ಮನುಷ್ಯನಿಗಷ್ಟೇ ದಾರಿ. ನೀರಿಗೆ ದಾರಿಯಿಲ್ಲ. ಕಟ್ಟಡ-ಮನೆಗಳಿಗೆ ಮಾತ್ರ ವಾಸ್ತು, ಆಯಪಾಯ. ನೀರಿನ ನಡೆಗೆ ದಿಕ್ಕು-ದೆಸೆಯಿಲ್ಲ. ಕಣಿ-ಚರಂಡಿಯಿಲ್ಲ. ಈ ಕಾರಣಕ್ಕೆ ಮಹಾನಗರಗಳಿಂದು ಅಲ್ಪ ಮಳೆಗೆ ಕೃತಕ ನೆರೆಯಿಂದ ತತ್ತರಿಸುತ್ತದೆ. ನೀರು ಮನೆ, ಅಂಗಡಿ, ಮಾಲ್‌ಗ‌ಳಿಗೆ ನುಗ್ಗುತ್ತವೆ. ಕೊನೆಗೆ, ಅದೇ ಒಂದು ದಾರಿ ಮಾಡಿಕೊಂಡು ನದಿ-ಕಡಲ ಕಡೆಗೆ ನುಗ್ಗುತ್ತದೆ.

ಮನುಷ್ಯನಿಗಿಂತ ಪ್ರಾಚೀನ
ಮನುಷ್ಯ ಈ ಭೂಮಿಯ ಮೇಲೆ ಬದುಕಲು ದಾರಿ ಕಂಡುಕೊಳ್ಳುವ ಮುಂಚೆಯೇ ನದಿ, ಹೊಳೆ, ತೋಡು, ಕಣಿಗಳು ಹುಟ್ಟಿಕೊಂಡಿವೆ. ಮತ್ತು ಅವು ಯಾವಾಗಲೂ ಎತ್ತರದಿಂದ ತಗ್ಗಿಗೆ ಹರಿಯುತ್ತವೆ. ಆ ಭೌಗೋಳಿಕ ಕ್ರಮಕ್ಕೆ ಪ್ರಾಕೃತಿಕ, ಜೈವಿಕ ಸೂತ್ರಗಳಿವೆ. ಮೊನ್ನೆ ಮೊನ್ನೆ ಹುಟ್ಟಿಕೊಂಡ ನಾವು ನಿಸರ್ಗದ ಸಿದ್ಧಸೂತ್ರದ ವಿರುದ್ಧ ಕಣಿ ತೋಡಿದರೆ, ಗೋಡೆ ಕಟ್ಟಿದರೆ ನಿಸರ್ಗ ಮನುಷ್ಯನ ವಿರುದ್ಧ ಖೆಡ್ಡಾವನ್ನೇ ತೋಡುತ್ತದೆ.

ಮೊನ್ನೆ ಮೊನ್ನೆಯವರೆಗೆ ನಾವು ಬೇರೆಯವರು ಸಂಗ್ರಹಿಸಿಟ್ಟ , ಅಣೆಕಟ್ಟಗಳಲ್ಲಿದ್ದ ನೀರನ್ನು ಅಂಗಲಾಚುತ್ತಿದ್ದೆವು. ನೀರಿಗಾಗಿ ಹೈಕೋರ್ಟು, ಸುಪ್ರೀಂಕೋರ್ಟುಗಳ ಮೆಟ್ಟಿಲೇರಿದೆವು. ಒಮ್ಮೆ ನೀರು ಬಿಡಿ, ಕೊಡಿ ಎಂದು ಚಳುವಳಿ, ದ‌ಂಗೆಗಳಾದುವು. ಈಗ ನಮ್ಮ ಪರಿಸ್ಥಿತಿ “ದಯವಿಟ್ಟು ನೀರು ಬಿಡಬೇಡಿ, ಕಟ್ಟಗಳ ಬಾಗಿಲು ತೆರೆಯಬೇಡಿ’ ಎಂದಾಗಿದೆ. ಮುಂದೊಂದು ದಿನ ಇದೇ ಬೇಡಿಕೆಗಳನ್ನಿಟ್ಟು ಕೋರ್ಟಿಗೆ ಹೋಗುವ ಸಾಧ್ಯತೆಗಳೂ ಇವೆ.

ನಮ್ಮ ಅಣೆಕಟ್ಟುಗಳಲ್ಲಿ ವರ್ಷಕ್ಕೆ ಒಂದು ಬಾರಿ ಗರಿಷ್ಠ ನೀರು ಏರಿ, ಸಂಗ್ರಹಗೊಂಡ ನೀರನ್ನು ನಿಯಮಬದ್ಧವಾಗಿ ಹಂಚಿ ಬೇಸಗೆಯನ್ನು ನಿಭಾಯಿಸುವುದಕ್ಕೂ ಸತತ ತಿಂಗಳಾನುಗಟ್ಟಳೆ ಗರಿಷ್ಠ ಮಿತಿಮೀರಿ ನೀರು ತುಂಬಿ ಹರಿಯುವುದಕ್ಕೂ ವ್ಯತ್ಯಾಸವಿದೆ. ಈ ವರ್ಷ ದಕ್ಷಿಣ ಭಾರತದ ಅನೇಕ ಅಣೆಕಟ್ಟುಗಳಲ್ಲಿ ಈ ಎರಡನೆಯ ಸ್ಥಿತಿಯೇ ಇರುವುದು ಆ ಕಟ್ಟದ ಧಾರಣಾಶಕ್ತಿಯ ಮೇಲೆ ಭಾರೀ ಅಪಾಯವೇ ಸರಿ. ಹಾಗಂತ ತುಂಬಿಕೊಂಡದ್ದೆಲ್ಲಾ ಬರೀ ನೀರೇ ಆಗಿದ್ದರೆ ಕಷ್ಟವಿಲ್ಲ, ಅಡಿಯಲ್ಲಿರುವುದು ಹೂಳು-ಮಣ್ಣು.

ಇದು ಸೃಷ್ಟಿಸುವ ಒತ್ತಡ ಕಡಿಮೆಯಲ್ಲ. ಭವಿಷ್ಯ ದಲ್ಲಿ ಇದು ಅಣೆಕಟ್ಟುಗಳ ಸುರಕ್ಷತೆಗೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಮನುಷ್ಯ ಬುದ್ಧಿವಂತ ಎಂಬ ಒಂದೇ ಕಾರಣಕ್ಕೆ ಭೂಮಿಯ ಮೇಲೆಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಲು ಹೊರಟರೆ ಭೂಮಿ, ಪ್ರಕೃತಿ, ನೀರು ಆ ಮನುಷ್ಯ ಗುರುತಿನ ದಾಖಲೆಗಳನ್ನು ಕ್ಷಣದಲ್ಲಿ ಅಳಿಸಿ ಹಾಕಬಹುದೆಂಬುದಕ್ಕೆ ಈ ವರ್ಷದ ಮಳೆ, ಜಲಪ್ರಳಯವೇ ಸಾಕ್ಷಿ .

ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next