Advertisement

ಮಲಪ್ರಭೆ ಒಡಲಲ್ಲಿ ಪ್ರವಾಹ ಭೀತಿ

11:29 AM Aug 07, 2019 | Suhan S |

ನರಗುಂದ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಸವದತ್ತಿ ತಾಲೂಕು ಮುನವಳ್ಳಿ ನವಿಲುತೀರ್ಥ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ಅತ್ಯಧಿಕ 22 ಸಾವಿರ ಕ್ಯೂಸೆಕ್‌ ನೀರು ಹರಿ ಬಿಟ್ಟಿದ್ದರಿಂದ ಪ್ರವಾಹ ಮುನ್ಸೂಚನೆಯಾಗಿ ತಾಲೂಕಿನ ಗಡಿಗ್ರಾಮ ಲಖಮಾಪುರ ಗ್ರಾಮಸ್ಥರನ್ನು ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗಿದೆ. ಲಖಮಾಪುರ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಗ್ರಾಮದಲ್ಲಿ ಠಿಕಾಣಿ ಹೂಡಿದೆ. ಜಿಲ್ಲಾ ಉಪವಿಭಾಗಾಧಿಕಾರಿ ಪಿ.ಎಸ್‌. ಮಂಜುನಾಥ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ವಾಸನ ಗ್ರಾಮದಲ್ಲಿ ಸಭೆ ನಡೆಸಿದ ಬಳಿಕ ಮೊದಲಿಗೆ ಲಖಮಾಪುರ ಗ್ರಾಮಸ್ಥರನ್ನು ಕೊಣ್ಣೂರ ಕೆಇಎಸ್‌ ಕಾಲೇಜು ಆವರಣಕ್ಕೆ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಎಸ್ಪಿ ಶ್ರೀನಿವಾಸ ಜೋಶಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಾಪಂ ಇಒ ನಾರಾಯಣರಡ್ಡಿ ಕನಕರಡ್ಡಿ ಕೊಣ್ಣೂರಲ್ಲಿ ಬೀಡು ಬಿಟ್ಟಿದ್ದಾರೆ.

ಶಾಲೆಗಳಿಗೆ ರಜೆ ಸಾಧ್ಯತೆ: ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಲಿರುವ ತಾಲೂಕಿನ 4 ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸು ವಂತೆ ಉಪವಿಭಾಗಾಧಿಕಾರಿ ಪಿ.ಎಸ್‌. ಮಂಜುನಾಥ ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆಗಳಿವೆ.•ಎನ್‌.ಜೆ. ಗುರುಪ್ರಸಾದ, ಬಿಇಒ ನರಗುಂದ
Advertisement

ಗಂಜಿ ಕೇಂದ್ರಕ್ಕೆ ಸೂಚನೆ: ಈ ಹಿಂದೆ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಗ್ರಾಮಸ್ಥರ ಸುರಕ್ಷತೆ, ಸ್ಥಳಾಂತರ ಹಾಗೂ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಪೂರಕವಾಗಿ ಜನರಿಗೆ ತಾತ್ಕಾಲಿಕ ವಸತಿ ಹಾಗೂ ಗಂಜಿ ಕೇಂದ್ರ ಆರಂಭಿಸಲು ತಹಶೀಲ್ದಾರ್‌ಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ನೆರೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ.•ಶಿವಾನಂದ ಕರಾಳೆ, ಅಪರ ಜಿಲ್ಲಾಧಿಕಾರಿ

ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟರೆ ಕ್ರಮ: ತಾಲೂಕಿನ ವ್ಯಾಪ್ತಿಯಲ್ಲಿ ಮಲಪ್ರಭಾ ನದಿ ನೆರೆಹಾವಳಿ ಸಂಭವಿಸುವ ಗ್ರಾಮಗಳಿಗೆ ನೇಮಿಸಿರುವ ಪ್ರತಿಯೊಬ್ಬ ಅಧಿಕಾರಿಯೂ ಕೇಂದ್ರ ಕಚೇರಿ ಬಿಟ್ಟು ಹೋಗಬಾರದು. ಒಂದು ವೇಳೆ ಹೋದಲ್ಲಿ 2005 ವಿಧಿಯ ಕಾನೂನಿನ ಅನ್ವಯ ಯಾವುದೇ ನೋಟಿಸ್‌ ನೀಡದೆ ಪೊಲೀಸ್‌ ಅಧಿಕಾರಿಗಳ ಮೂಲಕ ಬಂಧಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ನೆರೆಹಾವಳಿ ಪ್ರದೇಶದಲ್ಲಿ ನಡೆಯುವ ಕ್ಷಣಕ್ಷಣದ ಮಾಹಿತಿಯನ್ನು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಗದಗ ನಗರಾಭಿವೃದ್ಧಿ ಆಯುಕ್ತ ಪಿ.ಟಿ. ರುದ್ರೇಶ ಹೇಳಿದರು.

