Advertisement
ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಕಳೆದ ತಿಂಗಳು ರುದ್ರನರ್ತನ ಮಾಡಿದ್ದು, ಈ ರೌದ್ರಾವತಾರಕ್ಕೆ ಜಿಲ್ಲೆಯ ಬರೋಬ್ಬರಿ 195 ಹಳ್ಳಿಗಳು ಅಕ್ಷರಶಃ ನಲುಗಿವೆ. ಇದರಿಂದ 43,136 ಕುಟುಂಬಗಳ 1,49,408 ಜನರು ಬೀದಿಗೆ ಬಿದ್ದಿದ್ದವು. ಇದೀಗ ಅವರೆಲ್ಲ ನೀರು ಹೊಕ್ಕು ಹೋದ ಮನೆಗಳತ್ತ ನಿರಾಳವಾಗಿ ಹೆಜ್ಜೆ ಇಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.
Related Articles
Advertisement
ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಹಿನ್ನೀರು ಹಾಗೂ ಮೂರೂ ನದಿಗಳ ದಡದಲ್ಲಿ ಆಗಾಗ ಒತ್ತಿ ಬರುವ ನೀರಿನಿಂದ ಬಹುತೇಕ ಮುಳುಗಡೆ ಜಿಲ್ಲೆಯಾಗಿರುವ ಬಾಗಲಕೋಟೆಗೆ ಪ್ರವಾಹ ಹೊಸದೇನಲ್ಲ. 2007 ಮತ್ತು 2009ರಲ್ಲಿ ಬಂದ ಪ್ರವಾಹಗಳನ್ನೇ ಭೀಕರ ಜಲಪ್ರಳಯ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲ ದಾಖಲೆಗಳನ್ನು ಮುರಿದು, 105 ವರ್ಷಗಳ ಹಿಂದೆ ಬಂದಿದ್ದ ಪ್ರವಾಹದ ದಾಖಲೆಯನ್ನೂ ಜಿಲ್ಲೆಯ ಮೂರೂ ನದಿಗಳು ಮುರಿದಿವೆ.
ಆಗಲೂ ಆಗಸ್ಟ್ ತಿಂಗಳಲ್ಲೇ ಬಂದಿತ್ತು: 1914ರ ಆಗಸ್ಟ್ 8ರಂದು ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹ ಬಂದಿತ್ತು. ಅಂದು ಬಂದಿದ್ದ ಪ್ರವಾಹ ಬಹುದೊಡ್ಡ ಹಾಗೂ ಭೀಕರವಾಗಿತ್ತು ಎಂದು ಆಗಿನ ಹಿರಿಯರಿಂದ ಕೇಳಿದ್ದ ಈಗಿನ ಹಿರಿಯರು ಹೇಳುತ್ತಾರೆ. ಆಗಲೂ ಆಗಸ್ಟ್ ತಿಂಗಳಲ್ಲೇ ಪ್ರವಾಹ ಬಂದಿತ್ತು. ಈ ಬಾರಿಯೂ ಆಗಸ್ಟ್ 1ರಿಂದ ಆರಂಭಗೊಂಡ ಕೃಷ್ಣೆಯ ವೇಗದ ಹರಿದು, ಆಗಸ್ಟ್ 8ರಂದು (105 ವರ್ಷಗಳ ಹಿಂದೆಯೂ ಆಗಸ್ಟ್ 8ರಂದು ಬಂದಿತ್ತು) 5.79 ಲಕ್ಷ ಕ್ಯೂಸೆಕ್‌ಗೆ ದಾಟಿತ್ತು. ಕೃಷ್ಣಾ ನದಿಯಲ್ಲಿ ಈ ನೀರು ಹರಿದು ನದಿಯ ಇತಿಹಾಸದಲ್ಲೇ ದೊಡ್ಡ ದಾಖಲೆಯಾಗಿತ್ತು.
•ಶ್ರೀಶೈಲ ಕೆ. ಬಿರಾದಾರ