Advertisement

ಕೆರೆಗೆ ಹರಿಯಲಿ ಪ್ರವಾಹ

09:41 AM Aug 06, 2019 | Suhan S |

ಹುಬ್ಬಳ್ಳಿ: ಮಳೆಗಾಗಿ ಮುಗಿಲು ನೋಡುವ ಪ್ರದೇಶದಲ್ಲೀಗ ಪ್ರವಾಹ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತೂಂದು ಕಡೆ ಅಪಾರ ಪ್ರಮಾಣದ ನೀರು ಯಾವುದೇ ಬಳಕೆ ಇಲ್ಲದೆ ನೆರೆ ರಾಜ್ಯ ಇಲ್ಲವೆ ಸಮುದ್ರ ಪಾಲಾಗುತ್ತಿರುವುದು ಕಂಡು, ಅಸಂಖ್ಯಾತ ಮನಸ್ಸುಗಳು ನೊಂದುಕೊಳ್ಳುತ್ತಿವೆ. ಕೆರೆ ತುಂಬಿಸುವ ಯೋಜನೆ ಕೈಗೂಡಿದ್ದರೆ ಪ್ರವಾಹ ನೀರು ಸಾರ್ಥಕತೆ ಕಾಣುತ್ತಿತ್ತಲ್ಲ ಎಂಬ ನೋವು ಅನೇಕರದ್ದಾಗಿದೆ.

Advertisement

ಮಹಾರಾಷ್ಟ್ರದಲ್ಲಿ ಬಿದ್ದ ಮಳೆಯಿಂದಾಗಿ ಕೃಷ್ಣಾ ನದಿ ಭೋರ್ಗರೆಯುತ್ತಿದೆ. ಒಳ ಹರಿವು ಹೆಚ್ಚಳದಿಂದ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ 2.50ದಿಂದ 3ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಅನೇಕ ಗ್ರಾಮಗಳು ಜಲಾವೃತಗೊಂಡಿವೆ, ರಸ್ತೆ ಸಂಪರ್ಕ ಕಡಿತಗೊಂಡಿದೆ, ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಗೀಡಾಗುತ್ತಿದೆ. ವಿಚಿತ್ರವೆಂದರೆ ಯಾವ ಜಿಲ್ಲೆಗಳು ಇದೀಗ ಪ್ರವಾಹ ಸಮಸ್ಯೆ ಎದುರಿಸುತ್ತಿವೆಯೋ ಆ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಇಲ್ಲವಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಇನ್ನು ಕುಗ್ಗಿಲ್ಲವಾಗಿದ್ದು, ಅಲ್ಲಿಂದ ಹರಿದು ಬರುವ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದಾಗಿದೆ. ಒಳ ಹರಿವಿಗೆ ತಕ್ಕಂತೆ ಕನಿಷ್ಠ 10 ರಿಂದ 20 ಸಾವಿರ ಕ್ಯುಸೆಕ್‌ ಹೆಚ್ಚುವರಿ ನೀರು ಸೇರಿಸಿ ನಮ್ಮ ಜಲಾಶಯಗಳಿಂದ ನದಿಗೆ ಬಿಡಲಾಗುತ್ತದೆ. ಅಲ್ಲಿಗೆ ಹೊರ ಹರಿವು ಇನ್ನಷ್ಟು ಹೆಚ್ಚಾಗಲಿದ್ದು, ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ಮಹಾರಾಷ್ಟ್ರದಿಂದ 3ಲಕ್ಷ ಕ್ಯುಸೆಕ್‌ ನೀರು?: ಮಹಾರಾಷ್ಟ್ರದ ಸಾಂಗ್ಲಿ, ಸತಾರ, ಕೊಲ್ಲಾಪುರ ಇನ್ನಿತರ ಕಡೆಗಳಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿದೆ. ಸೋಮವಾರ ಸಂಜೆ ವೇಳೆಗೆ ಮಹಾರಾಷ್ಟ್ರದ ಸಾಂಗ್ಲಿ ಸೇತುವೆ ಬಳಿ ಪ್ರತಿ ಎರಡು ತಾಸಿಗೊಮ್ಮೆ ಒಂದು ಅಡಿಯಷ್ಟು ನೀರು ಹೆಚ್ಚಾಗುತ್ತಿದೆ. ಗಡಿಗ್ರಾಮ ಜುಗಳ ಬಳಿ ಸುಮಾರು 5 ಅಡಿಯಷ್ಟು ನೀರು ಸಂಗ್ರಹ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಕೊಯ್ನಾ, ವಾರಣಾ ಇನ್ನಿತರ ಜಲಾಶಯಗಳಿಂದ ಒಟ್ಟಾರೆಯಾಗಿ ಕರ್ನಾಟಕಕ್ಕೆ ಹರಿ ಬಿಡುವ ನೀರಿನ ಪ್ರಮಾಣ 2.5ಲಕ್ಷದಿಂದ 3 ಲಕ್ಷ ಕ್ಯುಸೆಕ್‌ಗೆ ಹೆಚ್ಚಲಿದ್ದು, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ಹೊರ ಹರಿವು ಇನ್ನಷ್ಟು ಹೆಚ್ಚಳವಾಗಲಿದೆ.

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ 2.50ದಿಂದ 3ಲಕ್ಷ ಕ್ಯುಸೆಕ್‌ ಆಸುಪಾಸು ನೀರು ಹೊರ ಹಾಕಲಾಗುತ್ತಿದ್ದು, ಒಳ ಹರಿವು ಹೆಚ್ಚಾದರೆ ನಮ್ಮ ಜಲಾಶಯಗಳಿಂದ 3.35ಲಕ್ಷ ಕ್ಯುಸೆಕ್‌ ನೀರು ಹೊರ ಬಿಟ್ಟಿದ್ದೆಯಾದರೆ 2005-06ರ ಸ್ಥಿತಿ ನಿರ್ಮಾಣವಾಗಲಿದೆ.