ಮಂಗಳವಾರ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನೆರೆಹಾವಳಿಗೆ ಒಳಪಡುವ ಗ್ರಾಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿ ಅವರು ಮಾತನಾಡಿದರು. ನವಿಲುತೀರ್ಥ ಡ್ಯಾಂಗೆ ಒಳಹರಿವು ಹೆಚ್ಚಾಗಿದ್ದು, ಸಂಪೂರ್ಣ ಭರ್ತಿಯಾಗುವ ಲಕ್ಷಣವಿದೆ. ಮಂಗಳವಾರ ಸಂಜೆ ಸುಮಾರು 40 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡುತ್ತಿದ್ದು, ಯಾವುದೇ ಸಮಯದಲ್ಲಿ ಮಲಪ್ರಭಾ ನದಿ ದಂಡೆ ಮೇಲೆ ಇರುವ ಗ್ರಾಮಗಳಿಗೆ ನೀರು ನುಗ್ಗಬಹುದು. ಆದ್ದರಿಂದ ಮಲಪ್ರಭಾ ನದಿ ದಂಡೆ ಮೇಲೆ ಇರುವ ಗ್ರಾಮಗಳ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತವಾಗಬೇಕು. ಇದಕ್ಕೆ ತಾಲೂಕು ಆಡಳಿತ ಸುವ್ಯವಸ್ಥೆ ಕಲ್ಪಿಸುತ್ತದೆ ಎಂದರು.

Advertisement

ರೋಣ ತಹಶೀಲ್ದಾರ್‌ ಶರಣಮ್ಮ ಕಾರಿ ಮಾತನಾಡಿ, ಮಲಪ್ರಭಾ ಉಗಮ ಸ್ಥಳವಾದ ಖಾನಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ಸವದತ್ತಿ ಬಳಿ ಇರುವ ನವಿಲುತೀರ್ಥ ಜಲಾಶಯಕ್ಕೆ 24 ತಾಸಿನಲ್ಲಿ 40 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬಂದಿದೆ. ಆದ್ದರಿಂದ ಡ್ಯಾಂನಿಂದ ಯಾವುದೇ ಸಮಯದಲ್ಲಾದರೂ ನೀರನ್ನು ಹೊರ ಬಿಡಬಹುದು. ಆದ್ದರಿಂದ ನದಿಯ ಪಕ್ಕದಲ್ಲಿ ವಾಸಿಸುವ ಗ್ರಾಮಗಳ ಜನರು ಸರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸನ್ನದ್ಧವಾಗಿದೆ. ಆ ದಿಶೆಯಲ್ಲಿ ಮುಂಜಾಗೃತ ಕ್ರಮವಾಗಿ ಹಡಗು ಸೇರಿದಂತೆ ರಕ್ಷಣೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ತಾಲೂಕು ಆಡಳಿತ ತಯಾರು ಮಾಡಿಕೊಂಡಿದೆ ಎಂದರು.

ತೋಟಗಾರಿಕೆ ಹಿರಿಯ ನಿರ್ದೇಶಕ ಎಂ.ಎಂ. ತಾಬೋಂಟಿ, ಹೆಸ್ಕಾಂ ಎಇಇ ನಿಖೀಲ ದುಗ್ಗಾಣಿ, ಕುಡಿಯುವ ನೀರು ಮತ್ತು ನೈಮಲ್ಯರ್ ಅಧಿಕಾರಿ ಮಹಾದೇವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಂಜುಂಡಯ್ಯ, ಸಿಡಿಪಿಒ ನಾಗನಗೌಡ ಪಾಟೀಲ, ಸಿಪಿಐ ಮಂಜುನಾಥ ನಡುವಿನಮನಿ ಸೇರಿದಂತೆ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next