Advertisement

ಅವೈಜ್ಞಾನಿಕ ಕಾಮಗಾರಿಯಿಂದ ಪ್ರವಾಹ ಸ್ಥಿತಿ

06:02 PM May 22, 2022 | Shwetha M |

ಶಿವಮೊಗ್ಗ: ಸ್ಮಾರ್ಟ್‌ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳೇ ನಗರದ ಪ್ರವಾಹ ಪರಿಸ್ಥಿತಿಗೆ ಕಾರಣ. ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದ್ದು, ನೂರಾರು ಕೋಟಿ ಲೂಟಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮಳೆ ಸುರಿದಿದ್ದು, ಇಡೀ ನಗರದಲ್ಲಿ ಪ್ರವಾಹ ಉಂಟಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗದೇ ರಸ್ತೆ ಮೇಲೆ ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಗಳೆಲ್ಲವೂ ಅವೈಜ್ಞಾನಿಕವಾಗಿದ್ದು, ಭ್ರಷ್ಟತೆಯನ್ನು ಎತ್ತಿ ತೋರಿಸುತ್ತಿದೆ. ಪಾಲಿಕೆ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಶಾಸಕರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಕಳೆದ ಎರಡು ದಿನಗಳ ಮಳೆಯಿಂದ ಅನೇಕ ಮನೆಗಳು ಕುಸಿದು ಬಿದ್ದಿವೆ. ಬಡವರ ಮನೆಯ ಆಹಾರ ಸಾಮಗ್ರಿಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿ ಉಪವಾಸ ಬೀಳುವಂತಾಗಿದೆ. ಸ್ಮಾರ್ಟ್‌ ಸಿಟಿಯ ಕಿಕ್‌ ಬ್ಯಾಕ್‌ ಎದ್ದು ಕಾಣುತ್ತಿದೆ. ಬಿಜೆಪಿಯವರು ಮಸೀದಿ, ಮಂದಿರದ ವಿಷಯಗಳ ಕಡೆ ತಿರುಗಿ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ಮಾರ್ಟ್‌ ಸಿಟಿಯಲ್ಲಿದ್ದ ಅಧಿಕಾರಿಗಳು ಕೋಟ್ಯಂತರ ರೂ. ಹಣ ಸಂಗ್ರಹಣೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ತನಿಖೆ ನಡೆಸಲು ಸಿದ್ಧವಿದೆ. ಆದರೆ, ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ವಿಫಲವಾಗುತ್ತಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ಬಿಜೆಪಿ ಸಂರಕ್ಷಿಸುತ್ತಿದೆ. ಜಿಲ್ಲಾ ಮಂತ್ರಿಯವರಂತೂ ಪತ್ತೆಯೇ ಇಲ್ಲ. ಸಂಸದರು ಬಂದರೂ ಸಚಿವರು ಬಾರಲಿಲ್ಲ ಎಂದರು.

ಇನ್ನಾದರೂ ಆಡಳಿತ ಯಂತ್ರ ಚುರುಕು ಗೊಳ್ಳಬೇಕು. ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು. ಬಡವರಿಗೆ ಆಹಾರದ ಕಿಟ್‌ ನೀಡಬೇಕು. ಅವೈಜ್ಞಾನಿಕವಾಗಿ ವಿಧಿಸಿರುವ ಆಸ್ತಿ ತೆರಿಗೆ, ನೀರಿನ ಕಂದಾಯ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತದೆ ಎಂದು ಎಚ್ಚರಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ಪ್ರಮುಖರಾದ ಚಂದ್ರಭೂಪಾಲ್‌, ರಾಮೇಗೌಡ, ರೇಖಾ ರಂಗನಾಥ್‌, ಯಮುನಾ ರಂಗೇಗೌಡ, ವೈ.ಎಚ್‌. ನಾಗರಾಜ್‌, ಡಾ| ಶ್ರೀನಿವಾಸ ಕರಿಯಣ್ಣ, ವಿನಾಯಕ ಮೂರ್ತಿ, ಚಂದನ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next