Advertisement
ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ, ಭೂಕುಸಿತದಿಂದಾಗಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ. ರಾಜ್ಯದ ಅರ್ಧ ಭಾಗ ಮಳೆಯ ರುದ್ರ ನರ್ತನ, ಪ್ರವಾಹ ವಿಕೋಪಕ್ಕೆ ಸಿಲುಕಿದೆ. ಕಳೆದ 45 ವರ್ಷ ಗಳಲ್ಲಿ ಇಷ್ಟು ಭೀಕರ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಕಂಡಿರಲಿಲ್ಲ. ನೆರೆಯಿಂದಾಗಿ 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಸದ್ಯದ ಮಾಹಿತಿ ಪ್ರಕಾರ ಈ ವರೆಗೆ 24 ಮಂದಿ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ ಗುಡ್ಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮೃತಪಟ್ಟ ಜಾನುವಾರುಗಳಿಗೆ 30,000 ರೂ., ಕರು ಸಹಿತ ಇತರ ಜಾನುವಾರು ಗಳಿಗೆ 15,000 ರೂ. ಪರಿಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ನಿತ್ಯ 5-6 ಬಾರಿ ಸಂಪರ್ಕಿಸುತ್ತಿದ್ದು, ಮಹಾರಾಷ್ಟ್ರ, ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿಲ್ಲ. ಒಂದೆರಡು ದಿನಗಳಲ್ಲಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆ ಯಾಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದು, ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಮಲೆನಾಡು ಭಾಗದ ಜಲಾಶಯಗಳ ಒಳ, ಹೊರ ಹರಿವನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತಿದೆ. ಹೇಮಾವತಿ, ತುಂಗಭದ್ರಾ ನದಿಯಿಂದ ಕಾಲುವೆ ಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Related Articles
Advertisement
ಮೂರ್‍ನಾಲ್ಕು ದಿನಗಳಿಂದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ಪರಿಸ್ಥಿತಿ ಗಂಭೀರವಾಗುತ್ತಿದೆ.
ಮಂಗಳೂರಿಗೆ ರೈಲು, ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವೆಡೆ ಭೂಕುಸಿತದಿಂದ ಸಾವು ನೋವು ಸಂಭವಿಸಿದೆ. ದಿಲ್ಲಿ ಪ್ರವಾಸ ಮೊಟಕುಗೊಳಿಸಿದ ನಾನು ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಎಲ್ಲೆಡೆ ರಕ್ಷಣಾ ಕಾರ್ಯಾಚರಣೆ ಸಿಬಂದಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
100 ಕೋಟಿ ರೂ. ಬಿಡುಗಡೆಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಹಣವಿದ್ದರೂ ರಾಜ್ಯ ಸರಕಾರದಿಂದ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ದೇವರ ದಯೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಳೆ ಕಡಿಮೆಯಾಗುತ್ತಿದ್ದು, 3-4 ದಿನಗಳಲ್ಲಿ ನಿಯಂತ್ರಣಕ್ಕೆ ಸಿಗುವ ನಿರೀಕ್ಷೆ ಇದೆ. ಸುರಕ್ಷತೆ ಮತ್ತು ಪುನರ್ವಸತಿಗೆ ಎಷ್ಟೇ ಹಣ ಖರ್ಚಾಗಲಿ, ಬೇರೆ ಕಾರ್ಯಕ್ರಮ ನಿಲ್ಲಿಸಿಯಾದರೂ ತತ್‌ಕ್ಷಣ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಾಕಷ್ಟು ಸವಾಲು