Advertisement

ಕೆರೆ ನೀರು ಸಮುದ್ರ ಪಾಲು?: ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಹರಿದು ಬರುವ ನೀರಿನಲ್ಲಿ ಒಂದಿಷ್ಟು ನೀರನ್ನಾದರೂ ಕೆರೆಗಳಿಗೆ ತುಂಬಿಸಿದ್ದರೆ ಅದೆಷ್ಟೋ ರೈತರಿಗೆ ಆಸರೆಯಾಗುತ್ತಿತ್ತು. ಕಳೆದೊಂದು ದಶಕದಿಂದ ಕೆರೆಗೆ ನೀರು ತುಂಬಿಸುವ ಮಾತುಗಳು ಅಬ್ಬರಿಸುತ್ತಿವೆಯಾದರೂ, ಇಂದಿಗೂ ಅಂದಾಜಿಸಿದ ಕೆರೆಗಳಲ್ಲಿ ಶೇ.10-20ರಷ್ಟು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.

ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 110 ಕೆರೆಗಳನ್ನು ತುಂಬಿಸಲು ಗುರುತಿಸಲಾಗಿತ್ತು. ಇದರಲ್ಲಿ 20-30 ಕೆರೆಗಳಿಗೆ ನೇರವಾಗಿ ನೀರು ತುಂಬಿಸುವ ವ್ಯವಸ್ಥೆ ಹೊಂದಲಾಗಿದೆ. ಇನ್ನು 70-80 ಕೆರೆಗಳು ನೀರಿಗಾಗಿ ಕಾಯುತ್ತಿವೆ. ಕಾಲುವೆ ಮೂಲಕ ಕೆರೆ ತುಂಬಿಸುವ ಯೋಜನೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಕೆಲಸ ಮಾಡುವುದಿದೆ. ಅದು ಮಾಡಲು ಸಾಧ್ಯವಾಗದೆ ಕೆರೆ ತುಂಬಿಸಲು ಆಗುತ್ತಿಲ್ಲ.

ಬಾಗಲಕೋಟೆ ಜಿಲ್ಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇನ್ನು ಕೃಷ್ಣಾ ನದಿ ಪಾತ್ರದ ಯಾದಗಿರಿ, ರಾಯಚೂರು ಜಿಲ್ಲೆಗಳ ಸ್ಥಿತಿ ಕೇಳುವಂತಿಲ್ಲ. ಅಲ್ಲಿ ಕೆರೆ ಸಂಸ್ಕೃತಿಯೇ ಅತ್ಯಂತ ಕಡಿಮೆ. ಇದ್ದ ಅಷ್ಟು ಇಷ್ಟು ಕೆರೆಗಳು ಗುರುತು ಸಿಗದ ಸ್ಥಿತಿಗೆ ತಲುಪಿವೆ. ಅದೆಷ್ಟೋ ಏತನೀರಾವರಿ ಯೋಜನೆಗಳು ಕಡತದಲ್ಲೇ ಕೊಳೆಯುತ್ತಿವೆ, ಇಲ್ಲವೆ ಅಷ್ಟು ಇಷ್ಟು ಕಾಮಗಾರಿಯೊಂದಿಗೆ ತ್ರಿಶಂಕು ಸ್ಥಿತಿಯಲ್ಲಿವೆ.

ಕಣ್ಣೆದುರೇ ಅನಾಹುತ ಸೃಷ್ಟಿಸಿ ಸಾಗುತ್ತಿರುವ ನೀರು ಜನರಲ್ಲಿ ಕಣ್ಣೀರು ತರಿಸುತ್ತಿದ್ದರೆ, ಮತ್ತೂಂದು ಕಡೆ ಈ ಹಿಂದೆ ಕುಡಿಯುವ ನೀರಿಗಾಗಿ ಕೇವಲ 4 ಟಿಎಂಸಿ ಅಡಿಯಷ್ಟು ನೀರಿಗಾಗಿ ಮಹಾರಾಷ್ಟ್ರಕ್ಕೆ ಭಿಕ್ಷೆ ಬೇಡಿದರೂ ಹನಿ ನೀರು ಸಿಗಲಿಲ್ಲ. ಇದೀಗ ಅದೇ ಮಹಾರಾಷ್ಟ್ರದಿಂದ ಬರುತ್ತಿರುವ ಅಪಾರ ಪ್ರಮಾಣದ ನೀರು ಬಳಕೆ ಇಲ್ಲದೆಯೇ ಪೋಲಾಗುತ್ತಿದೆಯಲ್ಲ ಎಂಬ ನೋವು ನದಿ ಪಾತ್ರದ ಜನರನ್ನು ಆವರಿಸಿದೆ. ಇನ್ನಾದರೂ ಸರಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಾಕಿ ಇರುವ ಕಾಮಗಾರಿ ಕೈಗೊಂಡರೆ ಮುಂದಿನ ದಿನಗಳಲ್ಲಿ ಪೋಲಾಗುವ ನೀರಿನಲ್ಲಿ ಒಂದಿಷ್ಟ ಪ್ರಮಾಣವನ್ನಾದರೂ ಸದ್ಬಳಕೆಗೆ ಮಾಡಿಕೊಳ್ಳಬಹುದಾಗಿದೆ ಎಂಬುದು ಜನರ ಅನಿಸಿಕೆ.

 

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next