Advertisement

ಪ್ರವಾಹ: ಸಣ್ಣ-ಗುಡಿ ಕೈಗಾರಿಕೆಗಳಿಗೂ ಭಾರಿ ಹಾನಿ

10:21 AM Aug 17, 2019 | Suhan S |

ಬನಹಟ್ಟಿ: ಪ್ರವಾಹದಿಂದ ಎಲ್ಲ ರೀತಿಯ ಗುಡಿ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಅವರಿಗೂ ಸಹ ಸರಕಾರ ಸಹಾಯ ಮಾಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತಹ ಎಲ್ಲ ಪ್ರಕಾರಗಳನ್ನು ಸರ್ವೇ ಮಾಡಿಸಿ ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

Advertisement

ಅವರು ಶುಕ್ರವಾರ ರಬಕವಿ, ರಾಮಪುರದಲ್ಲಿನ ವಿವಿಧ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಘಟಕಗಳಿಗೆ ಭೆಟ್ಟಿ ನೀಡಿ ಅವರ ಕಷ್ಟ ಸುಖ ವಿಚಾರಿಸಿ ಮಾತನಾಡಿದರು. ಸಣ್ಣ ಮತ್ತು ಗುಡಿ ಕೈಗಾರಿಕೆಯಲ್ಲಿ ಸಾಲ ಪಡೆದು ಜೀವನ ನಡೆಸುತ್ತಿದ್ದ ಜನ ಕಂಗಾಲಾಗಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿ ಅವರ ಕಷ್ಟಗಳಿಗೆ ಸಹಾಯವಾಗಬೇಕು. ಆ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ನೀಡಲು ಜಿಲ್ಲಾ ಕೈಗಾರಿಕಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.

ರಬಕವಿ, ರಾಮಪುರದಲ್ಲಿ ನೇಕಾರರ ಮನೆಗಳು ಕೂಡಾ ಹಾಳಾಗಿದ್ದು, 2005, 2009 ಮತ್ತು ಈಗ ಮತ್ತೆ 2019ರಲ್ಲಿ ಪ್ರವಾಹ ಬಂದಿದೆ. ರಬಕವಿಯ ಪರಿಶಿಷ್ಟ ಜನರು ವಾಸಿಸುವಂತಹ ಪ್ರದೇಶಗಳ ಕೆಲವೊಂದು ಮನೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಅವರು ಸ್ಥಳಾಂತರಗೊಳ್ಳಬೇಕು. ರಬಕವಿಯ ಮುಳುಗಡೆ ಪ್ರದೇಶದ ನೇಕಾರರಿಗೆ ವಿಶೇಷ ಆದ್ಯತೆ ನೀಡಬೇಕು. ನೇಕಾರ ಕಾಲೋನಿ ಮಾಡಿ ಮನೆಗಳನ್ನು ಮಾಡಲು ಅವಕಾಶವಿದ್ದು, ಅವುಗಳನ್ನು ಸರಕಾರ ಆದಷ್ಟು ಬೇಗನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಬಸವರಾಜ ಯಂಡಿಗೇರಿ, ಈಶ್ವರ ಚಮಕೇರಿ, ಅಬೂಬಕರ ಬಂಡೆಬುರುಜ, ಮೈಬೂಬ ಅರಬ, ಅಸ್ಲಂ ಶಿಲ್ಲೇದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next