ನಿರಾಶ್ರಿತರ ರಕ್ಷಣಾ ಕೇಂದ್ರಗಳಲ್ಲಿರುವವರು ತತ್‌ಕ್ಷಣ ವಾಪಸ್ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಅವರಿಗೆ ರಕ್ಷಣಾ ಕೇಂದ್ರಗಳಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಬೇಕಿದ್ದು, ಅದಕ್ಕೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತಗಳು ಮಾಡಲಿವೆ. ಕೆಲವು ಗ್ರಾಮಗಳನ್ನು ಶೇ. 100ರಷ್ಟು ಸ್ಥಳಾಂತರಿಸಬೇಕಿದೆ. ಭೂಮಿ ಖರೀದಿಸಿ ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಈ ರೀತಿ ಅನೇಕ ಸಮಸ್ಯೆಗಳಿವೆ ಎಂದು ಯಡಿಯೂರಪ್ಪ ಹೇಳಿದರು. ಒಂದು ತಿಂಗಳು ಬೇಕು
ನಷ್ಟದ ನಿಖರ ಮಾಹಿತಿ ತಿಳಿಯಲು ಒಂದು ತಿಂಗಳ ಕಾಲಾವಕಾಶ ಬೇಕು. ಆ ಬಳಿಕವಷ್ಟೇ ಶಾಶ್ವತ ಪರಿಹಾರ ಕಾರ್ಯದ ವೆಚ್ಚ ಲೆಕ್ಕ ಹಾಕಲು ಸಾಧ್ಯ. ಹಾನಿಗೊಳಗಾದ ಗ್ರಾಮಗಳನ್ನು ಸ್ಥಳಾಂತರಿಸಿ ಹೊಸ ಗ್ರಾಮ ನಿರ್ಮಿಸಬೇಕಾಗುತ್ತದೆ. ಇದಕ್ಕೆಲ್ಲ ತಗಲುವ ಮೊತ್ತವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಷ್ಟದ ವಿವರ ಗೊತ್ತಾದ ಬಳಿಕ ರಾಜ್ಯ ಹಾಗೂ ಕೇಂದ್ರ ಸರಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು. ಸದ್ಯ ಪರಿಹಾರ ಕಾರ್ಯಕ್ಕೆ 1,000 ಕೋಟಿ ರೂ. ಅಗತ್ಯವಿದೆ. ಉದ್ಯಮಿಗಳು, ಕಾರ್ಪೊರೇಟ್ ಕಂಪೆನಿಗಳು ಉದಾರವಾಗಿ ನೆರವು ನೀಡಬೇಕು. ಒಂದು ರೂಪಾಯಿ ಕೂಡ ದುರುಪಯೋಗವಾಗದಂತೆ ಸದ್ಬಳಕೆ ಮಾಡಿಕೊಂಡು ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು. ರಕ್ಷಣಾ ಕಾರ್ಯದ ವಿವರ
-ಭೂಸೇನೆ, ನೌಕಾಪಡೆ, ವಾಯುಪಡೆ ಸೇವೆ ಬಳಕೆ
-ಎನ್‌ಡಿಆರ್‌ಎಫ್ 20 ತಂಡ
-ಭೂಸೇನೆಯ 11 ತಂಡ
-ನೌಕಾಪಡೆಯ 5 ತಂಡ, ದೋಣಿಗಳು
-ವಾಯುಪಡೆಯ 4 ಹೆಲಿಕಾಪ್ಟರ್
-ಎಸ್‌ಡಿಆರ್‌ಎಫ್ 2 ತಂಡ
-ಅಗ್ನಿಶಾಮಕ, ಪೊಲೀಸ್ ಸಿಬಂದಿ ನಲುಗಿದ ದ.ಕ.
ಮಂಗಳೂರು/ಬಂಟ್ವಾಳ: ಆಶ್ಲೇಷಾ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಹಾನಿ ಮಾಡಿದೆ. ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಮಂಗಳೂರು ತಾಲೂಕಿನ ವ್ಯಾಪಕ ನಾಶ ನಷ್ಟ ಸಂಭವಿಸಿದೆ. ಶುಕ್ರವಾರ ಆರಂಭಗೊಂಡ ಬಿರುಸಿನ ಗಾಳಿ ಮಳೆ ಶನಿವಾರ ಸಂಜೆಯ ವೇಳೆಗೆ ಸ್ವಲ್ಪ ಕಡಿಮೆಯಾಯಿತು. ನೇತ್ರಾವತಿ ನದಿ 1974ರ ಬಳಿಕ ಮೊದಲ ಬಾರಿಗೆ ತೀರಾ ಅಪಾಯಕಾರಿ ಮಟ್ಟ ತಲುಪಿ ಹರಿಯಿತು. ಶನಿವಾರ ಬೆಳಗ್ಗೆ ನೆರೆ ನೀರಿನ ಮಟ್ಟ 11.6 ಮೀಟರ್‌ವರೆಗೆ ತಲುಪಿ ಬಂಟ್ವಾಳ ತಾಲೂಕಿನ ಹೆಚ್ಚಿನ ಭಾಗ ಜಲಾವೃತಗೊಂಡಿತು. 45 ವರ್ಷಗಳ ಬಳಿಕ ಮೊದಲ ಬಾರಿಗೆ ಪೇಟೆಯ ಹಲವಾರು ಅಂಗಡಿ, ಮುಂಗಟ್ಟುಗಳು ಮುಳುಗಡೆಯಾಯಿತು. ಕೆಲವು ಕಡೆಯ ರಸ್ತೆ ಸಂಪರ್ಕಗಳು ಕಡಿದವು. ಬೆಳ್ತಂಗಡಿಯಲ್ಲಿಯೂ ಅಪಾರ ನಷ್ಟ ಸಂಭ ವಿಸಿವೆ. ಶುಕ್ರವಾರ ನೆರೆ ಎಲ್ಲೆಂದರಲ್ಲಿ ನುಗ್ಗಿದ್ದು, ಹಲವಾರು ಎಕರೆ ಕೃಷಿ ನಾಮಾವಶೇಷವಾಗಿವೆ. ಕೆಲವು ರಸ್ತೆಗಳು ಕಡಿದು ಹೋಗಿದೆ. ನಡು ಗಡ್ಡೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ.ಮಂಗಳೂರು ನಗರದ ಜಪ್ಪಿನಮೊಗರು, ಉಳ್ಳಾಲ, ಕಿನ್ನಿಗೋಳಿ, ಗುರುಪುರ ಪರಿಸರ ದಲ್ಲಿಯೂ ಹಾನಿ ಸಂಭವಿಸಿದೆ. ನೂರಾರು ಮನೆಗಳು ಜಲಾವೃತಗೊಂಡಿವೆ. ಚಿತ್ರ: ಕಿಶೋರ್ ಪೆರಾಜೆ