ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳು ಉಕ್ಕಿ ಹರಿದಿವೆ. 194 ಗ್ರಾಮಗಳು ಅಕ್ಷರಶಃ ನೀರಲ್ಲಿ ನಿಂತಿವೆ. ಆದರೂ, ಘಟಪ್ರಭಾ ಎಡದಂಡೆ ಕಾಲುವೆಗೆ ಹನಿ ನೀರು ಬಂದಿಲ್ಲ. ಪ್ರವಾಹದ ನೀರನ್ನು ಕಾಲುವೆ, ಕೆರೆಗೆ ಹರಿಸಲು ಅಧಿಕಾರಿಗಳು ಪ್ರಯತ್ನಿಸಲಿಲ್ಲ ಎಂಬ ಆಕ್ರೋಶದ ಮಾತು ಅಚ್ಚುಕಟ್ಟು ಪ್ರದೇಶದ ರೈತರಿಂದ ಕೇಳಿ ಬರುತ್ತಿದೆ.
ಘಟಪ್ರಭಾ ಎಡದಂಡೆ ಹಾಗೂ ಮಲಪ್ರಭಾ ಬಲದಂಡೆ ಕಾಲುವೆಗಳು ಪ್ರವಾಹದಲ್ಲೂ ಹನಿ ನೀರು ಕಂಡಿಲ್ಲ ಎಂದರೆ ನಂಬಲೇಬೇಕು. ಕಾಲುವೆ ಹಾಗೂ ಜಲಾಶಯಗಳ ಅಧಿಕಾರಿಗಳು ಒಂದಷ್ಟು ಸಮನ್ವಯತೆಯಿಂದ ಕೆಲಸ ಮಾಡಿದ್ದರೆ, ನದಿಗುಂಟ ಪ್ರವಾಹದ ರೂಪದಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಕಾಲುವೆ ಬಿಡಬಹುದಾಗಿತ್ತು. ಆದರೆ ಪ್ರವಾಹ ಬಂದಾಗ ನೀರು ಯಾರು ಕೇಳ್ತಾರೆ ಎಂಬ ಅಸಡ್ಡೆಯಿಂದ ಯಾವ ಅಧಿಕಾರಿಗಳು ಪ್ರಯತ್ನಿಸಲಿಲ್ಲ ಎನ್ನಲಾಗಿದೆ.
16 ವರ್ಷದಿಂದ ನೀರಿಲ್ಲ: ಘಟಪ್ರಭಾ ಎಡದಂಡೆ ಕಾಲುವೆ, ಗೋಕಾಕ ತಾಲೂಕಿನಿಂದ ಆರಂಭಗೊಂಡು, ಮುಧೋಳ, ಬಾದಾಮಿ ಹಾಗೂ ಬಾಗಲಕೋಟೆ ತಾಲೂಕಿನಲ್ಲಿ ಹಾಯ್ದು, ಬಾಗಲಕೋಟೆಯ ಇಂಗಳಗಿ ಬಳಿ ಮಲಪ್ರಭಾ ನದಿ ಕೂಡುತ್ತದೆ. ಮುಧೋಳ ತಾಲೂಕಿನ ಕಾಡರಕೊಪ್ಪವರೆಗೆ ಮಾತ್ರ ಈ ಕಾಲುವೆಗೆ ನೀರು ಹರಿಯುತ್ತಿದ್ದು, ಇನ್ನುಳಿದ 52 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲು ಕಾಲುವೆ ನಿರ್ಮಿಸಿ, 16 ವರ್ಷ ಕಳೆದರೂ ಹನಿ ನೀರು ಬಂದಿಲ್ಲ.
ಬಾದಾಮಿ ತಾಲೂಕಿನ ಹೂಲಗೇರಿ, ಕಗಲಗೊಂಬ, ಕಟಗೇರಿ, ಬಾಗಲಕೋಟೆ ತಾಲೂಕಿನ ಶಿರೂರ, ಬೆನಕಟ್ಟಿ ಹೀಗೆ ಹಲವು ಗ್ರಾಮಗಳ ರೈತರು ಕಾಲುವೆ ನೀರು ಬರುತ್ತದೆ ಎಂದು ಕಾಯುತ್ತಲೇ ಇದ್ದಾರೆ. ಕನಿಷ್ಠ ಪ್ರವಾಹ ಬಂದಾಗಲಾದರೂ ಕಾಲುವೆಗೆ ನೀರು ಹರಿದರೆ, ಅಕ್ಕ-ಪಕ್ಕದ ಭೂಮಿಯಲ್ಲಿ ಅಂತರ್ಜಲ ಹೆಚ್ಚಳಗೊಂಡು, ಕೊಳವೆ ಬಾವಿಗೆ ನೀರು ಬರುತ್ತದೆ ಎಂಬ ನಂಬಿಕೆ ರೈತರದ್ದು. ಆದರೆ, ಎಂತಹ ಭೀಕರ ಪ್ರವಾಹ ಬಂದರೂ ಕಾಲುವೆ ನೀರು ಕಂಡಿಲ್ಲ ಎಂದರೆ ನಂಬಲೇಬೇಕು.
