Advertisement
ಮೂರು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದ್ದು, ವಿಶ್ವವಿಖ್ಯಾತ ಹಂಪಿ ಹಾಗೂ ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡಿ ಜಲಾವೃತವಾಗಿದೆ. ವಾರಾಂತ್ಯ ಕಳೆಯಲು ಆಗಮಿಸಿದ್ದ ಸುಮಾರು ಇನ್ನೂರರಷ್ಟು ಪ್ರವಾಸಿಗರು ಗಡ್ಡಿಯಲ್ಲಿ ಸಿಲುಕಿದ್ದು, ಈ ಪೈಕಿ ಹರಿಗೋಲು ನೆರವಿನಿಂದ 26 ಜನರನ್ನು ರಕ್ಷಿಸಲಾಗಿದೆ. ಆದರೆ, ಈ ಕಾರ್ಯಾಚರಣೆ ಅಪಾಯಕಾರಿ ಎನ್ನುವ ಕಾರಣಕ್ಕೆ ಸ್ಥಗಿತಗೊಳಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ದಳದ ತಂಡ ಸೋಮವಾರ ಆಗಮಿಸಿ ಪ್ರವಾಸಿಗರ ರಕ್ಷಣಾ ಕಾರ್ಯ ಕೈಗೊಳ್ಳಲಿದೆ.
Related Articles
Advertisement
ರಾಯಚೂರು: ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯ ಹಾಗೂ ಭೀಮಾ ನದಿಯ ಸನ್ನತಿ ಜಲಾಯಶದಿಂದ ನೀರು ಹರಿಸಿರುವುದು ರಾಯಚೂರು ಜಿಲ್ಲೆಯಲ್ಲಿ ಅಪಾಯ ತಂದೊಡ್ಡಿದೆ. ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜ್ ಮುಳುಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಸಂಪೂರ್ಣ ನೀರಾಗಿದೆ. ಹಳೇ ಬೂರ್ದಿಪಾಡ್ ಗ್ರಾಮ ಜಲಾವೃತಗೊಂಡಿದೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿಗಳ ಪ್ರವಾಹದಿಂದ 178 ಗ್ರಾಮಗಳು ಅಕ್ಷರಶ: ನಲುಗುತ್ತಿದ್ದು, ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಘಟಪ್ರಭಾ ನದಿ ನೀರು ಮನೆಗೆ ನುಗ್ಗಿ ಮುಧೋಳ ತಾಲೂಕು ಮಾಚಕನೂರಿನ ವಿಠ್ಠಲ ದೇವರಮನಿ (38) ಎಂಬುವರು ಮೃತಪಟ್ಟಿದ್ದಾರೆ. ಕೃಷ್ಣಾ ನದಿ ನೀರು ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಪ್ರವೇಶಿಸಿದ್ದು, ಗರ್ಭಗುಡಿಗೆ ಬೀಗ ಹಾಕಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಂಗಳಿ ಗ್ರಾಮದ ನಾರಾಯಣಪ್ಪ ಬಡಿಗೇರ ಎಂಬುವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ: ಶಿವಮೊಗ್ಗದ ಸಾಗರ ರಸ್ತೆಯ ಚೋರಡಿ ಬಳಿ ಶನಿವಾರ ನಡೆದಿದ್ದ ಅಪಘಾತದಲ್ಲಿ ಕುಮುದ್ವತಿ ನದಿಗೆ ಬಿದ್ದವರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಮತ್ತೂಬ್ಬರ ಶವ ದೊರಕಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಬಳಿ ದನ ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಭೀಮೆಯ ಪಾಲಾಗಿದ್ದಾರೆ.