ಕಾಲುವೆ ನೋಡ್ತಿದ್ದಾರೆ ಭೂಮಿ ಕೊಟ್ಟ ರೈತರು: ಹದಿನಾರು ವರ್ಷಗಳ ಹಿಂದೆ ಕರ್ನಾಟಕ ನೀರಾವರಿ ನಿಗಮದಿಂದ ಕಾಲುವೆ ನಿರ್ಮಾಣ ಮಾಡುವ ವೇಳೆ ರೈತರೆಲ್ಲ ಸಂಭ್ರಮದಿಂದಲೇ ಭೂಮಿ ಕೊಟ್ಟಿದ್ದರು. ನಮ್ಮ ಹೊಲಕ್ಕೂ ನೀರು ಬಂದರೆ, ಬರಡು ಭೂಮಿಯಲ್ಲಿ ಸಮೃದ್ಧ ಬೆಳೆ ಬೆಳೆಯಬಹುದೆಂದ ಆಸೆ ಇಟ್ಟುಕೊಂಡಿದ್ದರು. 2007, 2009 ಹಾಗೂ ಈಗ 2019 ಸೇರಿ ಒಟ್ಟು ಮೂರು ಬಾರಿ ಜಿಲ್ಲೆಯಲ್ಲಿ ಪ್ರವಾಹ ಬಂದಿದೆ. ಈ ಬಾರಿಯಂತೂ ಘಟ್ರಪಭಾ ನದಿಗೆ 2.27 ಲಕ್ಷ ಕ್ಯೂಸೆಕ್ ನೀರು ಬಂದರೆ, ಮಲಪ್ರಭಾ ನದಿಗೆ 1.16 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಇಷ್ಟೊಂದು ಭಾರಿ ಪ್ರಮಾಣದ ಪ್ರವಾಹ ಬಂದಾಗಲಾದರೂ, ನಮ್ಮೂರ ಕೆನಾಲ್ಗೆ ನೀರು ಬಂತಾ ಎಂದು ರೈತರು ನಿತ್ಯವೂ ಕಾಲುವೆ ಇಣುಕು ನೋಡಿದ್ದೇ ಬಂತು. ಆದರೆ, ನೀರು ಮಾತ್ರ ಬರಲೇ ಇಲ್ಲ.
ನದಿ ಸಾಮರ್ಥ್ಯಕ್ಕಿಂತ ಹೆಚ್ಚು ನೀರು: ಘಟಪ್ರಭಾಕ್ಕೆ ಹಿಡಕಲ್ ಡ್ಯಾಂನಿಂದ ನೀರು ಬಂದರೆ, ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದ ಬಂದಿತ್ತು. ಮಲಪ್ರಭಾ 25 ಸಾವಿರ ಹಾಗೂ ಘಟಪ್ರಭಾ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯ ಹೊಂದಿವೆ ಎಂದು ನೀರಾವರಿ ತಜ್ಞರು ಹೇಳುತ್ತಾರೆ. ಇದಕ್ಕೂ ಹೆಚ್ಚಿನ ಪ್ರಮಾಣದ ನೀರು ಬಂದರೆ, ಅದು ಅಕ್ಕ-ಪಕ್ಕದ ಭೂಮಿ, ಗ್ರಾಮಗಳಿಗೆ ನುಗ್ಗುವುದು ಸಾಮಾನ್ಯ. ಹೀಗಾಗಿ ಡ್ಯಾಂಗಳಿಂದ ನದಿಗುಂಟ ಬಿಡುವ ನೀರಿನೊಂದಿಗೆ ಎಡದಂಡೆ ಮತ್ತು ಬಲದಂಡೆ ಕಾಲುವೆಗೂ ನೀರು ಹರಿಸಿದ್ದರೆ, ನದಿ ಪಾತ್ರದಿಂದ ದೂರ ಇರುವ ಕಾಲುವೆಗಳ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುತ್ತಿತ್ತು ಎಂಬುದು ರೈತರ ಅಭಿಪ್ರಾಯ.
•ಶ್ರೀಶೈಲ ಕೆ. ಬಿರಾದಾರ